ಪಾಕಿಸ್ತಾನದ ಹೊಸ ವರಸೆ

ಪಾಕಿಸ್ತಾನದ ಅಧ್ಯಕ್ಷರಿಂದ ಹಿಡಿದು ವಿದೇಶಾಂಗ ಇಲಾಖೆ ಸಚಿವರವರೆಗೆ ಎಲ್ಲರೂ ಭಾರತದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುತ್ತಲೇ ಇರುತ್ತಾರೆ. ವಿಶಿಷ್ಟ ಪ್ರಕರಣವೊಂದರಲ್ಲಿ ಪಾಕಿಸ್ತಾನದ ಆಳುವ ವರ್ಗ 2019ರ ನವೆಂಬರ್ 9 ರಂದು ಭಾರತದ ಸರ್ವೋಚ್ಛ ನ್ಯಾಯಾಲಯದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠವು ನೀಡಿದ ಅಯೋಧ್ಯ ವಿವಾದದ ಬಗೆಗಿನ ತೀರ್ಪಿನ ಕುರಿತಾಗಿಯೂ ಪ್ರತಿಕ್ರಿಯಿಸಿದೆ. ವಾಸ್ತವವಾಗಿ ಶತಮಾನಗಳ ಹಳೆಯ ವಿವಾದವಾಗಿದ್ದ ಉತ್ತರ ಪ್ರದೇಶದ ಅಯೋಧ್ಯಯಲ್ಲಿ ರಾಮನ ಮಂದಿರ ನಿರ್ಮಿಸುವುದಕ್ಕೆ ಸಂಬಂಧಿಸಿದ ಭೂಮಿಯ ಹಕ್ಕಿನ ವಿಷಯವನ್ನು ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಿದೆ. ಈ ತೀರ್ಪನ್ನು ಸಮಾಜದ ಎಲ್ಲಾ ವರ್ಗದ ಜನ ವ್ಯಾಪಕವಾಗಿ ಸ್ವಾಗತಿಸಿದ್ದಾರೆ. ಅಷ್ಟೇಯಲ್ಲ, ಮಸೀದಿ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶದ ರಾಜ್ಯ ಸರ್ಕಾರವು ಅಯೋಧ್ಯೆಯ ಪ್ರಮುಖ ಸ್ಥಳದಲ್ಲಿ ಐದು ಎಕರೆ ಭೂಮಿಯನ್ನು ನೀಡಬೇಕೆಂದು ನ್ಯಾಯಪೀಠ ಆದೇಶ ಮಾಡಿದೆ. ಮಸೀದಿಗೆ ಜಮೀನು ನೀಡಲು ಮತ್ತು ರಾಮ ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ರಚಿಸಲು ಕೇಂದ್ರ ಸರ್ಕಾರಕ್ಕೆ ಮೂರು ತಿಂಗಳ ಸಮಯವಕಾಶ ನೀಡಿದೆ.

ಭಾಗಿದಾರರಾಗಿದ್ದ ಎಲ್ಲರೂ ಅಯೋಧ್ಯೆಯ ಭೂಮಿ ಹಕ್ಕು ವಿವಾದವನ್ನು ಇತ್ಯರ್ಥ ಪಡಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ. ಅದೇ ರೀತಿ ತೀರ್ಪಿನ ಬಗ್ಗೆ ಅಪಾರ ತೃಪ್ತಿ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅದೇ ದಿನ ಸಂಜೆ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಭಾರತೀಯ ಸಮಾಜದ ಪ್ರತಿಯೊಂದು ವರ್ಗ, ಸಮುದಾಯ ಮತ್ತು ಧರ್ಮದ ಜನರು ತೀರ್ಪನ್ನು ಮುಕ್ತವಾಗಿ ಸ್ವೀಕರಿಸಿದ ರೀತಿ ಭಾರತದ ಹೃದಯವೈಶಾಲ್ಯವನ್ನು ಎತ್ತಿತೋರಿಸಿದೆ. ಈ ನಡೆ ಭಾರತದ ಜನ ಹಿಂದಿನಿಂದಲೂ ನಂಬಿಕೊಂಡು ಬಂದಿರುವ ವಿಷಯಗಳು, ಸಂಸ್ಕೃತಿಗಳು, ಸಂಪ್ರದಾಯಗಳು, ಸಹೋದರತ್ವ ಮತ್ತು ಸಾಮರಸ್ಯದ ಅಂತರ್ಗತ ಮನೋಭಾವದ ಅಭಿವ್ಯಕ್ತಿಯಾಗಿದೆ ಎಂದು ಹೇಳಿದರು.

