ಬ್ರಿಕ್ಸ್ ಸದಸ್ಯ ರಾಷ್ಟ್ರಗಳೊಂದಿಗೆ ಬಲಿಷ್ಟಗೊಂಡ ಭಾರತದ ಒಪ್ಪಂದ
ಭಾರತವು ಮಾಡಿಕೊಂಡ ಬಹುಪಕ್ಷೀಯ ಒಪ್ಪಂದಗಳ ರೀತಿಯಲ್ಲಿಯೇ ನಾಲ್ಕು ರಾಷ್ಟ್ರಗಳ ಗುಂಪು ಅಸ್ತಿತ್ವಕ್ಕೆ ಬಂದ ಬಳಿಕ ಬ್ರಿಕ್ಸ್ ವಿದೇಶಾಂಗ ನೀತಿಯಲ್ಲಿ ಬಹಳ ಮುಖ್ಯವಾದ ಕಾರ್ಯತಂತ್ರದ ಜಾಗವನ್ನು ತನ್ನದಾಗಿಸಿಕೊಂಡಿದೆ. ಬ್ರಿಕ್ಸ್ ದೇಶಗಳ ಉದಯೋನ್ಮುಖ ಆರ್ಥಿಕತೆಗಳು ಭೌಗೋಳಿಕ-ರಾಜಕೀಯ ಮತ್ತು ಭೌಗೋಳಿಕ-ಅರ್ಥಶಾಸ್ತ್ರದ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಜಗತ್ತು ದೊಡ್ಡ ಮಟ್ಟದಲ್ಲಿ ಪರಿಗಣಿಸಲೇಬೇಕಾದ ಪ್ರಮುಖ ಘಟಕಗಳಾಗಿವೆ. ಈ ಹಿನ್ನೆಲೆಯಲ್ಲಿ ಬ್ರೆಜಿಲ್ ರಾಜಧಾನಿ ಬ್ರೆಸಿಲಿಯಾದಲ್ಲಿ ನಡೆದ 11ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು ಪ್ರಮುಖವಾದುದು ಎಂದುಕೊಳ್ಳಬಹುದು. ಬ್ರಿಕ್ಸ್ ಶೃಂಗಸಭೆಯ ಪ್ರಾಮುಖ್ಯತೆ ಬಗ್ಗೆ ಸಾರಿ ಹೇಳಿದ ಪ್ರಧಾನಿ ಮೋದಿ ಅವರು ಭಾರತ ಮತ್ತು ಉಳಿದ ಬ್ರಿಕ್ಸ್ ರಾಷ್ಟ್ರಗಳು ಬ್ರಿಕ್ಸ್ ಚೌಕಟ್ಟಿನೊಳಗೆ ಭಯೋತ್ಪಾದನೆ ನಿರ್ಮೂಲನೆಗೆ ಕಾರ್ಯವಿಧಾನಗಳನ್ನು ರೂಪಿಸಲು ನೋಡುತ್ತಿವೆ ಎಂದು ಅಭಿಪ್ರಾಯಪಟ್ಟರು.
ಬ್ರಿಕ್ಸ್ ಬಿಸಿನೆಸ್ ಕೌನ್ಸಿಲ್ ಸಭೆ ಉದ್ದೇಶಿಸಿ ಮಾತನಾಡಿದ ಭಾರತದ ಪ್ರಧಾನ ಮಂತ್ರಿ ಮೋದಿ, ‘ಬ್ರಿಕ್ಸ್ ದೇಶಗಳ ಆರ್ಥಿಕ ಬೆಳವಣಿಗೆಯು ವಿಶ್ವದ ಆರ್ಥಿಕ ಬೆಳವಣಿಗೆಯ ಶೇಖಡ 50ರಷ್ಟಿದೆ ಎಂಬುದನ್ನು ಒತ್ತಿ ಹೇಳಿದರು. ಅಲ್ಲದೆ "ಇಡೀ ವಿಶ್ವವೇ ಆರ್ಥಿಕ ಹಿಂಜರಿತದ ಹೊಡೆತಕ್ಕೆ ಸಿಲುಕಿದ್ದರೂ ಬ್ರಿಕ್ಸ್ ದೇಶಗಳು ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಗತಿ ಕಂಡಿವೆ. ಈ ದೇಶಗಳಲ್ಲಿ ಲಕ್ಷಾಂತರ ಜನರು ಬಡತನದಿಂದ ಮೇಲೆ ಬಂದಿದ್ದಾರೆ. ತಂತ್ರಜ್ಞಾನ ಮತ್ತು ಆವಿಷ್ಕಾರಗಳಲ್ಲಿ ಹೊಸ ಪ್ರಗತಿಯನ್ನು ಸಾಧಿಸಲಾಗಿದೆ. ನಮ್ಮ ಮಾರುಕಟ್ಟೆಯ ಗಾತ್ರ, ವೈವಿಧ್ಯತೆ ಮತ್ತು ಪೂರೈಕೆಗಳು ಪರಸ್ಪರ ಪ್ರಯೋಜನಕಾರಿಯಾಗಿವೆ" ಎಂಬ ವಿಶೇಷತೆಯನ್ನು ತೆರೆದಿಟ್ಟರು. ಭಾರತವು ವಿಶ್ವದ ಅತ್ಯಂತ ಮುಕ್ತ ಮತ್ತು ಹೂಡಿಕೆಸ್ನೇಹಿ ಆರ್ಥಿಕತೆಯಾಗಿದೆ ಎಂದು ವಿಶ್ವ ಉದ್ಯಮ ಸಮುದಾಯಕ್ಕೆ ತಿಳಿಸಿದರು. ಭಾರತ ದೇಶವನ್ನು ಅಪರಿಮಿತ ಅವಕಾಶಳನ್ನೊಳಗೊಂಡ ನೆಲವೆಂದು ಬಣ್ಣಿಸಿದ ಪ್ರಧಾನಿ ಮೋದಿ, ಬ್ರಿಕ್ಸ್ ದೇಶಗಳ ಉದ್ಯಮ ಪತಿಗಳಿಗೆ ವಿಶೇಷವಾಗಿ ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಒತ್ತಾಯಿಸಿದರು. ಮುಂದಿನ ಬ್ರಿಕ್ಸ್ ಶೃಂಗಸಭೆ ನಡೆಯುವ ಹೊತ್ತಿಗೆ ಕನಿಷ್ಠ ಐದು ಕ್ಷೇತ್ರಗಳನ್ನು ಗುರುತಿಸಿ ಪೂರೈಕೆಯ ಆಧಾರದ ಮೇಲೆ ಪರಸ್ಪರ ಜಂಟಿ ಉದ್ಯಮಗಳನ್ನು ನಿರ್ಮಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಬ್ರಿಕ್ಸ್ ತನ್ನ ಸದಸ್ಯ ರಾಷ್ಟ್ರಗಳ ಉನ್ನತ ನಾಯಕರಿಗೆ ಪರಸ್ಪರ ಸಮ್ಮತಿ, ಕಾಳಜಿ ಇರುವ ಹಲವು ಜಾಗತಿಕ ಸಮಸ್ಯೆಗಳನ್ನು ಚರ್ಚಿಸಲು ಉತ್ತಮವಾದ ವೇದಿಕೆಯನ್ನು ಒದಗಿಸುತ್ತದೆ. ಬ್ರಿಕ್ಸ್ ವೇದಿಕೆಯು ಬೇರೆ ಬೇರೆ ಆಯಾಮಗಳಲ್ಲಿ ಉನ್ನತ ಮಟ್ಟದ ನಾಯಕರು ಚರ್ಚಿಸಲು, ಪರಸ್ಪರ ತಮ್ಮ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಳ್ಳಲು ಹಾಗೂ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಬಹುಪಕ್ಷೀಯ ವಿಷಯಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಧನಾತ್ಮಕವಾಗಿ ಮತ್ತು ಕ್ರೀಯಾತ್ಮಕವಾಗಿ ಬಳಸಿಕೊಳ್ಳಬಹುದಾಗಿದೆ. ಇದೇ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶೃಂಗಸಭೆಯ ಸೈಡ್ ಲೈನ್ ಸಭೆಯಲ್ಲಿ ಭೇಟಿಯಾದರು. ಅವರನ್ನು ಭೇಟಿ ಮಾಡಿದ ಆ ಭೇಟಿಯ ಮಹತ್ವದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, “ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಅತ್ಯುತ್ತಮ ಸಭೆ ನಡೆಸಲಾಯಿತು. ಭಾರತ ಮತ್ತು ರಷ್ಯಾ ಸಂಬಂಧಗಳ ಪೂರ್ಣಶ್ರೇಣಿಯನ್ನು ಈ ಸಭೆಯಲ್ಲಿ ಪರಿಶೀಲಿಸಿದ್ದೇವೆ. ವ್ಯಾಪಾರ, ಭದ್ರತೆ ಮತ್ತು ಸಂಸ್ಕೃತಿಯಂತಹ ಕ್ಷೇತ್ರಗಳಲ್ಲಿ ಭಾರತ ಮತ್ತು ರಷ್ಯಾ ವ್ಯಾಪಕವಾಗಿ ಸಹಕರಿಸುತ್ತಿವೆ. ದ್ವಿಪಕ್ಷೀಯ ಸಂಬಂಧಗಳಿಂದಾಗಿ ನಮ್ಮ ರಾಷ್ಟ್ರಗಳ ಜನರು ಪ್ರಯೋಜನ ಪಡೆಯುತ್ತಾರೆ” ಎಂದು ಹೇಳೀದರು. ಇನ್ನೊಂದೆಡೆ ”ರಷ್ಯಾ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರವು ಶೇಖಡ 17ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ’ ಎಂದು ಪುಟಿನ್ ಅಭಿಪ್ರಾಯಪಟ್ಟರು. ಮುಂದಿನ ವರ್ಷ ಮೇ ತಿಂಗಳಲ್ಲಿ ರಷ್ಯಾದಲ್ಲಿ ನಡೆಯುವ ವಿಜಯ ದಿನಾಚರಣೆಗೆ ಪುಟಿನ್ ಅವರು ಮೋದಿ ಅವರಿಗೆ ಆಹ್ವಾನ ನೀಡಿದರು.
