250 ಅಧಿವೇಶನ ಕಂಡ ರಾಜ್ಯಸಭೆ
ಭಾರತೀಯ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ 250 ದಿನಗಳ ಅಧಿವೇಶನ ದಾಖಲಾಗಿದೆ. ಇದು ಭಾರತದ ರಾಜಕೀಯ ಪ್ರಜಾಪ್ರಭುತ್ವದ ಪ್ರಗತಿಯಲ್ಲಿ ರಾಜ್ಯಸಭೆಯ ಪಾತ್ರ ಎಷ್ಟು ಮಹತ್ವದ್ದು ಎಂಬುದನ್ನು ಸಾರಿ ಹೇಳುತ್ತದೆ. 1952ರಲ್ಲಿ ಪ್ರಾರಂಭವಾದ ರಾಜ್ಯಸಭೆ ಅಂದಿನಿಂದಲೂ ರಾಷ್ಟ್ರದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಾ ಬಂದಿದೆ. ಯಾವ ಸಂದರ್ಭದಲ್ಲೂ ನಿರಾಕರಿಸಲಾಗದಂತಹ ಎತ್ತರಕ್ಕೆ ಏರಿದೆ. 1952ರಲ್ಲಿ ಹಿಂದೂ ಮದುವೆ ಮತ್ತು ವಿಚ್ಛೇದನ ಮಸೂದೆಯನ್ನು ಅಂಗೀಕರಿಸುವುದರಿಂದ ಹಿಡಿದು 2019ರಲ್ಲಿ ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆಗೆ ಮತ್ತು ಜಮ್ಮು- ಕಾಶ್ಮೀರ ಮರುಸಂಘಟನೆ ಮಸೂದೆ ಅಂಗೀಕರಿಸುವವರೆಗೆ ರಾಜ್ಯಸಭೆಯು ಭಾರತದ ಸುದೀರ್ಘವಾದ ಮತ್ತು ಆಕರ್ಷಕವಾದ ರಾಜಕೀಯ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ.
ರಾಜ್ಯಸಭೆಯಲ್ಲಿ 250ನೇ ಅಧಿವೇಶನ ಕಂಡ ಹಿನ್ನೆಲೆಯಲ್ಲಿ ಮಾತನಾಡಿದ ರಾಜ್ಯಸಭೆಯ ಅಧ್ಯಕ್ಷರೂ ಆಗಿರುವ ಉಪಾಧ್ಯಕ್ಷ ಎಂ. ವೆಂಕಯ್ಯನಾಯ್ಡು ಅವರು, 'ಕಾಲಕಾಲಕ್ಕೆ ಸವಾಲುಗಳನ್ನು ಎದುರಿಸುವಲ್ಲಿ ಮತ್ತು ರಾಷ್ಟ್ರದ ಅವಶ್ಯಕತೆಗಳನ್ನು ಪೂರೈಸುವಲ್ಲಿ ಮೇಲ್ಮನೆ ಬಹಳ ದೂರ ಸಾಗಿದೆ. ಆದರೆ ದೇಶವು ತನ್ನ ಸಂಪೂರ್ಣ ಸಾಮರ್ಥ್ಯವನ್ನು, ಕಳೆದುಹೋಗಿರುವ ಸಮಯ ಮತ್ತು ಅವಕಾಶವನ್ನು ಹಾಗೂ ಸದನದ ಕಾರ್ಯವೈಖರಿಯನ್ನು ಅರಿತುಕೊಳ್ಳುವುದು ಇನ್ನೂ ಮೈಲುಗಳಷ್ಟು ದೂರವಿದೆ" ಎಂದು ಅಭಿಪ್ರಾಯಪಟ್ಟರು.
