ಸಂಸತ್ತಿನ ಈ ವಾರದ ಬೆಳವಣಿಗೆಗಳು...
1949ರಲ್ಲಿ ನವೆಂಬರ್ ೨೬ರ ದಿನವನ್ನು ಭಾರತೀಯ ಸಂವಿಧಾನ ದಿನವನ್ನಾಗಿ ಆಚರಿಸಲು ಶಾಸನ ಸಭೆಯು ಅಂಗೀಕರಿಸಿತ್ತು. ಇಡೀ ದೇಶಕ್ಕೆ ಇದು ಅತ್ಯಂತ ಮಹತ್ವದ ದಿನವಾಗಿದ್ದು, ಈ ವರ್ಷವೂ ಮಂಗಳವಾರ ನವೆಂಬರ್ 26 ಅನ್ನು ಸಂವಿಧಾನ ದಿನವನ್ನಾಗಿ ಆಚರಿಸಲಾಯಿತು. 1950ರ ಜನವರಿ 26 ರಂದು ಸಂವಿಧಾನವು ಜಾರಿಗೆ ಬಂದಿತು. ಇದು ಹೊಸ ಯುಗದ ಆರಂಭವನ್ನು ಸೂಚಿಸಿತ್ತು. ಈ ಸಂಭ್ರಮಾಚರಣೆಯ ಅಂಗವಾಗಿ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಉಭಯ ಸದನಗಳ ಜಂಟಿ ಸಭೆ ನಡೆಯಿತು.
ಜಂಟಿ ಸಭೆಯ ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರು ಮಾತನಾಡಿ, ಹಕ್ಕುಗಳು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಾಗಿವೆ ಮತ್ತು ನಾಗರಿಕರು ತಮ್ಮ ಕರ್ತವ್ಯಗಳ ಬಗ್ಗೆ ಜಾಗೃತರಾಗಬೇಕೆಂದು ಹೇಳಿದರು. ಜನರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿದೆ ಮತ್ತು ಆ ಮೂಲಕ ತಮ್ಮ ಹಕ್ಕುಗಳ ಪರಿಣಾಮಕಾರಿ ರಕ್ಷಣೆಯನ್ನು ಖಾತ್ರಿಪಡಿಸುವ ಸಂದರ್ಭಗಳನ್ನು ಸೃಷ್ಟಿಸಬೇಕಾಗಿದೆ ಎಂದರು.
ಅವರು ಭಾರತೀಯ ಸಂಸದೀಯ ಪ್ರಜಾಪ್ರಭುತ್ವದಲ್ಲಿ ರಾಜ್ಯಸಭೆಯ ಪಾತ್ರದ ಬಗ್ಗೆ ಒಂದು ಸಂಪುಟವನ್ನು ಬಿಡುಗಡೆ ಮಾಡಿದರು. ರಾಜ್ಯಸಭೆಯ 250ನೇ ಅಧಿವೇಶನವನ್ನು ಗುರುತಿಸುವ ಸ್ಮರಣಾರ್ಥ ನಾಣ್ಯ ಮತ್ತು ಅಂಚೆಚೀಟಿಯನ್ನೂ ಬಿಡುಗಡೆ ಮಾಡಿದರು. ಈ ಕುರಿತ ಡಿಜಿಟಲ್ ಪ್ರದರ್ಶನವನ್ನು ಉದ್ಘಾಟಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನದ ಮುಖ್ಯ ವಾಸ್ತುಶಿಲ್ಪಿ ಡಾ.ಬಿ ಆರ್ ಆರ್ ಅಂಬೇಡ್ಕರ್ ಅವರ ಆಕಾಂಕ್ಷೆಗಳನ್ನು ಅಳವಡಿಸಿಕೊಳ್ಳುವಂತೆ ಕೋರಿದರು. ಅವರು ಸಂವಿಧಾನವನ್ನು ಪವಿತ್ರ ಗ್ರಂಥ ಮತ್ತು ಮಾರ್ಗದರ್ಶನಗಳ ಬೆಳಕು ಎಂದು ಬಣ್ಣಿಸಿದರು. ಸಂವಿಧಾನದ ಶಕ್ತಿ ಮತ್ತು ಒಳಗೊಳ್ಳುವಿಕೆಯನ್ನು ಉಲ್ಲೇಖಿಸಿ ಅದು ನಾಗರಿಕರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಎತ್ತಿ ತೋರಿಸುತ್ತದೆ. ಇದುವೇ ಅದರ ವಿಶೇಷ ಅಂಶವಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯಸಭೆಯ ಸಭಾಪತಿ, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮಾತನಾಡಿ, ಕಳೆದ 70 ವರ್ಷಗಳಲ್ಲಿ ದೇಶವು ತನ್ನ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಬದ್ಧವಾಗಿರುವುದಲ್ಲದೆ ಸಂವಿಧಾನಕ್ಕೆ ಜೀವ ತುಂಬುವಲ್ಲಿ ಮತ್ತು ಪ್ರಜಾಪ್ರಭುತ್ವವನ್ನು ಪುರಸ್ಕರಿಸುವುದರಲ್ಲಿ ಅತೀವ ಪ್ರಗತಿಯನ್ನು ಸಾಧಿಸಿದೆ ಎಂದರು.
