ಅಭಿವೃದ್ಧಿಗೆ ಪ್ರಧಾನಿ ಒತ್ತು


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಎರಡನೇ ಅವಧಿಯ ಅಧಿಕಾರಾವಧಿಯಲ್ಲಿ, ಬಡವರ ಕಲ್ಯಾಣ ಮತ್ತು ಆಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಅವರ ಸರ್ಕಾರದ ಅವಳಿ ಕಾರ್ಯಸೂಚಿಯಾಗಿದೆ ಎಂದು ತಿಳಿಸಿದ್ದಾರೆ. ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾಡಿದ ಭಾಷಣಕ್ಕೆ ಧನ್ಯವಾದಗಳನ್ನು ಸಲ್ಲಿಸುವ ವೇಳೆ ಪ್ರಧಾನಿ ಈ ಕುರಿತು ಮಾತನಾಡಿದರು. ಮೋದಿ ಅವರು ದೇಶ ಮತ್ತು ಜನರ ಹಿತಾಸಕ್ತಿಗಳಿಗೆ ಪೂರಕವಾಗಿ ಕೆಲಸ ಮಾಡುವ ಬಗ್ಗೆ ವಿಸ್ತಾರವಾಗಿ ಮಾತನಾಡಿದರು.
ಕೇಂದ್ರ ಸರ್ಕಾರದ ದೃಷ್ಟಿ ಉದ್ದೇಶದ ಬಗ್ಗೆ ಮಾತನಾಡಿದ ಪ್ರಧಾನಿ, ಸಾರ್ವಜನಿಕ ಕಲ್ಯಾಣ ಮತ್ತು ಆಧುನಿಕ ಮೂಲಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಗುರಿ. ಸರ್ಕಾರವು ಯಾವತ್ತೂ ಅಭಿವೃದ್ಧಿ ಹಾದಿಯಿಂದ ಹಿಂದೆ ಸರಿಯಲಿಲ್ಲ, ಅಭಿವೃದ್ಧಿ ಕಾರ್ಯಸೂಚಿಯನ್ನು ದುರ್ಬಲಗೊಳಿಸಲಿಲ್ಲ ಎಂದು ಹೇಳಿದರು. "ದೇಶವು ಪ್ರಗತಿ ಸಾಧಿಸುವುದು ಮುಖ್ಯ, ಪ್ರತಿಯೊಬ್ಬ ಭಾರತೀಯರಿಗೂ ಅಧಿಕಾರವಿದೆ ಮತ್ತು ನಮ್ಮ ರಾಷ್ಟ್ರವು ಆಧುನಿಕ ಮೂಲಸೌಕರ್ಯಗಳನ್ನು ಹೊಂದಿದೆ" ಎಂದು ಮೋದಿ ಹೇಳಿದರು.
ಕಳೆದ ಐದು ವರ್ಷಗಳಲ್ಲಿ, ರೈತರು ಮತ್ತು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಜನರು ಸೇರಿ ಅನೇಕರನ್ನು ಉದ್ದೇಶಿಸಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಲಾಯಿತು. ಆ ಮೂಲಕ ಸರ್ಕಾರವು ಭಾರತವನ್ನು ಆಧುನೀಕರಣದ ಹಾದಿಗೆ ಕೊಂಡೊಯ್ದಿತು. ಮುಂದಿನ ಐದು ವರ್ಷಗಳಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಂಖ್ಯೆಯನ್ನು ಆರರಿಂದ 20 ಕ್ಕೆ ಹೆಚ್ಚಿಸಲಾಗುತ್ತಿದ್ದು, 150 ಜಿಲ್ಲಾ ಆಸ್ಪತ್ರೆಗಳನ್ನು ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸುವ ಯೋಜನೆ ರೂಪಿಸಲಾಗಿದೆ.