ಹೀಗೆ ಅಯೋಧ್ಯಾ ಭೂಮಿ ಹಕ್ಕಿನ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕಟವಾದ ಸರ್ವಾನುಮತದ ತೀರ್ಪಿನ ಬಗ್ಗೆ ಎಲ್ಲೆಡೆ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿರುವ ವೇಳೆ ಪಾಕಿಸ್ತಾನವು ಅನಗತ್ಯವಾದ ಪ್ರತಿಕ್ರಿಯೆ ನೀಡಿದೆ. ಹಾಗಾಗಿ ಇದು ಕೂಡ ಭಾರತ-ಪಾಕಿಸ್ತಾನದ ವಿಷಯವಾಗಿ ಪರಿಣಮಿಸಿದೆ. ಪಾಕಿಸ್ತಾನದ ಪ್ರತಿಕ್ರಿಯೆಗೆ ತಕ್ಷಣವೇ ಉತ್ತರ ನೀಡಿದ ನವದೆಹಲಿ, ಇಸ್ಲಾಮಾಬಾದ್‌ನ ದುಷ್ಕೃತ್ಯಗಳ ಬಗ್ಗೆ ಕಿಡಿಕಾರಿದೆ. ಭಾರತದ ವಿದೇಶಾಂಗ ಸಚಿವಾಲಯವು ಹೇಳಿಕೆಯನ್ನು ಬಿಡುಗಡೆ ಮಾಡಿ ‘ಪಾಕಿಸ್ತಾನಕ್ಕೆ ಗ್ರಹಿಸುವುದರಲ್ಲಿ ಇರುವ ಕೊರತೆಯ ಬಗ್ಗೆ ಆಶ್ಚರ್ಯವೇನಿಲ್ಲ, ಏಕೆಂದರೆ ದ್ವೇಷವನ್ನು ಹರಡುವ ಸ್ಪಷ್ಟ ಉದ್ದೇಶದಿಂದ ಅದು ಭಾರತದ ಆಂತರಿಕ ವ್ಯವಹಾರಗಳ ಬಗ್ಗೆ ಪ್ರತಿಕ್ರಿಯಿಸುವುದು ಸಾಮಾನ್ಯವೇ ಆಗಿದೆ. ಜೊತೆಗದು ರೋಗಪೀಡಿತ ನಡವಳಿಯಾಗಿದೆ. ಪಾಕಿಸ್ತಾನದ ಈ ನಡೆ ಅತ್ಯಂತ ಖಂಡನೀಯ’ ಎಂದು ಅಭಿಪ್ರಾಯಪಟ್ಟಿದೆ. ಪಾಕಿಸ್ತಾನ ವಿದೇಶಾಂಗ ಕಚೇರಿಯ ಹೇಳಿಕೆ ಮತ್ತು ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಸಚಿವಾಲಯ, ‘ಸಂಪೂರ್ಣವಾಗಿ ಭಾರತಕ್ಕೆ ಸಂಬಂಧಿಸಿದ ಮತ್ತು ಆಂತರಿಕ ವಿಷಯದ ಬಗ್ಗೆ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪಿನ ಬಗ್ಗೆ ಪಾಕಿಸ್ತಾನ ವ್ಯಕ್ತಪಡಿಸಿದ ಅನಗತ್ಯ ಮತ್ತು ಅನಪೇಕ್ಷಿತ ಟೀಕೆಗಳನ್ನು ತಿರಸ್ಕರಿಸಲಾಗುವುದು. ಪಾಕಿಸ್ತಾನವು ತನ್ನದಲ್ಲದ ದೇಶ, ಅಲ್ಲಿನ ನೀತಿಗಳು, ನಂಬಿಕೆಗಳು, ಪರಿಕಲ್ಪನೆಗಳು ಮತ್ತು ಕಾನೂನಿಗೆ ಸಮಾನ ಗೌರವ ನೀಡುವುದನ್ನು ರೂಢಿಸಿಕೊಳ್ಳಬೇಕು’ ಎಂದು ಬುದ್ದಿವಾದ ಹೇಳಿದೆ.