1952ರ ಮೇ 13ರಂದು ನಡೆದ ಮೊದಲ ಸಭೆಯಿಂದ 2019ರ ಆಗಸ್ಟ್ 7 ರಂದು ನಡೆದ 249ನೇ ಅಧಿವೇಶನದವರೆಗೆ ಮೇಲ್ಮನೆಯಲ್ಲಿ ಒಟ್ಟು 5,466 ಸಭೆಗಳು ನಡೆದಿವೆ. ಈ ಅವಧಿಯಲ್ಲಿ 108 ಸಂವಿಧಾನ ತಿದ್ದುಪಡಿ ಮಸೂದೆಗಳು ಸೇರಿದಂತೆ ಒಟ್ಟು 3,817 ಮಸೂದೆಗಳನ್ನು ಅಂಗೀಕರಿಸಲಾಗಿದೆ. ರಾಜ್ಯಸಭೆಯ ಕಳೆದ 67 ವರ್ಷಗಳ ಈ ಸುದೀರ್ಘ ಪಯಣದಲ್ಲಿ 208 ಮಹಿಳೆಯರು ಮತ್ತು 137 ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಒಟ್ಟು 2,282 ಜನರಿಗೆ ಸದನದ ಸದಸ್ಯರಾಗುವ ಅವಕಾಶ ಲಭಿಸಿತ್ತು. ಈ ಸಂಗತಿಗಳಿಂದ 1950ರ ದಶಕದಿಂದಲೂ ರಾಜ್ಯಸಭೆ ನಡೆದು ಬಂದ ಅರ್ಥಪೂರ್ಣವಾದ ಪ್ರಯಾಣ ಹೇಗಿತ್ತು ಎಂಬುದನ್ನು ತಿಳಿಯಬಹುದು.
ಇದರ ನಡುವೆ ರಾಜ್ಯಸಭೆಯ ಅಸ್ತಿತ್ವದ ಮಹತ್ವವನ್ನು ಹೆಚ್ಚಿಸುವುದರಿಂದ ಅದು ಶಾಶ್ವತವಾಗಿ ಉಳಿಯಲು ಮತ್ತು ನಿರಂತರವಾಗಿ ಕಾರ್ಯಪ್ರವತ್ತವಾಗಿರುವಂತೆ ಮಾಡಲು ನೆರವಾಗುತ್ತದೆ. ದೇಶದ ದ್ವಿಪಕ್ಷೀಯ ಸಂಸದೀಯ ವ್ಯವಸ್ಥೆಯಲ್ಲಿ ಪ್ರಧಾನ ಮಂತ್ರಿಗಳು ಸಾಮಾನ್ಯವಾಗಿ ಪ್ರತಿ ಐದು ವರ್ಷಗಳಿಗೊಮ್ಮೆ ಅಥವಾ ರಾಷ್ಟ್ರಪತಿಗಳು ಸಲಹೆ ನೀಡಿದರೆ ಅವಧಿಗೆ ಮುನ್ನ ಲೋಕಸಭೆಯನ್ನು ವಿಸರ್ಜಿಸುತ್ತಾರೆ. ರಾಜ್ಯಸಭೆ ಹಾಗಲ್ಲ, ಅದು ನಿರಂತರವಾಗಿ ಕಾರ್ಯಪ್ರವತ್ತವಾಗಿರುತ್ತದೆ.
ಸದನದ 250ನೇ ಅಧಿವೇಶನದಲ್ಲಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಜ್ಯಸಭೆಯು ಭಾರತದ ವೈವಿಧ್ಯತೆಯ ಪ್ರಾತಿನಿಧಿಕ ಸಂಸ್ಥೆಯಾಗಿದೆ ಮತ್ತು ಇದು ದೇಶದ ಒಕ್ಕೂಟ ವ್ಯವಸ್ಥೆಯ ಪ್ರತಿಬಿಂಬವಾಗಿದೆ ಎಂದು ಹೇಳಿದರು. ದೇಶದ ಸಂವಿಧಾನವು ಕಲ್ಪಿಸಿದಂತೆ ರಾಜ್ಯಸಭೆಯು ದೇಶದ ಸಾಮಾಜಿಕ-ಆರ್ಥಿಕ ಪರಿವರ್ತನೆಯ ಅವಿಭಾಜ್ಯ ಅಂಗವಾಗಿದೆ. ಇದು ಕಳೆದ ಆರು ದಶಕಗಳಿಗಿಂತಲೂ ಹೆಚ್ಚು ಕಾಲ ರಾಷ್ಟ್ರ ನಿರ್ಮಾಣದ ಪ್ರಯತ್ನಗಳಿಗೆ ಪೂರಕವಾಗಿ ಕೆಲಸ ಮಾಡುತ್ತಾ ಬಂದಿದೆ. ಬಡತನ ನಿವಾರಣೆಯಾಗಲಿ ಅಥವಾ ಅನಕ್ಷರತೆ, ರೋಗ, ನಿರುದ್ಯೋಗ, ಭಯೋತ್ಪಾದನೆ, ಸಾಮಾಜಿಕ, ರಾಜಕೀಯ, ಆರ್ಥಿಕ ಸಮಸ್ಯೆಗಳಾಗಲಿ ಅಥವಾ ಹವಾಮಾನ ಬದಲಾವಣೆ ಮತ್ತು ಹೆಚ್ಚುತ್ತಿರುವ ಪರಿಸರ ಮಾಲಿನ್ಯಕ್ಕೆ ಪರಿಹಾರವನ್ನು ಕಂಡುಕೊಳ್ಳುವುದಾಗಲಿ ಎಲ್ಲಾ ವಿಷಯಗಳ ಬಗ್ಗೆ ರಾಜ್ಯಸಭೆಯಲ್ಲಿ ಮಹತ್ವದ ಚರ್ಚೆ ನಡೆದಿವೆ. ಹಾಗಾಗಿ ರಾಜ್ಯಸಭೆಯ ಈ ಅತ್ಯಂತ ಮಹತ್ವದ ಪಾತ್ರವನ್ನು ಎಂದಿಗೂ ಕೀಳಂದಾಜು ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಇತ್ತೀಚಿನ ದಿನಗಳಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿ, ತ್ರಿಪಲ್ ತಲಾಖ್ ಜಾರಿ, ಆರ್ಥಿಕವಾಗಿ ದುರ್ಬಲವಾಗಿರುವ ಮೇಲ್ಜಾತಿಯವರಿಗೂ ಶೇಕಡಾ 10ರಷ್ಟು ಮೀಸಲಾತಿ ನೀಡುವುದು, 370ನೇ ವಿಧಿಯನ್ನು ರದ್ದುಪಡಿಸುವುದು ಸೇರಿದಂತೆ ಹಲವು ಮಹತ್ವದ ಮತ್ತು ನಿರ್ಣಾಯಕ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. ಸಂವಿಧಾನದ 370ರ ವಿಧಿ ರದ್ದು ಗೊಳಿಸುವ ಬಗ್ಗೆ ರಾಜ್ಯಸಭೆಯಲ್ಲಿ ಪ್ರಧಾನ ಮಂತ್ರಿ ನೀಡಿದ ಹೇಳಿಕೆ ಗಮನ ಸೆಳೆಯುವಂಥದ್ದು. ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370ನೇ ವಿಧಿಯನ್ನು ರಾಜ್ಯಸಭೆಯ ಮೊದಲ ಸಭಾನಾಯಕ ಎನ್. ಗೋಪಾಲಸ್ವಾಮಿ ಅಯ್ಯಂಗಾರ್ ಪರಿಚಯಿಸಿದರು. ದಶಕಗಳ ನಂತರ ಇದೇ ರಾಜ್ಯಸಭೆಯಲ್ಲಿ ಈ ವಿಧಿಯನ್ನು ರದ್ದುಪಡಿಸಲಾಗುತ್ತಿದೆ' ಎಂದು ಹೇಳಿದರು.
