ಸಂಸತ್ತಿನಲ್ಲಿ ಈ ವಾರ


ಭಾರತವನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಮತ್ತು ಏಕ ರಾಷ್ಟ್ರ - ಒಂದು ಚುನಾವಣೆಯ ಆಲೋಚನೆಯೊಂದಿಗೆ ಮುಂದುವರಿಯಲು ಪ್ರತಿಪಕ್ಷಗಳ ಸಹಕಾರವನ್ನು ಕೋರಿದ್ದಾರೆ. ಉಭಯ ಸದನಗಳನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಮಾಡಿದ ಭಾಷಣಕ್ಕೆ ಧನ್ಯವಾದ ಸಮರ್ಪಿಸುವ ವೇಳೆ ಲೋಕಸಭೆಯಲ್ಲಿ ನಡೆದ ಚರ್ಚೆಗೆ ಅವರು ಉತ್ತರಿಸುತ್ತಿದ್ದರು. ಸಂಸತ್ತಿನ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಅವರು ಪ್ರತಿಪಕ್ಷಗಳಿಗೆ ಮನವಿ ಮಾಡಿದರು. ಭಾರತ ತನ್ನ ಪ್ರಗತಿ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಸಿಗುವ ಯಾವುದೇ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಅವರು ಹೇಳಿದರು. ಸರ್ಕಾರ ಮತ್ತು ಪ್ರತಿಪಕ್ಷಗಳು ಒಟ್ಟಾಗಿ ದೇಶ ಎದುರಿಸುತ್ತಿರುವ ಎಲ್ಲಾ ಸವಾಲುಗಳನ್ನು ನಿಭಾಯಿಸಬಲ್ಲವು ಎಂದು ಪ್ರಧಾನಿ ಭರವಸೆ ವ್ಯಕ್ತಪಡಿಸಿದರು. ಅವರು ಬಲವಾದ, ಸುರಕ್ಷಿತ ಮತ್ತು ಅಂತರ್ಗತ ಭಾರತವನ್ನು ನಿರ್ಮಾಣ ಮಾಡಲು ಕರೆ ನೀಡಿದರು. ಭ್ರಷ್ಟಾಚಾರ, ರೈತರು ಮತ್ತು ಉದ್ಯೋಗದಂತಹ ವಿವಿಧ ವಿಷಯಗಳ ಬಗ್ಗೆ ಮಾತನಾಡಿದ ಪ್ರಧಾನಿ, ದೇಶದಲ್ಲಿ ಭ್ರಷ್ಟಾಚಾರಕ್ಕೆ ಸ್ಥಳವಿಲ್ಲ ಮತ್ತು ಅವರ ಸರ್ಕಾರ ಭ್ರಷ್ಟರ ವಿರುದ್ಧದ ಹೋರಾಟವನ್ನು ಮುಂದುವರಿಸಲಿದೆ ಎಂದು ಪ್ರತಿಪಾದಿಸಿದರು. ದೇಶದಲ್ಲಿನ ನೀರಿನ ಬಿಕ್ಕಟ್ಟನ್ನು ಉಲ್ಲೇಖಿಸಿದ ಅವರು, ಪ್ರತಿ ಮನೆಗೂ ನೀರು ಒದಗಿಸುವುದು ತಮ್ಮ ಸರ್ಕಾರದ ಮಂತ್ರವಾಗಿದೆ ಎಂದು ಪುನರುಚ್ಚರಿಸಿದರು.
ರಾಜ್ಯಸಭೆಯಲ್ಲಿ ಚರ್ಚೆಗೆ ಉತ್ತರಿಸಿದ ಮೋದಿ, ಚುನಾವಣಾ ಸುಧಾರಣೆಗಳು ದೇಶಕ್ಕೆ ಅತ್ಯಗತ್ಯ ಮತ್ತು ಹೊಸ ಭಾರತವನ್ನು ನಿರ್ಮಿಸುವ ಬಗ್ಗೆ ವಿಚಾರ ಮಾಡುವಂತೆ ಸಂಸದರನ್ನು ಕೇಳಿಕೊಂಡರು. ದೇಶದ ಎಲ್ಲ ನಾಗರಿಕರಿಗೆ ಸುಭದ್ರ ಜೀವನವನ್ನು ಖಾತ್ರಿಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಮತ್ತು ಹೊಸ ಭಾರತವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕೆಂದು ಕೋರಿದರು. ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು ಸಾಮೂಹಿಕ ಪ್ರಯತ್ನಕ್ಕೆ ಕರೆ ನೀಡಿದರು.
ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾವನೆ ಸೇರಿದಂತೆ ಬಿಜೆಪಿಯ ನವ ಭಾರತ ಪರಿಕಲ್ಪನೆಯನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಮೋದಿ ಪ್ರತಿಪಕ್ಷಗಳನ್ನು ಟೀಕಿಸಿದರು. ರಾಜ್ಯಸಭೆಯ ಪ್ರತಿಪಕ್ಷದ ನಾಯಕ, ಗುಲಾಮ್ ನಬಿ ಆಜಾದ್ ಅವರು ಹಳೆಯ ಭಾರತವನ್ನು ಮರುಕಳಿಸಬೇಕಿದೆ ಎಂದು ತಿಳಿಸಿದ್ದಕ್ಕೆ ಉತ್ತರಿಸಿದ ಪ್ರಧಾನಿ, ಕಾಂಗ್ರೆಸ್ ಪಕ್ಷವು ಹಳೆಯ ಭಾರತವನ್ನು ಬಯಸುತ್ತದೆ. ಅಲ್ಲಿ ಕ್ಯಾಬಿನೆಟ್ ನಿರ್ಧಾರಗಳನ್ನು ಪತ್ರಿಕಾ ಸಭೆಗಳಲ್ಲಿ ಹರಿದು ಹಾಕಲಾಗುತ್ತದೆ ಮತ್ತು ನೌಕಾ ಹಡಗುಗಳನ್ನು ವೈಯಕ್ತಿಕ ಪ್ರವಾಸಗಳಿಗೆ ಬಳಸಲಾಗುತ್ತದೆ ಎಂದು ವ್ಯಂಗ್ಯವಾಡಿದರು. ಮೋದಿ ಅವರು ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ ಬಳಕೆಯನ್ನು ಸಮರ್ಥಿಸಿಕೊಂಡರು ಮತ್ತು ಯಂತ್ರಗಳ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಲೋಕಸಭೆಯು 2019ರ ವಿಶೇಷ ಆರ್ಥಿಕ ವಲಯ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತು. ಇದು ಟ್ರಸ್ಟ್‌ಗಳು ಮತ್ತು ಇತರ ಸಂಸ್ಥೆಗಳಿಗೆ ತಮ್ಮ ಘಟಕಗಳನ್ನು ಎಸ್‌ ಇ ಝಡ್‌ ಗಳಲ್ಲಿ ಸ್ಥಾಪಿಸಲು ಅನುವು ಮಾಡಿಕೊಡುತ್ತದೆ. ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು 2019ರ ಆಧಾರ್ ಮತ್ತು ಇತರ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಪರಿಚಯಿಸಿದರು. ಈ ವರ್ಷ ಮಾರ್ಚ್‌ನಲ್ಲಿ ಹೊರಡಿಸಲಾದ ಸುಗ್ರೀವಾಜ್ಞೆಯನ್ನು ಈ ಮಸೂದೆ ಬದಲಾಯಿಸಲಿದೆ. 18ನೇ ವಯಸ್ಸನ್ನು ತಲುಪದಿರುವ ಮಕ್ಕಳು ಈ ಬಯೋಮೆಟ್ರಿಕ್ ಗುರುತಿನ ಕಾರ್ಯಕ್ರಮದಿಂದ ನಿರ್ಗಮಿಸುವ ಆಯ್ಕೆಯನ್ನು ಇದು ಪ್ರಸ್ತಾಪಿಸಿದೆ.
