ನೆರೆಯವರಿಗೆ ಮೊದಲ ಆದ್ಯತೆ ಎಂಬ ನೀತಿ ಪುನರುಚ್ಛರಿಸಿದ ಭಾರತ

ಭಾರತ 'ನೆರೆಹೊರೆಯವರಿಗೆ ಪ್ರಥಮ ಆದ್ಯತೆ' ಎಂಬ ನೀತಿಗೆ ಬದ್ಧವಾಗಿದೆ. 2014ರ ಮೇ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಅನೇಕ ಸಂದರ್ಭಗಳಲ್ಲಿ ಪುನರುಚ್ಚರಿಸಿದ್ದಾರೆ. 2014ರ ಮೇ 26ರಂದು ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸೌತ್ ಏಷ್ಯನ್ ಅಸೋಸಿಯೇಷನ್ ಫಾರ್ ರೀಜನಲ್ ಕೋಅಪರೇಷನ್ (ಸಾರ್ಕ್)ನ ಎಲ್ಲಾ ದೇಶಗಳ/ಸರ್ಕಾರದ ಮುಖ್ಯಸ್ಥರೆಲ್ಲರನ್ನು ಆಹ್ವಾನಿಸಲಾಗಿತ್ತು. ಅದೇ ವರ್ಷದಲ್ಲಿ ಅವರು ಭೂತಾನ್ ಮೂಲಕ ತಮ್ಮ ಮೊದಲ ವಿದೇಶ ಪ್ರವಾಸವನ್ನು ಆರಂಭಿಸಿದರು. ಆ ವೇಳೆ ಬಡತನ, ಅಪೌಷ್ಟಿಕತೆ ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ದಕ್ಷಿಣ ಏಷ್ಯಾದ ನೆರೆಹೊರೆಯ‌ ದೇಶಗಳು ಜಂಟಿ ಪ್ರಯತ್ನ ಕೈಗೊಳ್ಳಬೇಕೆಂದು ಮೋದಿ ಕರೆ ನೀಡಿದ್ದರು. ಭಾರತವು ತನ್ನ ಪರಿಣತಿಯನ್ನು ತನ್ನ ನೆರೆಹೊರೆಯ ದೇಶಗಳ ಯೋಗಕ್ಷೇಮಕ್ಕಾಗಿ ಹಂಚಿಕೊಳ್ಳಲು ಸಿದ್ಧವಿದೆ ಎಂದು ಹೇಳಿದ್ದರು.

2020ರ ಹೊಸ ವರ್ಷದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭೂತಾನ್ ರಾಜ ಜಿಗ್ಮೆ ಖೇಸರ್ ನಂಗೆಯೆಲ್ ವಾಂಗ್‌ಚಕ್, ಭೂತಾನ್ ಪ್ರಧಾನಿ ಡಾ. ಲೋಟೇ ತ್ಸೆರಿಂಗ್, ಶ್ರೀಲಂಕಾ ಅಧ್ಯಕ್ಷ ಗೊತಾಬಯ ರಾಜಪಕ್ಸೆ, ಶ್ರೀಲಂಕಾ ಪ್ರಧಾನಿ ಮಹೀಂದ್ರ ರಾಜಪಕ್ಸೆ, ಮಾಲ್ಡೀವ್ಸ್ ಅಧ್ಯಕ್ಷರಾದ ಇಬ್ರಾಹಿಂ ಮೊಹಮ್ಮದ್ ಸೊಲಿಹ್, ಬಾಂಗ್ಲಾದೇಶದ ಪ್ರಧಾನಿ ಶ್ರೀಮತಿ ಶೇಖ್ ಹಸೀನಾ ಮತ್ತು ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ ಶುಭಾಶಯ ವಿನಿಮಯ ಮಾಡಿಕೊಂಡರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ವೈಯಕ್ತಿಕವಾಗಿ ಅಲ್ಲದೆ ಭಾರತದ ಜನರ ಪರವಾಗಿ ಕೂಡ ನೆರೆಹೊರೆಯ ದೇಶಗಳ ಮುಖಂಡರಿಗೆ ಹೊಸ ವರ್ಷದ ಶುಭಾಶಯಗಳು ತಿಳಿಸಿದರು. ಇದೇ ವೇಳೆ ಅವರು ಭಾರತವು 'ನೆರೆಹೊರೆಯ ದೇಶಗಳಿಗೆ ಮೊದಲ ಆದ್ಯತೆ’ ಎಂಬ ನೀತಿಗೆ ಬದ್ಧವಾಗಿದೆ. ಹಾಗೂ ಈ ಪ್ರದೇಶದ ಎಲ್ಲಾ ಸ್ನೇಹರಾಷ್ಟ್ರಗಳ ಶಾಂತಿ, ಸುರಕ್ಷಣೆ, ಸಮೃದ್ಧಿ ಮತ್ತು ಅಭಿವೃದ್ಧಿಗೆ ಸಹಕರಿಸುವುದಾಗಿ ಒತ್ತಿ ಹೇಳಿದರು.

ಭೂತಾನ್ ರಾಜರ ಜೊತೆ ನಡೆಸಿದ ಸಂಭಾಷಣೆ ವೇಳೆ ಪ್ರಧಾನಿ ಮೋದಿ, ಭಾರತ ಮತ್ತು ಭೂತಾನ್ ನಡುವಿನ ವಿಶೇಷ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಹಿನ್ನೆಲೆಯಲ್ಲಿ ಕಳೆದ ವರ್ಷ ಆಗಿರುವ ಪ್ರಮುಖ ಬೆಳವಣಿಗೆಗಳನ್ನು ಉಲ್ಲೇಖಿಸಿದರು. ತಾವು ಭೂತಾನ್ ಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಜನರು ತೋರಿದ ಪ್ರೀತಿ ಮತ್ತು ವಾತ್ಸಲ್ಯವನ್ನು ನೆನಪಿಸಿಕೊಂಡರು. ಉಭಯ ದೇಶಗಳ ನಡುವೆ ಯುವ ವಿನಿಮಯವನ್ನು ಹೆಚ್ಚಿಸುವ ಅಗತ್ಯತೆ ಬಗ್ಗೆಯೂ ಅವರು ಒತ್ತಿ ಹೇಳಿದರು. ಅಲ್ಲದೆ ಮುಂಬರುವ ಭೂತಾನ್ ರಾಜ ಭಾರತಕ್ಕೆ ಭೇಟಿ ನೀಡುವುದನ್ನು ಎದುರು ನೋಡುತ್ತಿದ್ದೇನೆ ಎಂದರು.

ಶ್ರೀಲಂಕಾದ ಅಧ್ಯಕ್ಷ ಶ್ರೀ ಗೋಟಬಯಾ ರಾಜಪಕ್ಸೆ ಅವರು ಪ್ರಧಾನಿ ಮೋದಿಯವರ ಶುಭಾಶಯಗಳನ್ನು ಪ್ರೀತಿಯಿಂದ ಸ್ವೀಕರಿಸಿದರು. ಹಾಗೂ 2020ರಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಸ್ನೇಹ ಸಂಬಂಧಗಳನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ಎರಡೂ ದೇಶಗಳ ನಾಯಕರು ಪುನರುಚ್ಚರಿಸಿದರು.

ಶ್ರೀಲಂಕಾದೊಂದಿಗೆ ನಿಕಟವಾದ ಮತ್ತು ವ್ಯಾಪಕವಾದ ಸಹಕಾರವನ್ನು ಇನ್ನಷ್ಟು ವಿಸ್ತರಿಸಲು ಭಾರತ ಬದ್ಧವಾಗಿದೆ ಎಂದು ಶ್ರೀಲಂಕಾದ ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಸೆ ಅವರ ಜೊತೆ ಮಾತನಾಡಿದ ಪ್ರಧಾನಿ ಮೋದಿ ಪುನರುಚ್ಚರಿಸಿದರು. ಈ ವೇಳೆ ಪ್ರಧಾನಿ ರಾಜಪಕ್ಸೆ ವ್ಯಕ್ತಪಡಿಸಿದ ಶುಭಾಶಯಗಳನ್ನು ಪ್ರೀತಿಯಿಂದ ಸ್ವೀಕರಿಸಿದರು. ಎರಡು ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಹೆಚ್ಚಿಸುವ ಅವಿರತವಾದ ಆಸೆಯನ್ನು ತೋಡಿಕೊಂಡರು.

ಅಭಿವೃದ್ಧಿಗಾಗಿ ನಡೆಸುತ್ತಿರುವ ಎಲ್ಲಾ ರೀತಿಯ ಪ್ರಯತ್ನಗಳಲ್ಲಿ ಮಾಲ್ಡೀವ್ಸ್ ಅಧ್ಯಕ್ಷರು ಹಾಗೂ ಮಾಲ್ಡೀವ್ಸ್ ಜನರು ಯಶಸ್ವಿಯಾಗಬೇಕೆಂದು ಪ್ರಧಾನಿ ಮೋದಿ ಶುಭ ಹಾರೈಸಿದರು. ಅಧ್ಯಕ್ಷ ಸೋಲಿಹ್ ಅವರು ಮೋದಿಯವರ ಶುಭಾಶಯಗಳನ್ನು ಪ್ರೀತಿಯಿಂದ ಸ್ವೀಕರಿಸಿದರು. ಅಲ್ಲದೆ ಭಾರತ ಮತ್ತು‌ ಮಾಲ್ಡೀವ್ಸ್ ದೇಶಗಳ ನಡುವೆ ಇರುವ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಿಕೊಳ್ಳುವ ಮೂಲಕ ಒಟ್ಟಾಗಿ ಕೆಲಸ ಮಾಡುವ ಹಾಗೂ ಹೊಸ ಕ್ಷೇತ್ರಗಳನ್ನು ಅನ್ವೇಷಿಸಿಕೊಳ್ಳುವ ಮೂಲಕ ಭಾರತದೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದರು.

