ಕೊರೋನವೈರಸ್ ಸಾಂಕ್ರಾಮಿಕದಿಂದ ಬಳಲುತ್ತಿರುವ ಪ್ರಪಂಚ

ಮನುಷ್ಯರಲ್ಲಿ ಈ ಹಿಂದೆ ಗುರುತಿಸಲ್ಪಡದೇ ಇದ್ದ ಹೊಸ ಕೊರೊನಾವೈರಸ್ ಜಗತ್ತನ್ನು ವ್ಯಾಪಿಸಿದೆ. ಕೋವಿಡ್ -19 ಎಂಬ ಉಸಿರಾಟದ ಸಮಸ್ಯೆ ಉಂಟುಮಾಡುವ ವೈರಸ್‌ 81,000ಕ್ಕೂ ಹೆಚ್ಚು ಜನರನ್ನು ಬಾಧಿಸುತ್ತಿದೆ. ಸರಿ ಸುಮಾರು 3,000 ಜನ ಈಗಾಗಲೇ ಮೃತಪಟ್ಟಿದ್ದಾರೆ. ಈ ಪೈಕಿ ಅಪಾಯಕಾರಿ ವೈರಲ್ ದಿಢೀರನೇ ಕಾಣಿಸಿಕೊಂಡ ಚೀನಾದಲ್ಲಿ ಪ್ರತಿಶತ 96.5ರಷ್ಟು ಅಂದರೆ 2,800 ಸಾವುಗಳು ಸಂಭವಿಸಿವೆ.

ಕೊರೊನಾವೈರಸ್ ಸೋಂಕು ಚೀನಾದ ಹೊರಗಡೆ ಹರಡಿರುವುದಕ್ಕಿಂತ ಹೆಚ್ಚಾಗಿ ದೇಶದೊಳಗಡೆ ವ್ಯಾಪಿಸಿದೆ. ಇದಲ್ಲದೆ ಯುರೋಪ್, ಮಧ್ಯಪ್ರಾಚ್ಯ, ಯುಎಸ್ ಮತ್ತು ಏಷ್ಯಾದಲ್ಲಿ ಉಲ್ಬಣಗೊಂಡಿದೆ. ಈ ಪೈಕಿ 51 ದೇಶಗಳಲ್ಲಿ ಸೋಂಕು ಕಾಣಿಸಿಕೊಂಡಿರುವ ವ್ಯಕ್ತಿ ಚೀನಾಕ್ಕೆ ಪ್ರಯಾಣ ಮಾಡಿದ್ದ ಇತಿಹಾಸ ಕಂಡುಬಂದಿಲ್ಲದಿರುವುದು ಅಧ್ಯಯನಗಳಿಂದ ಸ್ಪಷ್ಟವಾಗಿ ದೃಢಪಟ್ಟಿದೆ. ಲ್ಯಾಟಿನ್ ಅಮೆರಿಕದಲ್ಲೂ ಈ ರೀತಿಯಾಗಿದ್ದು ಬ್ರೆಜಿಲ್ ಮೊದಲ ಪ್ರಕರಣವನ್ನು ದೃಢಪಡಿಸಿದೆ. ಚೀನಾದ ಹೊರಗೆ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿರುವ ಮೂರು ಪ್ರಮುಖ ಸ್ಥಳಗಳ ಪೈಕಿ ಇರಾನ್‌ನಲ್ಲಿ 245 ಜನರಿಗೆ ಸೋಂಕು ತಗುಲಿದ್ದು 26 ಜನ ಸಾವಿಗೀಡಾಗಿದ್ದಾರೆ. ಇರಾನ್‌ ಉಪಾಧ್ಯಕ್ಷ ಮಸೌಮೆಹ್ ಎಬ್ಟೆಕರ್ ಮತ್ತು ಉಪ ಆರೋಗ್ಯ ಸಚಿವ ಇರಾಜ್ ಹರಿರ್ಚಿ ಕೂಡ ಸೋಂಕಿಗೆ ಒಳಗಾಗಿದ್ದು, ಅವರೀಗ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.
ಇಟಲಿಯಾದ್ಯಂತ ಸುಮಾರು 400 ಜನರು ಈ ಸೋಂಕಿಗೆ ತುತ್ತಾಗಿದ್ದಾರೆಂದು ವರದಿಯಾಗಿದೆ, ಅದರಲ್ಲಿ 12 ಜನರು ಸಾವನ್ನಪ್ಪಿದ್ದಾರೆ. ಇದು ಯುರೋಪಿನಲ್ಲಿ ಇಲ್ಲಿಯವರೆಗೆ ದಾಖಲಾಗಿರುವ ಅತ್ಯಂತ ಕೆಟ್ಟ ಸೋಂಕಾಗಿದೆ.