ಜಮ್ಮು ಮತ್ತು ಕಾಶ್ಮೀರ ಮೀಸಲಾತಿ ಕಾಯ್ದೆ 2004 ಅನ್ನು ಮತ್ತಷ್ಟು ತಿದ್ದುಪಡಿ ಮಾಡಲು ಯತ್ನಿಸುವ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ 2019 ಅನ್ನು ಗೃಹ ಸಚಿವ ಜಿ. ಕಿಶನ್ ರೆಡ್ಡಿ ಪರಿಚಯಿಸಿದರು. ಇದು ಶಿಕ್ಷಣದಲ್ಲಿ ಮೀಸಲಾತಿ ನೀಡಲು ಪ್ರಸ್ತಾಪಿಸಿದೆ
ಜಮ್ಮುವಿನ ಅಂತರರಾಷ್ಟ್ರೀಯ ಗಡಿಯ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗಗಳನ್ನು ನೀಡುವ ಬಗ್ಗೆ ಪ್ರಸ್ತಾಪಿಸಿದೆ.
ಗಡಿಯಾಚೆಗಿನ ಭಯೋತ್ಪಾದನೆಯ ವಿಷಯವನ್ನು ನವದೆಹಲಿಯು ಸತತವಾಗಿ ಮುಂದಿಡುತ್ತಿದೆ ಮತ್ತು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಯೋತ್ಪಾದನೆಯ ಭೀತಿಯನ್ನು ಎದುರಿಸುವಲ್ಲಿ ಅಂತರ ರಾಷ್ಟ್ರೀಯ ಸಹಕಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್ ಅವರು ಲೋಕಸಭೆಯ ಸದಸ್ಯರಿಗೆ ಲಿಖಿತ ಉತ್ತರ ನೀಡಿದರು. ಸರ್ಕಾರದ ಸತತ ಪ್ರಯತ್ನಗಳ ಫಲವಾಗಿ, ಪಾಕಿಸ್ತಾನದಿಂದ ಹೊರಹೊಮ್ಮುವ ಭಯೋತ್ಪಾದನೆಯ ಬಗ್ಗೆ ಅಂತರರಾಷ್ಟ್ರೀಯ ಸಮುದಾಯದಲ್ಲಿ ಹೆಚ್ಚಿನ ಕಳವಳವಿದೆ. ಇದರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೊತ್ತುಪಡಿಸಿದ ಭಯೋತ್ಪಾದಕ ಸಂಘಟನೆಗಳು ಮತ್ತು ವ್ಯಕ್ತಿಗಳ ನಿರಂತರ ಚಟುವಟಿಕೆಗಳು ಒಳಗೊಂಡಿವೆ. ಪಾಕಿಸ್ತಾನವು ತನ್ನ ಭೂಪ್ರದೇಶವನ್ನು ಯಾವುದೇ ರೀತಿಯಲ್ಲಿ ಭಯೋತ್ಪಾದನೆಗೆ ಬಳಸಲು ಅನುಮತಿಸಬಾರದು ಎಂದು ದೇಶಗಳು ಕರೆ ನೀಡಿರುವ ಬಗ್ಗೆ ಸಚಿವರು ಗಮನಸೆಳೆದರು. ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ, ಯುಎನ್ ಸೆಕ್ಯುರಿಟಿ ಕೌನ್ಸಿಲ್ ಅತ್ಯಂತ ಕಠಿಣವಾದ, ಭೀಕರ ಮತ್ತು ಹೇಡಿತನದ ಕೃತ್ಯವನ್ನು ಖಂಡಿಸಿದೆ ಎಂದು ಅವರು ಹೇಳಿದರು.
ರಾಜ್ಯಸಭೆಯ ಸದಸ್ಯರು ದೇಶದ ಕೆಲವು ಭಾಗಗಳಲ್ಲಿನ ನೀರಿನ ಬಿಕ್ಕಟ್ಟಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಅಲ್ಪಾವಧಿಯ ಚರ್ಚೆಗೆ ಉತ್ತರಿಸಿದ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಅಂತರ್ಜಲ ಮಟ್ಟವನ್ನು ಸಂರಕ್ಷಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಹೇಳಿದರು.

ಲೇಖನ : ವಿ. ಮೋಹನ್‌ ರಾವ್‌, ಪತ್ರಕರ್ತರು

Comments