ಮುಂದಿನ ಮೂರು ವರ್ಷಗಳ ಕಾಲ ಅವಾಮಿ ಲೀಗ್ ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವ ಪ್ರಧಾನಿ ಶೇಖ್ ಹಸೀನಾ ಅವರನ್ನು ಭಾರತೀಯ ಪ್ರಧಾನಿ ಮೋದಿ ಅಭಿನಂದಿಸಿದರು. ಬಾಂಗ್ಲಾದೇಶದ ಮಾಜಿ ಹೈಕಮಿಷನರ್ ಸೈಯದ್ ಮುವಾಝೆಮ್ ಅಲಿ ಅವರ ಅಕಾಲಿಕ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು. ಇದೇ ವೇಳೆ 2019ರಲ್ಲಿ ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಸಂಬಂಧಗಳಲ್ಲಿ ಆಗಿರುವ ಪ್ರಗತಿ ಬಗ್ಗೆ ಮೋದಿ ಉಲ್ಲೇಖಿಸಿದರು. ಬಾಂಗ್ಬಂಧು ಜನ್ಮ ಶತಾಬ್ದಿ ಹಾಗೂ ಬಾಂಗ್ಲಾದೇಶದ ವಿಮೋಚನೆಯಾಗಿ 50 ವರ್ಷಗಳಾದ ಹಿನ್ನೆಲೆಯಲ್ಲಿ ಎರಡೂ ದೇಶಗಳ ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯು ಇನ್ನಷ್ಟು ನಿಕಟವಾಗಿದೆ. ಭಾರತದ ಮತ್ತಷ್ಟು ಪ್ರಗತಿಗೆ ಪ್ರಮುಖ ಮೈಲಿಗಲ್ಲುಗಳನ್ನು ಒದಗಿಸಿದೆ ಎಂದು ಅವರು ಹೇಳಿದರು.

2019ರಲ್ಲಿ ಭಾರತ‌ ಹಾಗೂ ನೇಪಾಳ ಸಂಬಂಧಗಳ ನಡುವೆ ಹಲವಾರು ಯೋಜನೆಗಳು ಪೂರ್ಣಗೊಂಡಿದ್ದು ಈ ಬೆಳವಣಿಗೆಯ ಬಗ್ಗೆ ನೇಪಾಳದ ಪ್ರತಿರೂಪವಾದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರೊಂದಿಗೆ ಮಾತನಾಡಿದ ಭಾರತದ ಪ್ರಧಾನಿ ಮೋದಿ ತೃಪ್ತಿ ವ್ಯಕ್ತಪಡಿಸಿದರು.‌ ಮೋತಿಹಾರಿ (ಭಾರತ) ಹಾಗೂ ಅಮ್ಲೆಖ್‌ಗುಂಜ್ (ನೇಪಾಳ) ಪೆಟ್ರೋಲಿಯಂ ಉತ್ಪನ್ನಗಳ ಪೈಪ್‌ಲೈನ್ ಅನ್ನು ದಾಖಲೆ ಸಮಯದಲ್ಲಿ ಪೂರ್ಣಗೊಳಿಸುವುದನ್ನು ಮೋದಿ ವಿಶೇಷವಾಗಿ ಉಲ್ಲೇಖಿಸಿದರು. ಬಿರಾಟ್‌ನಗರದಲ್ಲಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಮತ್ತು ನೇಪಾಳದ ವಸತಿ ಪುನರ್ನಿರ್ಮಾಣ ಯೋಜನೆಯನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಲು ಎರಡೂ ದೇಶದ ನಾಯಕರು ಒಪ್ಪಿಗೆ ಸೂಚಿಸಿದರು.

ಸ್ಕ್ರಿಪ್ಟ್: ಪದಮ್ ಸಿಂಗ್, ಸುದ್ದಿ ವಿಶ್ಲೇಷಕ, ಎಐಆರ್

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