ಇತ್ತೀಚೆಗೆ ಭಾರತದಲ್ಲಿ ಕೋವಿಡ್ -19 ಸೋಂಕಿದೆ ಎಂದು ಅನುಮಾನ ಬಂದ ಹಿನ್ನೆಲೆಯಲ್ಲಿ ಮೂವರು ವಿದ್ಯಾರ್ಥಿಗಳನ್ನು ಪರೀಕ್ಷೆ ಮಾಡಲಾಗಿದ್ದು ಅವರುಗಳು ರೋಗಮುಕ್ತ ಎಂದು ಘೋಷಿಸಿರುವುದರಿಂದ ಭಾರತವು ವೈರಸ್‌ನಿಂದ ಮುಕ್ತವಾಗಿದೆ. ಈ ನಡುವೆ ಕ್ರೂಸ್ ಹಡಗಿನಲ್ಲಿ ಸಮುದ್ರಯಾನ ಮಾಡುತ್ತಿದ್ದ ಭಾರತೀಯ ಮೂಲದ ಕೆಲವರಿಗೆ ಸೋಂಕು ತಗುಲಿರಬಹುದೆಂದು ಜಪಾನ್‌ನಿಂದ ಸ್ವದೇಶಕ್ಕೆ ಕರೆತರಲಾಗಿದ್ದು ಅವರ ಮೇಲೆ ವೈದ್ಯಕೀಯ ನಿಗಾ ಇಡಲಾಗಿದೆ. ಭಾರತವು 15 ಟನ್ ವೈದ್ಯಕೀಯ ಸಾಮಗ್ರಿಗಳನ್ನು ವುಹಾನ್‌ಗೆ ವಿಮಾನದ ಮೂಲಕ ಕಳುಹಿಸಿಕೊಟ್ಟಿದೆ. ನವದೆಹಲಿಯು ಚೀನಾದ ನಗರಗಳಲ್ಲಿದ್ದ ಭಾರತೀಯರನ್ನು ಮತ್ತು ವಿದೇಶಿ ಪ್ರಜೆಗಳನ್ನು ಅಲ್ಲಿಂದ ಸ್ಥಳಾಂತರಿಸಿದೆ. ಭಾರತವು ಮುನ್ನೆಚ್ಚರಿಕೆ ಕ್ರಮವಾಗಿ ಚೀನಾ, ಹಾಂಗ್ ಕಾಂಗ್ ಮತ್ತು ಇರಾನ್‌ಗೆ ಹೋಗುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ.

ಈ ವೈರಸ್ ಕಾಡು ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದೆ ಎನ್ನಲಾಗಿದ್ದು, ಇದನ್ನು 2019ರ ಕೊನೆಯಲ್ಲಿ ವುಹಾನ್ ನಗರದ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಆರೋಗ್ಯ ತಜ್ಞರು ಈ ವೈರಸ್ ಬಾವಲಿಗಳಲ್ಲಿ ಹುಟ್ಟಿಕೊಂಡಿರಬಹುದು ನಂತರ ಇತರೆ ಕೆಲವು ಪ್ರಾಣಿಗಳ ಮೂಲಕ ಮಾನವರಿಗೆ ತಲುಪಿರಬಹುದು ಎಂದಿದ್ದಾರೆ. ಡಿಸೆಂಬರ್ ಅಂತ್ಯದಲ್ಲಿ ವುಹಾನ್‌ನಲ್ಲಿ ಹಲವಾರು ನ್ಯುಮೋನಿಯಾ ಪ್ರಕರಣಗಳು ಕಂಡುಬಂದ ಕುರಿತು ಡಬ್ಲ್ಯುಎಚ್‌ಒ ಎಚ್ಚರಿಕೆ ನೀಡಿತ್ತು. ಇದಾದ ಒಂದು ವಾರದ ನಂತರ ಚೀನಾದ ಅಧಿಕಾರಿಗಳು ಹೊಸ ವೈರಸ್ ಅನ್ನು ಗುರುತಿಸಲಾಗಿದೆ ಎಂದು ದೃಢಪಡಿಸಿದರು.

ಕೊರೊನಾವೈರಸ್ಸುಗಳು, ವೈರಸ್ಸುಗಳ ಒಂದು ದೊಡ್ಡ ಕುಟುಂಬವೇ ಆಗಿದ್ದು ಇದರ ಪರಿಣಾಮಗಳು ಸಾಮಾನ್ಯ ಶೀತವನ್ನು ಉಂಟುಮಾಡುವುದರಿಂದ ಹಿಡಿದು ತೀವ್ರ ಉಸಿರಾಟದ ತೊಂದರೆಯಾಗುವಂತಹ ಸೆವೆರಿ ಅಕ್ಯೂಟ್ ರೆಸ್ಪರೇಟರಿ ಸಿಂಡ್ರೋಮ್ (ಎಸ್ ಎ‌ ಆರ್ ಎಸ್) ಕಾಯಿಲೆಗಳ ಸೃಷ್ಟಿಗೂ ಕಾರಣವಾಗುತ್ತವೆ. ಉಸಿರಾಟದ ಉಬ್ಬರ, ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಕರೋನವೈರಸ್ ಸೋಂಕಿನ ಸಾಮಾನ್ಯ ಲಕ್ಷಣಗಳಾಗಿರುತ್ತವೆ. ನ್ಯುಮೋನಿಯಾ ಸೋಂಕು ಹೆಚ್ಚಾದರೆ ತೀವ್ರವಾದ ಉಸಿರಾಟದ ಸಮಸ್ಯೆ, ಮೂತ್ರಪಿಂಡ ವೈಫಲ್ಯ ಆಗಲಿದೆ ಮತ್ತು ಸಾವಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಇದರ ಮೇಲ್ಮೈ ಕಿರೀಟದಂತೆ ಮುಂಚಾಚಿಕೊಂಡಿರುವುದರಿಂದ ಇದನ್ನು ಕರೋನವೈರಸ್ ಎಂದು ಕರೆಯಲಾಗುತ್ತದೆ.

ಭಯಭೀತಗೊಂಡಿರುವ ದೇಶಗಳು ಕರೋನವೈರಸ್ ಹರಡುವಿಕೆ ತಡೆಯುವ ಪ್ರಯತ್ನಗಳನ್ನು ಚುರುಕುಗೊಳಿಸಿವೆ. ಜಪಾನ್‌ನಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಸೌದಿ ಅರೇಬಿಯಾವು ಮೆಕ್ಕಾ ಯಾತ್ರಾ ವೀಸಾವನ್ನು ಸ್ಥಗಿತಗೊಳಿಸಿದೆ.

ಸಾಂಕ್ರಾಮಿಕ ರೋಗದ ಭಯ ಬೆಳೆಯುತ್ತಿದೆ. ಜಾಗತಿಕ ಷೇರು ಮಾರುಕಟ್ಟೆಗಳು ಕುಸಿದಿವೆ. ಏಕಾಏಕಿ ಹೀಗಾದುದರಿಂದ ಸಂಪೂರ್ಣ ಆರ್ಥಿಕ ಪರಿಣಾಮ ಏನಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಪೈಕಿ ಚೀನಾ ಪ್ರಮುಖ ದೇಶ‌. ಕಳೆದ ವರ್ಷ ಜಾಗತಿಕ ಜಿಡಿಪಿಯಲ್ಲಿ ಬೀಜಿಂಗ್‌ ಪಾಲು ಮೂರನೇ ಒಂದು ಭಾಗದಷ್ಟಿತ್ತು. ಕರೋನವೈರಸ್ ಏಕಾಏಕಿ ಅಕ್ರಮಿಸಿದ್ದರಿಂದ ವಿಶ್ವ ಆರ್ಥಿಕತೆಯು 1.1 ಟ್ರಿಲಿಯನ್ ಯೂಎಸ್ ಡಾಲರ್ ನಷ್ಟ ಅನುಭವಿಸಬಹುದು ಎಂದು ಅಂದಾಜು ಮಾಡಲಾಗುತ್ತಿದೆ.

ಮಾರಕ ಸಾಂಕ್ರಾಮಿಕದ ಹರಡುವಿಕೆಯು ಜಾಗತಿಕ ಪೂರೈಕೆ ಸರಪಳಿಗೆ ಅಡ್ಡಿಪಡಿಸುವ ಭೀತಿಯನ್ನು ಹೆಚ್ಚಿಸಿದೆ. ಚೀನಾವು ಅಂತಿಮ ಉತ್ಪಾದನೆ ಮತ್ತು ಪೂರೈಕೆ ಸರಪಳಿಗೆ ಬಳಸುವ ಭಾಗಗಳ ಮಧ್ಯಂತರ ಉತ್ಪಾದಕ ಮತ್ತು ಪೂರೈಕೆದಾರ ದೇಶವಾಗಿದೆ.