ಜಮ್ಮು ಮತ್ತು ಕಾಶ್ಮೀರವನ್ನು ಮರು ಸಂಘಟಿಸಿದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ಮಾಡುವ ಪಾಕಿಸ್ತಾನದ ಪ್ರಯತ್ನಗಳನ್ನು ಭಾರತ ವಿಫಲಗೊಳಿಸಲಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದರು. ವಿಶ್ವಸಂಸ್ಥೆ, ಮಾನವ ಹಕ್ಕುಗಳ ಮಂಡಳಿ ಮತ್ತು ಇಸ್ಲಾಮಿಕ್ ಸಹಕಾರ ಸಂಘಟನೆಯಂತಹ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಜಮ್ಮು ಮತ್ತು ಕಾಶ್ಮೀರ ವಿಷಯದ ಕುರಿತು ಇಸ್ಲಾಮಾಬಾದ್ ಪದೇ ಪದೇ ಭಾರತದ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರವನ್ನು ನಡೆಸುತ್ತಿದೆ ಎಂದು ಅವರು ಹೇಳಿದರು.
ಆದಾಗ್ಯೂ, ಇಸ್ಲಾಮಾಬಾದ್‌ನ ಎಲ್ಲಾ ಪ್ರಯತ್ನಗಳನ್ನು ನವದೆಹಲಿ ಸಂಪೂರ್ಣವಾಗಿ ವಿಫಲಗೊಳಿಸಿದೆ ಎಂದ ಅವರು ಪಾಕಿಸ್ತಾನವು ತನ್ನ ಭೂಪ್ರದೇಶವನ್ನು ಯಾವುದೇ ರೀತಿಯಲ್ಲಿ ಭಯೋತ್ಪಾದನೆಗೆ ಬಳಸಲು ಅನುಮತಿಸಬಾರದು ಎಂದು ದೇಶಗಳು ಕೇಳಿಕೊಂಡಿರುವ ಬಗ್ಗೆ ವಿವರಿಸಿದರು.
ಹಿಂದೆ ಭಾರತ ವೈಮಾನಿಕ ದಾಳಿ ಮಾಡಿದ್ದ ಬಾಲಾಕೋಟ್ ಭಾಗದಲ್ಲಿ ಭಯೋತ್ಪಾದನೆಯನ್ನು ಚುರುಕುಗೊಳಿಸಲು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ಪ್ರಯತ್ನಗಳನ್ನು ನಡೆಸುತ್ತಿವೆ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಬುಧವಾರ ರಾಜ್ಯಸಭೆಗೆ ತಿಳಿಸಿದರು. ಬಾಲಕೋಟ್‌ನಲ್ಲಿರುವ ತನ್ನ ಶಿಬಿರವನ್ನು ಪುನಃ ಸಕ್ರಿಯಗೊಳಿಸಲು ಮತ್ತು ಭಾರತದ ವಿರುದ್ಧ ಜಿಹಾದಿ ಚಟುವಟಿಕೆಗಳನ್ನು ಪುನರಾರಂಭಿಸಲು ಭಯೋತ್ಪಾದಕ ಸಂಘಟನೆಗಳು ಪಿತೂರಿ ನಡೆಸಿವೆ ಎಂದು ಅವರು ಹೇಳಿದರು.