ಮಾಮಲ್ಲಾಪುರಂನಲ್ಲಿ ನಡೆದ ಎರಡನೇ ಅನೌಪಚಾರಿಕ ಶೃಂಗಸಭೆಯ ಬಳಿಕ ಒಂದೇ ತಿಂಗಳ ಅಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾದರು. ಭೇಟಿ ವೇಳೆ ಇಬ್ಬರೂ ನಾಯಕರು ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳ ಬಗ್ಗೆ ಸಮಾಲೋಚನೆ ನಡೆಸಿದರು. ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಆರ್‌ಸಿಇಪಿಗೆ ಸೇರಬಾರದೆಂದು ಭಾರತ ನಿಶ್ಚಿಯಿಸಿದ ಕೆಲವೇ ದಿನಗಳಲ್ಲಿ ಈ ಸೈಡ್‌ಲೈನ್ಸ್ ಸಭೆ ನಡೆದಿದೆ. ಇಲ್ಲಿ ಗಮನಾರ್ಹವಾದ ಸಂಗತಿ ಏನೆಂದರೆ ಭಾರತವನ್ನು ಆರ್‌ಸಿಇಪಿಗೆ ಸೇರಿಸಿಕೊಳ್ಳಲು ಚೀನಾ ಉತ್ಸುಕವಾಗಿದೆ ಎಂಬುದು. ಭಾರತವನ್ನು ಆರ್‌ಸಿಇಪಿಗೆ ಸೇರಿಸಿಕೊಳ್ಳುವ ವಿಷಯದಲ್ಲಿ ಚೀನಾ ನಾಯಕರು ಆಶಾವಾದವನ್ನೂ ವ್ಯಕ್ತಪಡಿಸಿದ್ದಾರೆ. ಇನ್ನು ಎರಡನೇ ಅನೌಪಚಾರಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರಿಗೆ ನೀಡಿದ ಆತ್ಮೀಯ ಸ್ವಾಗತಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಧನ್ಯವಾದ ಸಮರ್ಪಿಸಿದರು. ಜೊತೆಗೆ ಇದೇ ಸಂದರ್ಭದಲ್ಲಿ ಮುಂದಿನ ವರ್ಷ ಚೀನಾ ಆಯೋಜಿಸಲಿರುವ ಮೂರನೇ ಅನೌಪಚಾರಿಕ ಶೃಂಗಸಭೆಗೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದರು. ಬಳಿಕ ಇಬ್ಬರೂ ನಾಯಕರು ‘ಮುಂದೆ ಹೊಸ ವ್ಯಾಪಾರ ಮತ್ತು ಆರ್ಥಿಕತೆಯ ಉನ್ನತ ಮಟ್ಟದ ಕಾರ್ಯವಿಧಾನ’ ಆರಂಭವಾಗುವ ಸಂದರ್ಭದಲ್ಲಿ ಮತ್ತೆ ಭೇಟಿಯಾಗಬೇಕು’ ಎಂದು ಅಭಿಪ್ರಾಯಪಟ್ಟರು. ಗಡಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಎರಡೂ ದೇಶಗಳ ವಿಶೇಷ ಪ್ರತಿನಿಧಿಗಳು ಮತ್ತೊಂದು ಸಭೆ ನಡೆಸಲಿದ್ದಾರೆ. ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳುವುದು ಎರಡೂ ದೇಶಗಳ ಉದ್ದೇಶ ಎಂದು ಶಾಂತಿ ಮಾತುಕತೆಯ ಮಹತ್ವವನ್ನು ಪುನರುಚ್ಚರಿಸಿದರು. ಅಲ್ಲದೆ ಇಬ್ಬರೂ ನಾಯಕರು ಬ್ರಿಕ್ಸ್, ಡಬ್ಲ್ಯುಟಿಒ ಮತ್ತು ಆರ್‌ಸಿಇಪಿ ಯಂತಹ ಪರಸ್ಪರ ಆಸಕ್ತಿಯ ವಿಷಯಗಳ ಬಗ್ಗೆಯೂ ಸಮಾಲೋಚನೆ ನಡೆಸಿದರು.
ಮುಂದಿನ ವರ್ಷ ಭಾರತ ಮತ್ತು ಚೀನಾ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾದ 70ನೇ ವರ್ಷಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಆಚರಣೆಯ ಸಿದ್ಧತೆಗಳನ್ನು ಭಾರತದ ಪ್ರಧಾನಿ ಮತ್ತು ಚೀನಾದ ಅಧ್ಯಕ್ಷರು ಪರಿಶೀಲಿಸಿದರು. ಇಂಥ ವರ್ಷಾಚರಣೆಗಳು ಎರಡೂ ದೇಶದ ಜನರ ಸಂಬಂಧವನ್ನು ವೃದ್ಧಿಸುತ್ತದೆ ಎಂದು ಇಬ್ಬರೂ ನಾಯಕರು ಅಭಿಪ್ರಾಯಪಟ್ಟರು.
Comments
Post a Comment