ಇದು ಬಹಳ ದುರಾದೃಷ್ಟಕರವಾದ ವಿಷಯ. ಎರಡು ಐತಿಹಾಸಿಕ ದೇವಾಲಯಗಳಾದ ಭಾರತದ ಪಂಜಾಬಿನ ಗುರುದಾಸ್‌ಪುರ ಜಿಲ್ಲೆಯಲ್ಲಿರುವ ಡೇರಾ ಬಾಬಾ ನಾನಕ್ ಹಾಗೂ ಪಾಕಿಸ್ತಾನದ ನರೋವಾಲ್ ಜಿಲ್ಲೆಯ ಕರ್ತಾರ್‌ಪುರದಲ್ಲಿರುವ ಗುರುದ್ವಾರ ದರ್ಬಾರ್ ಸಾಹೀಬ್ ಗಳನ್ನು ಬೆಸೆಯುವ ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆಯ ಪುಣ್ಯ ಸಮಾರಂಭದಲ್ಲಿ ಪಾಕಿಸ್ತಾನವು ಕಾಶ್ಮೀರದ ಪರಿಸ್ಥಿತಿ ಮತ್ತು ಅಯೋಧ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪಿನ ಬಗ್ಗೆ ಅನಗತ್ಯವಾಗಿ ಮಾತನಾಡಿದೆ. ಇದೇ ಕರ್ತಾರ್‌ಪುರ ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಭಾರತೀಯರ ಭಾವನೆಗಳನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಗೌರವಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನೊಂದೆಡೆ ಪಾಕಿಸ್ತಾನದ ನಾಯಕರು ತಮ್ಮ ಕಡೆಯಿಂದ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಶ್ಮೀರ ಮತ್ತು ಅಯೋಧ್ಯೆಯ ವಿಷಯಗಳನ್ನು ಕೆದಕಲು ಪ್ರಯತ್ನಿಸಿದರು. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು 2016ರಲ್ಲಿ ಉರಿ ಸೇನಾ ಶಿಬಿರದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಸ್ಥಗಿತಗೊಂಡಿವೆ. ಬಳಿಕ ಭಾರತ ಸರ್ಕಾರವು ತನ್ನ ಸಂವಿಧಾನದ 370ನೇ ವಿಧಿಯನ್ನು ಹಿಂತೆಗೆದುಕೊಂಡಾಗ ಪಾಕಿಸ್ತಾನ ನೀಡಿದ ಪ್ರತಿಕ್ರಿಯೆಯಿಂದಾಗಿ ಸಂಬಂಧ ಮತ್ತಷ್ಟು ಹಳಸಿದೆ. ಆಗ ಭಾರತವು ಜಮ್ಮು ಮತ್ತು ಕಾಶ್ಮೀರವನ್ನು ಸಂಪೂರ್ಣವಾಗಿ ತನ್ನೊಂದಿಗೆ ಸಮ್ಮಿಳನ ಗೊಳಿಸಿಕೊಂಡಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಾಕಿಸ್ತಾನವು ಸುಧಾರಿಸಬಹುದಾದ ಸಂಬಂಧವನ್ನು ಹಾಳು ಮಾಡಿದೆ. ಅಯೋಧ್ಯೆ ಭೂ ವಿವಾದದ ತೀರ್ಪಿನ ಬಗ್ಗೆ ಅನಗತ್ಯವಾಗಿ ಪ್ರತಿಕ್ರಿಯಿಸುವ ಮೂಲಕ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಗಿದೆ. ಪರಿಸ್ಥಿತಿ ತಿಳಿಗೊಳಿಸಲು ಕರ್ತಾರ್‌ಪುರ ಕಾರಿಡಾರ್‌ ಉದ್ಘಾಟನಾ ಕಾರ್ಯಕ್ರಮ ಒಂದು ಉತ್ತಮ ಅವಕಾಶವಾಗಿತ್ತು. ಆದರೆ ಪಾಕಿಸ್ತಾನದ ನಡೆಯಿಂದಾಗಿ ಅಂಥ ಅವಕಾಶವೊಂದು ಕಳೆದುಹೋಯಿತು. ವಾಸ್ತವವಾಗಿ ಪಾಕಿಸ್ತಾನ ಈಗ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಮ್ರಾನ್ ಖಾನ್ ಅವರಿಗೆ ದೇಶವನ್ನು ಅವ್ಯವಸ್ಥೆಯಿಂದ ಹೊರತರುವ ಸಾಮರ್ಥ್ಯ ಇದೇಯೇ ಎಂಬ ಗಂಭೀರ ಸವಾಲು ಹುಟ್ಟುಕೊಂಡಿದೆ. ಫಜ್ಲೂರ್ ರೆಹಮಾನ್ ನೇತೃತ್ವದ ಜಮಿಯತ್ ಉಲೆಮಾ-ಇ-ಇಸ್ಲಾಂ, ಜುಐ (ಎಫ್) ಸಂಘಟನೆಯ ಸಾವಿರಾರು ಕಾರ್ಯಕರ್ತರು ಇಸ್ಲಾಮಾಬಾದ್‌ನಲ್ಲಿ ಜಮಾಯಿಸಿ ಇಮ್ರಾನ್ ಖಾನ್ ಅವರು ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಇತರ ವಿರೋಧ ಪಕ್ಷಗಳು ಸಹ ಪಾಕಿಸ್ತಾನ ಸರ್ಕಾರದ ವಿರುದ್ಧ ಹೋರಾಟ ನಡೆಸಿವೆ. ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಿಎಂಎಲ್ (ಎನ್) ನಾಯಕರು ಪಾಕಿಸ್ತಾನ ಸರ್ಕಾರವು ತಮ್ಮ ಪಕ್ಷ ಹಾಗೂ ನವಾಜ್ ಷರೀಫ್ ಕುಟುಂಬವನ್ನು ಮುಗಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಭಾರತದ ವಿರೋಧಿ ಮಾತುಗಳನ್ನು ಆಡಿ ಜನರ ಗಮನವನ್ನು ನಿಜ ಸಮಸ್ಯೆಗಳಿಂದ ಬೇರೆಡೆ ಸರಿಯುವಂತೆ ಮಾಡುವುದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಕಾರ್ಯತಂತ್ರವಾಗಿರಬಹುದು ಎಂದು ವಿಶ್ಲೇಷಕರು ವ್ಯಾಖ್ಯಾನ ಮಾಡುತ್ತಾರೆ. ಆದರೆ ಭಯೋತ್ಪಾದನಾ ಚಟುವಟಿಕೆಗಳನ್ನು ಪ್ರಚೋದಿಸುವುದು ಮತ್ತು ಭಾರತದ ಆಂತರಿಕ ವಿಷಯಗಳಲ್ಲಿ ಮೂಗುತೂರಿಸುವುದನ್ನು ನಿಲ್ಲಿಸದೇ ಇದ್ದರೆ ಭಾರತದೊಂದಿಗಿನ ಸಂಬಂಧ ಸುಧಾರಿಸಲು ಸಾಧ್ಯವಿಲ್ಲ ಎಂಬ ಸಂಗತಿಯನ್ನು ಪಾಕಿಸ್ತಾನವು ಅರ್ಥಮಾಡಿಕೊಳ್ಳಬೇಕಾಗಿದೆ.

ಸ್ಕ್ರಿಪ್ಟ್: ರಟ್ಟನ್ ಸಾಲ್ಡಿ, ರಾಜಕೀಯ ನಿರೂಪಕ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