ಅಂತೆಯೇ, ಭಾರತದಾದ್ಯಂತ ಏಳು ಹೊಸ ಐಐಟಿಗಳು, 14 ಐಐಐಟಿಗಳು, ಒಂದು ಎನ್ಐಟಿ ಮತ್ತು ನಾಲ್ಕು ಎನ್ಐಡಿಗಳನ್ನು ಸ್ಥಾಪಿಸಲಾಗುತ್ತಿದ್ದು, 7 ಹೊಸ ಐಐಎಂಗಳನ್ನು ಸಹ ತೆರೆಯಲಾಗುತ್ತಿದೆ. ಆಧುನೀಕರಣವು ನಡೆಯದ ಯಾವುದೇ ವಲಯವಿಲ್ಲ. ಸುನಾಮಿ ಬರುವ ಮುನ್ಸೂಚನೆ ನೀಡುವಲ್ಲಿ ಭಾರತವು ವಿಶ್ವದ 4 ನೇ ಸ್ಥಾನದಲ್ಲಿದೆ; ಹವಾಮಾನ ಮುನ್ಸೂಚನೆ ನೀಡುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಬಾಹ್ಯಾಕಾಶದಲ್ಲಿ, ಭಾರತವು 2022 ರ ವೇಳೆಗೆ ಮಾನವಸಹಿತ ಬಾಹ್ಯಾಕಾಶ ನೌಕೆಯನ್ನು ಕಳುಹಿಸಲು ಸಜ್ಜಾಗಿದೆ. ಯುಎಸ್, ರಷ್ಯಾ ಮತ್ತು ಚೀನಾ ನಂತರ, ಬಾಹ್ಯಾಕಾಶಕ್ಕೆ ಮಾನವಸಹಿತ ಕಾರ್ಯಾಚರಣೆಯನ್ನು ಕಳುಹಿಸುವ ಭಾರತ ನಾಲ್ಕನೇ ದೇಶವಾಗಿದೆ. ವಿಶೇಷವೆಂದರೆ, ಭಾರತದ ಪ್ರಧಾನ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನದೇ ಆದ ಬಾಹ್ಯಾಕಾಶ ಕೇಂದ್ರವನ್ನು ಭವಿಷ್ಯದಲ್ಲಿ ಹೊಂದಲು ಯೋಜಿಸುತ್ತಿದೆ.
ಭಾರತವು ತನ್ನ ಶಕ್ತಿಯನ್ನು ಹೂಡಿಕೆ ಮಾಡಲು ಮತ್ತು ಅದರ ಮೂಲಸೌಕರ್ಯಗಳನ್ನು ಬಲಪಡಿಸಲು ಮತ್ತು ಆಧುನೀಕರಿಸಲು ಚಾಲನೆ ನೀಡುತ್ತಿದೆ. ಅಧ್ಯಕ್ಷರ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ವೇಳೆ ಮಾತನಾಡಿ, ಬೆಳೆಯುತ್ತಿರುವ ಭಾರತವು ಹೆದ್ದಾರಿಗಳು, ಜಲಮಾರ್ಗಗಳು, ರೈಲ್ವೆಗಳು, ರಸ್ತೆಮಾರ್ಗಗಳು, ವಾಯುಯಾನ, ಸ್ಟಾರ್ಟ್ ಅಪ್ಗಳು ಮತ್ತು ನಾವೀನ್ಯತೆಗಳ ಆಧುನೀಕರಣವನ್ನು ಬಯಸುತ್ತಿದೆ ಎಂದು ಪ್ರಧಾನಿ ಹೇಳಿದರು. ಆಧುನಿಕ ಮತ್ತು ವೇಗದ ಸಾರಿಗೆ ವ್ಯವಸ್ಥೆಗಳು ಇಂದಿನ ಜಗತ್ತಿನಲ್ಲಿ ಮೂಲಭೂತ ಅವಶ್ಯಕತೆಯಾಗಿದೆ ಎಂದು ಅರ್ಥೈಸಿಕೊಳ್ಳಬೇಕು. ಸಮಯದ ಬೇಡಿಕೆಗೆ ತಕ್ಕ ಹಾಗೆ ಮುಂದುವರಿಯಲು ನಿರಾಕರಿಸಿದ ದೇಶಗಳು ಆರ್ಥಿಕವಾಗಿ ವಿಫಲವಾಗಿವೆ.