ದೇಶದ ಆರ್ಥಿಕತೆಯು ಯಾವುದೇ ಹಿಂಜರಿತವನ್ನು ಎದುರಿಸುತ್ತಿಲ್ಲ ಮತ್ತು ಅದನ್ನು ಮತ್ತಷ್ಟು ಸುಧಾರಿಸಲು ಸರ್ಕಾರ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಕುರಿತು ರಾಜ್ಯಸಭೆಯಲ್ಲಿ ಅಲ್ಪಾವಧಿಯ ಚರ್ಚೆಗೆ ಉತ್ತರಿಸಿದ ಅವರು, ಆರ್ಥಿಕತೆಯನ್ನು ವೃದ್ಧಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ 27 ಯುರೋಪಿಯನ್ ಪಾರ್ಲಿಮೆಂಟ್ (ಎಂಇಪಿ) ಸದಸ್ಯರ ಗುಂಪು ಅಕ್ಟೋಬರ್ 28ರಿಂದ 2019ರ ನವೆಂಬರ್ 1 ರವರೆಗೆ ಭಾರತ ಪ್ರವಾಸ ಕೈಗೊಂಡಿದೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್ ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಿದರು. ದೆಹಲಿ ಮೂಲದ ಥಿಂಕ್ ಟ್ಯಾಂಕ್‌ನ ಇಂಟರ್ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ನಾನ್ ಅಲೈನ್ಡ್ ಸ್ಟಡೀಸ್‌ನ ಆಹ್ವಾನದ ಮೇರೆಗೆ ಅವರು ಪ್ರವಾಸ ಕೈಗೊಂಡಿದ್ದಾರೆ. ಭಯೋತ್ಪಾದನೆ ಭಾರತದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರು ಕಾಶ್ಮೀರಕ್ಕೆ ಭೇಟಿ ನೀಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಆದ್ದರಿಂದ ವಿದೇಶಿ ಗಣ್ಯರಿಗೆ ಈ ಹಿಂದೆ ಮಾಡಿಕೊಟ್ಟಿದ್ದಂತಹ ವ್ಯವಸ್ಥೆಗಳನ್ನು ಈ ಅತಿಥಿಗಳಿಗೂ ಮಾಡಿಕೊಡಲಾಯಿತು. ಭೇಟಿಯ ಸಮಯದಲ್ಲಿ, ಎಂಇಪಿಗಳಿಗೆ ಭಯೋತ್ಪಾದನೆ ಭಾರತಕ್ಕೆ ವಿಶೇಷವಾಗಿ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಹೇಗೆ ಅಪಾಯವನ್ನುಂಟುಮಾಡುತ್ತಿದೆ ಎಂಬುದು ಗಣ್ಯರ ಅರಿವಿಗೆ ಬಂದಿದೆ ಎಂದು ಸಚಿವರು ಹೇಳಿದರು. . ಈ ರೀತಿಯ ಭೇಟಿಗಳು ಆಳವಾದ ಜನರ ಸಂಪರ್ಕವನ್ನು ಉತ್ತೇಜಿಸುವಲ್ಲಿ, ಭಾರತದ ವಿದೇಶಾಂಗ ನೀತಿ ಉದ್ದೇಶಗಳಿಗೆ ಅನುಗುಣವಾಗಿರುತ್ತವೆ ಮತ್ತು ಅಂತಿಮವಾಗಿ ನವದೆಹಲಿ ಇತರ ದೇಶಗಳೊಂದಿಗೆ ಅನುಸರಿಸುವ ಸಂಬಂಧವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲೇಖನ : ವಿ. ಮೋಹನ್ ರಾವ್, ಪತ್ರಕರ್ತರು
Comments
Post a Comment