ರಾಜ್ಯಸಭೆಗೆ ಮತ್ತೊಂದು ವೈಭವವಿದೆ. ವರ್ಷಗಳು ಉರುಳಿದಂತೆ ಬೇರೆ ಬೇರೆ ಕ್ಷೇತ್ರದ ಗುಣಮಟ್ಟಹೊಂದಿದ ಜನ ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಭಾರತೀಯ ಸಂವಿಧಾನದ ಪಿತಾಮಹ ಡಾ. ಭೀಮರಾವ್ ಅಂಬೇಡ್ಕರ್ ಅವರು ಎರಡು ಬಾರಿ ರಾಜ್ಯಸಭೆಯ ಸದಸ್ಯರಾಗಿದ್ದರು. ಕಲೆ, ವಿಜ್ಞಾನ ಮತ್ತು ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಅನುಭವಿಗಳಿಗೆ ರಾಜ್ಯಸಭೆಯಲ್ಲಿ ಸದಸ್ಯತ್ವ ನೀಡಲಾಗಿದೆ. ಇಂಥವರೆಲ್ಲರು ಉನ್ನತ ಮಟ್ಟದ ಸಾರ್ವಜನಿಕ ಹಿತಾಸಕ್ತಿಗಳನ್ನೊಳಗೊಂಡ ನಿರ್ಣಾಯಕ ವಿಷಯಗಳ ಮೇಲೆ ಈ ಸದನದಲ್ಲಿ ಚರ್ಚೆ ಮಾಡಿದ್ದಾರೆ. ಇಂಥವರೆಲ್ಲರ ಉಪಸ್ಥಿತಿ ಸದನದಲ್ಲಿ ನಡೆದ ಚರ್ಚೆಗಳಿಗೆ ಗುಣಮಟ್ಟ ಮತ್ತು ಮೌಲ್ಯವನ್ನು ತಂದುಕೊಟ್ಟಿದೆ. ಇಂಥವರಿಂದಾಗಿ ಮೇಲ್ಮನೆಯ ಒಟ್ಟಾರೆ ಕಾರ್ಯಚಟುವಟಿಕೆಗಳಲ್ಲಿ ಉತ್ಸಾಹ ಕಂಡು ಬಂದಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾವನೆಗಳನ್ನು ಹಂಚಿಕೊಂಡರು.
2003ರಲ್ಲಿ ರಾಜ್ಯಸಭೆಯ 200ನೇ ಅಧಿವೇಶನದ ಸಂದರ್ಭದಲ್ಲಿ ಮಾತನಾಡಿದ ಅಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ, 'ನಮ್ಮ ಎರಡನೇ ಸದನವಾದ ರಾಜ್ಯಸಭೆಯನ್ನು ದ್ವಿತೀಯ ಸದನವೆಂದು ಪರಿಗಣಿಸುವ ತಪ್ಪನ್ನು ಯಾರೂ ಮಾಡಬಾರದು. ವಾಸ್ತವವಾಗಿ ಮೇಲ್ಮನೆಯಲ್ಲಿ ವಿಜ್ಞಾನಿಗಳು, ವೈದ್ಯರು, ಕಲಾವಿದರು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಇತರರು ಸೇರಿದಂತೆ ಹೆಚ್ಚು ವಿದ್ಯಾವಂತ ವ್ಯಕ್ತಿಗಳು ಇರುವುದು ದೇಶದ ಪ್ರಜಾಪ್ರಭುತ್ವ ಮನೋಭಾವವನ್ನು ಸಮೃದ್ಧಗೊಳಿಸಿದೆ. ಜೊತೆಗೆ ರಾಷ್ಟ್ರೀಯ ಪ್ರಾಮುಖ್ಯತೆಯ ಕಾರ್ಯಸೂಚಿಯನ್ನು ಹೆಚ್ಚಿಸಿದೆ' ಎಂದು ಅಭಿಪ್ರಾಯ ಪಟ್ಟಿದ್ದರು.
ಭಾರತೀಯ ಸಂಸತ್ತಿನ ಮೇಲ್ಮನೆಯಾಗಿರುವ ರಾಜ್ಯಸಭೆ ಮೂಡಿಸಿರುವ ಈ ಹೆಗ್ಗುರುತುಗಳು ವಿಶ್ವದಾದ್ಯಂತ ದ್ವಿಪಕ್ಷೀಯ ವ್ಯವಸ್ಥೆಯ ಮುಂದುವರಿಕೆ ಮತ್ತು ಮೇಲ್ಮನೆಗಳ ಬಗ್ಗೆ ನಿರಂತರವಾಗಿ ಪ್ರಶ್ನಿಸಲಾಗುತ್ತಿರುವ ಸಮಯದಲ್ಲಿ ಆದವು ಎಂಬುದೇ ವಿಶೇಷ. ರಾಜ್ಯಸಭೆಯ ಈ ರೀತಿಯ ಪರಂಪರೆ ಭಾರತೀಯರು ಹೆಮ್ಮೆ ಪಡುವಂಥದ್ದಾಗಿದೆ.
ಸ್ಕ್ರಿಪ್ಟ್: ಶಂಕರ್ ಕುಮಾರ್, ಹಿರಿಯ ಪತ್ರಕರ್ತ
Comments
Post a Comment