ಚೀನಾವು ಪ್ರತಿಜೀವಕಗಳು, ಮಧುಮೇಹ, ನೋವು ನಿವಾರಕಗಳು ಮತ್ತು ಆಂಟಿ-ರೆಟ್ರೊವೈರಲ್‌ಗಳಿಗಾಗಿ ವಿಶ್ವಾದ್ಯಂತ ಬಳಸುವ ಪ್ರಮುಖ ಔಷಧಿ ಪದಾರ್ಥಗಳನ್ನು ಉತ್ಪಾದಿಸುತ್ತದೆ. ಈಗ ಇವೆಲ್ಲವೂ ಪೂರೈಕೆ ಅಡೆತಡೆಗಳನ್ನು ಅನುಭವಿಸುತ್ತಿವೆ. ವಿಶ್ವದ ಅತಿದೊಡ್ಡ ಜೆನೆರಿಕ್ ಔಷಧ ಪೂರೈಕೆದಾರರಲ್ಲಿ ಒಂದಾಗಿರುವ ಭಾರತವು ಸಕ್ರಿಯ ಔಷಧೀಯ ಪದಾರ್ಥಗಳಿಗಾಗಿ (ಎಪಿಐ) ಚೀನಾವನ್ನು ಹೆಚ್ಚು ಅವಲಂಬಿಸಿದೆ‌. ಇದು ಔಷಧಿಗಳಲ್ಲಿ ಒಳಗೊಂಡಿರುವ ಸಕ್ರಿಯ ಘಟಕಾಂಶವಾಗಿದೆ.

ಭಾರತವು ಕರೋನವೈರಸ್ ಮುಕ್ತವಾಗಿದ್ದರೂ ಸಹ ಚೀನಾದೊಂದಿಗೆ ಯಾವುದೇ ಸ್ಪಷ್ಟ ಸಂಪರ್ಕವಿಲ್ಲದ‌ ದೇಶಗಳೇ ಭಯಭೀತಗೊಂಡಿರುವುದರಿಂದ ಭಾರತದಲ್ಲೂ ಹೆಚ್ಚಿನ ಆತಂಕವಿದೆ. ಚೀನಾ ಸೋಂಕಿನ ಲಕ್ಷಣರಹಿತ ಪ್ರಸರಣವನ್ನು ದೃಢಪಡಿಸುವುದರೊಂದಿಗೆ; ಸೋಂಕು-ನಿಯಂತ್ರಣ ಶಿಷ್ಟಾಚಾರಗಳು ಸಂಕೀರ್ಣವಾಗಿವೆ.

ಎರಡನೇ ಅತಿದೊಡ್ಡ ಜಾಗತಿಕ ಜನಸಂಖ್ಯೆಯನ್ನು ಹೊಂದಿರುವ ಭಾರತ, ಸೋಂಕಿತರನ್ನು ತಡೆಯಲು ಥರ್ಮಲ್ ಸ್ಕ್ಯಾನರ್‌ಗಳನ್ನು ಮತ್ತು ಎಲ್ಲಾ ವೈದ್ಯಕೀಯ ಬಂದರುಗಳಲ್ಲಿ ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿಯನ್ನು ಅಳವಡಿಸುವ ಮೂಲಕ ಅಗತ್ಯ ಕ್ರಮಗಳನ್ನು ಬಿಗಿಗೊಳಿಸಿದೆ. ಕಟ್ಟುನಿಟ್ಟಿನ ಕಣ್ಗಾವಲು ಮತ್ತು ಧಾರಕ ಕಾರ್ಯವಿಧಾನಗಳನ್ನು ಸಹ ಜಾರಿಗೆ ತರಲಾಗಿದೆ. ನೈರ್ಮಲ್ಯದ ಬಗ್ಗೆ ನಿರಂತರ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಲಾಗುತ್ತಿದ್ದು, ಇದು ವೈರಸ್‌ನ ಹರಡುವಿಕೆಯನ್ನು ಬಹುಮಟ್ಟಿಗೆ ತಡೆಗಟ್ಟಲಿದೆ.

ಸ್ಕ್ರಿಪ್ಟ್: ಕೆ.ವಿ. ವೆಂಕಟಸುಬ್ರಹ್ಮಣ್ಯನ್, ಹಿರಿಯ ಪತ್ರಕರ್ತ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