2024 ರ ವೇಳೆಗೆ ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಪ್ರಧಾನ ಮಂತ್ರಿಯವರ ಕರೆ ಗಮನ ಸೆಳೆಯುತ್ತದೆ. ಪ್ರಸ್ತುತ, ಭಾರತವು ವಿಶ್ವದ 6 ನೇ ಶಕ್ತಿಶಾಲಿ ಆರ್ಥಿಕತೆಯಾಗಿದೆ. 2024 ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಸಾಧಿಸಲು, ಭಾರತವು ಮುಂದಿನ ಐದು ವರ್ಷಗಳ ಅವಧಿಯಲ್ಲಿ 2024ರವರೆಗಿನ ಬೆಳವಣಿಗೆಯನ್ನು ಪ್ರಸ್ತುತ 6.7 ರಿಂದ 10-11 ಶೇಕಡಕ್ಕೆ ಹೆಚ್ಚಿಸಬೇಕಾಗುತ್ತದೆ. ಗುರಿ ಸಾಧಿಸುವಲ್ಲಿ ಸವಾಲುಗಳಿವೆ, ಆದರೆ ಭಾರತ ಅದನ್ನು ತಲುಪುವ ನಿರೀಕ್ಷೆಯಿದೆ.
ಮಹಾತ್ಮ ಗಾಂಧಿಯವರ 150 ನೇ ವಾರ್ಷಿಕೋತ್ಸವ ಮತ್ತು 75 ವರ್ಷಗಳ ಭಾರತದ ಸ್ವಾತಂತ್ರ್ಯವನ್ನು ಭಾರತದ ಇತಿಹಾಸದಲ್ಲಿ ಹೆಗ್ಗುರುತಿನ ಸಂದರ್ಭಗಳೆಂದು ಹೇಳಿರುವ ಪ್ರಧಾನಿ, ಇವುಗಳನ್ನು ಬಹಳ ಹುರುಪಿನಿಂದ ಆಚರಿಸಬೇಕೆಂದು ಪ್ರತಿಯೊಬ್ಬರನ್ನು ಕೋರಿದ್ದಾರೆ. ದೇಶದ ನಾಗರಿಕರು ಭಾರತವನ್ನು ನಿರ್ಮಿಸಲು ಶ್ರಮಿಸಬೇಕು, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕನಸು ಕಂಡರು ಮತ್ತು ರಾಷ್ಟ್ರಕ್ಕಾಗಿ ಬದುಕಿದರು ಎಂದು ಹೇಳಿದರು.
ಕೇಂದ್ರ ಸರ್ಕಾರ ಅಧಿಕಾರ ವಹಿಸಿಕೊಂಡ ಕೆಲವೇ ವಾರಗಳಲ್ಲಿ ಜನರ ಪರ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಪ್ರಧಾನಿ ಹೇಳಿದರು. ಆ ನಿರ್ಧಾರಗಳು ರೈತರು, ವ್ಯಾಪಾರಿಗಳು, ಯುವಕರು ಮತ್ತು ಸಮಾಜದ ವಿವಿಧ ವರ್ಗಗಳಿಗೆ ಅಪಾರ ಪ್ರಯೋಜನವನ್ನು ನೀಡುತ್ತವೆ ಎಂದು ಅವರು ಹೇಳಿದರು. ರಾಷ್ಟ್ರಕ್ಕೆ ನೀಡಿದ ಭರವಸೆಗಳನ್ನು ಸರ್ಕಾರ ಈಡೇರಿಸಲು ಪ್ರಾರಂಭಿಸಿದೆ ಎಂದರು.
ದೇಶದ ಹಲವಾರು ಭಾಗಗಳು ತೀವ್ರ ನೀರಿನ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವುದರಿಂದ ನೀರಿನ ಸಂರಕ್ಷಣೆಗೆ ಸರಿಯಾದ ಪ್ರಾಮುಖ್ಯತೆ ನೀಡುವಂತೆ ಪ್ರಧಾನಿ ಮೋದಿ ಜನರಿಗೆ ಕರೆ ನೀಡಿದರು. “ಜಲ ಶಕ್ತಿ ಸಚಿವಾಲಯ” ವನ್ನು ಸ್ಥಾಪಿಸುವ ಕ್ರಮವು ಪ್ರತಿ ಮನೆಗೆ ನೀರು ತರುವ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ಸಂಸತ್ತಿನ ಉಭಯ ಸದನಗಳಲ್ಲಿ ಪ್ರಧಾನಿ ಅವರು ಮಾಡಿದ ಭಾಷಣದ ಸಾರ; 2022 ರ ವೇಳೆಗೆ ‘ಹೊಸ ಭಾರತ’ದ ಕನಸನ್ನು ನನಸಾಗಿಸಲು ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಬೇಕು ಎನ್ನುವುದಾಗಿತ್ತು.

ಲೇಖನ : ಶಂಕರ್‌ ಕುಮಾರ್‌, ಪತ್ರಕರ್ತರು

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