ಸಂಸತ್ತಿನ ಚಳಿಗಾಲದ ಅಧಿವೇಶನದ ವಿಷಯಗಳು
ಭಾರತೀಯ ಸಂಸತ್ತಿನ ಚಳಿಗಾಲದ ಅಧಿವೇಶನವು ನವೆಂಬರ್ 18ರಿಂದ ಡಿಸೆಂಬರ್ 13ರವರೆಗೆ ನಡೆಯಲಿದೆ. ಈ ಚಳಿಗಾಲದ ಅಧಿವೇಶನದಲ್ಲಿ ಹಲವು ಮಸೂದೆಗಳ ಮಂಡನೆಯಾಗುವ ಸಾಧ್ಯತೆಯಿದೆ. ಈ ಅಧಿವೇಶನದಲ್ಲಿ ಎರಡು ನಿರ್ಣಾಯಕ ಸುಗ್ರೀವಾಜ್ಞೆಗಳನ್ನು ಕಾನೂನಾಗಿ ಪರಿವರ್ತಿಸಲು ಪ್ರಯತ್ನಿಸಲಾಗುವುದು. ನೀತಿ, ಉತ್ಪಾದಕತೆ ಮತ್ತು ರಾಜಕೀಯ ಸಹಮತ ಎಂಬ ಮೂರು ರಾಷ್ಟ್ರೀಯ ಹಿತಾಸಕ್ತಿಯ ಅಂಶಗಳನ್ನೊಳಗೊಂಡ ವಿಷಯಗಳ ಚರ್ಚೆಯಾಗುವುದರಿಂದ ಅಧಿವೇಶನವು ಬಹಳ ನಿರ್ಣಾಯಕ ಕೂಡ ಆಗಿದೆ. ಇದೇ ಹಿನ್ನೆಲೆಯಲ್ಲಿ ಆಳುವ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾರೀ ಗದ್ದಲವಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಏಕೆಂದರೆ ಪ್ರತಿಪಕ್ಷಗಳು ವಿವಿಧ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವಿಷಯಗಳನ್ನು ಚರ್ಚೆ ಮಾಡುವ ಮೂಲಕ ಕೇಂದ್ರ ರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ. ಕಳೆದ ಎರಡು ವರ್ಷಗಳಿಂದ ಚಳಿಗಾಲದ ಅಧಿವೇಶನಗಳನ್ನು ನವೆಂಬರ್ 21ರವರೆಗೆ ಕರೆಯಲಾಗುತ್ತಿತ್ತು. ಇದಕ್ಕೂ ಮೊದಲು ಚಳಿಗಾಲದ ಅಧಿವೇಶನ ಜನವರಿ ಮೊದಲ ವಾರದಲ್ಲಿ ಕೊನೆಗೊಳ್ಳುತ್ತಿತ್ತು.
ಹಿಂದೆ ನಡೆದ ಈ ವರ್ಷದ ಮಳೆಗಾಲದ ಅಧಿವೇಶನದಲ್ಲಿ ತ್ರಿವಳಿ ತಲಾಖ್, ಮೋಟಾರು ವಾಹನ ಕಾಯ್ದೆ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆಗೆ ತಿದ್ದುಪಡಿಗಳನ್ನು ತರುವಂತಹ ಮಸೂದೆಗಳಿಗೆ ಸಂಸತ್ತಿನ ಅಂಗೀಕಾರ ಸಿಕ್ಕಿತ್ತು. ಜಮ್ಮು ಮತ್ತು ಕಾಶ್ಮೀರವನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ಸಂಪೂರ್ಣವಾಗಿ ಸಂಯೋಜಿಸಲು ಅಡ್ಡಿಯಾಗುತ್ತಿದೆ ಎಂದು ಕಣಿವೆ ರಾಜ್ಯದಲ್ಲಿ ಜಾರಿಯಲ್ಲಿದ್ದ ಸಂವಿಧಾನದ 370ನೇ ವಿಧಿಯನ್ನು ಹಿಂತೆಗೆದುಕೊಂಡಿದ್ದು ಕಳೆದ ಅಧಿವೇಶನದ ಇನ್ನೊಂದು ಮುಖ್ಯವಾದ ಸಂಗತಿ. ಕಳೆದ ಆಗಸ್ಟ್ ನಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಷ್ಟ್ರೀಯ ನಾಗರಿಕರ ನೋಂದಣಿಯ ಅಂತಿಮ ಪಟ್ಟಿ (ಎನ್ ಆರ್ ಸಿ)ಯನ್ನು ಪ್ರಕಟಿಸಿದ ಬೆನ್ನಲ್ಲೇ ಮಳೆಗಾಲದ ಅಧಿವೇಶನದ ವೇಳೆ 2019ರ ಜನವರಿ 8ರಂದು ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿತ್ತು. ಈಗ ಚಳಿಗಾಲದ ಅಧಿವೇಶನದಲ್ಲಿ ಆ ಮಸೂದೆಯನ್ನು ಮರಳಿ ತರುವ ಸಾಧ್ಯತೆಯಿದೆ.
ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿರುವ ಎರಡು ಸುಗ್ರೀವಾಜ್ಞೆಗಳನ್ನು ಮಸೂದೆ ರೂಪದಲ್ಲಿ ಮಂಡನೆ ಮಾಡಲಾಗುವುದು. ಈ ಪೈಕಿ ಹೊಸ ಮತ್ತು ದೇಶೀಯ ಉತ್ಪಾದನಾ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆ ದರವನ್ನು ಕಡಿಮೆ ಮಾಡುವ ಮೂಲಕ ಆರ್ಥಿಕತೆ ಕುಸಿತವನ್ನು ತಡೆಗಟ್ಟಲು ಮತ್ತು ಆರ್ಥೀಕತೆಯ ಬೆಳವಣಿಗೆಯನ್ನು ಹೆಚ್ಚಿಸಲು 1961ರ ಆದಾಯ ತೆರಿಗೆ ಕಾಯ್ದೆ ಮತ್ತು 2019ರ ಹಣಕಾಸು ಕಾಯ್ದೆಗೆ ಕೇಂದ್ರ ಸರ್ಕಾರ ತಂದಿರುವ ತಿದ್ದುಪಡಿ ಮಸೂದೆ ಮೊದಲನೆಯದು. ಮಹಾರಾಷ್ಟ್ರ ಮತ್ತು ಹರಿಯಾಣದ ಚುನಾವಣಾ ಯಶಸ್ಸಿನ ಬಳಿಕ ಇದೇ ಸೆಪ್ಟೆಂಬರ್‌ನಲ್ಲಿ ತಂದ ‘ಭಾರತದಲ್ಲಿ ಇ-ಸಿಗರೆಟ್‌ಗಳ ಮಾರಾಟ, ತಯಾರಿಕೆ ಮತ್ತು ಸಂಗ್ರಹಣೆಯನ್ನು ನಿಷೇಧಿಸುವ’ ಸುಗ್ರೀವಾಜ್ಞೆಯನ್ನು ಕಾನೂನು ಗೊಳಿಸುವುದು ಎರಡನೇಯದು.
ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷದ ಹಿರಿಯ ನಾಯಕರು ಎರಡು ಪ್ರಮುಖ ವಿಷಯಗಳನ್ನು ಚರ್ಚಿಸುವ ಸುಳಿವು ನೀಡಿದ್ದಾರೆ. ಆ ಪೈಕಿ ಮೊದಲನೇಯದು ಜಮ್ಮು ಮತ್ತು ಕಾಶ್ಮೀರದ ಆರ್ಥಿಕತೆ ಹಾಗೂ ಪರಿಸ್ಥಿತಿ ಕುರಿತ ಚರ್ಚೆ. ಕಳೆದ ವಾರ ಮುಂಬೈನಲ್ಲಿ ನಡೆದ ಸಂವಾದವೊಂದರಲ್ಲಿ ಮಾಜಿ ಪ್ರಧಾನಿ ಡಾ. ಮನ್ಮೋಹನ್ ಸಿಂಗ್ ಅವರು ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್ ವಿಷಯಗಳನ್ನು ಕೂಡ ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಚರ್ಚಿಸುತ್ತೇವೆ ಎಂದು ಹೇಳಿರುವುದು ಇನ್ನೊಂದು.
ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಸಂಸತ್ತಿನ ಮೇಲ್ಮನೆ, ರಾಜ್ಯಸಭೆಯ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರು ಕಳೆದ ಭಾನುವಾರ ಸರ್ವಪಕ್ಷ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಪ್ರಸಕ್ತ ಸಂಸತ್ ಕಲಾಪ ಕಾರ್ಯಸೂಚಿಯಲ್ಲಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ ವಿಷಯವೇ ಪ್ರಾಮುಖ್ಯತೆ ಪಡೆದುಕೊಳ್ಳಬಹುದು ಎಂದು ಗೊತ್ತಾಗಿದೆ. ಆಡಳಿತಾರೂಢ ಬಿಜೆಪಿಗೆ ಮೇಲ್ಮನೆಯಲ್ಲಿ ಬಹುಮತ ಇಲ್ಲರುವುದು ಹಲವು ವರ್ಷಗಳಲ್ಲಿ ಇದೇ ಮೊದಲು. ಬಿಜು ಜನತಾದಳ (ಬಿಜೆಡಿ), ತೆಲಂಗಾಣ ರಾಷ್ಟ್ರ ಸಮಿತಿ (ಟಿಎಸ್ಆರ್) ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ) ಗಳು ಬಿಜೆಪಿಗೆ ವಿಷಯಾಧಾರಿತ ಬೆಂಬಲ ನೀಡಿರುವುದು ಗಮನಿಸಬೇಕಾದ ಸಂಗತಿಯಾಗಿದೆ.
ಗಡಿಯಾಚೆಗಿನ ದಿವಾಳಿತನಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ‘ಇನ್ಸೊಲ್ವೆನ್ಸಿ ಅಂಡ್ ಬ್ಯಾಂಕರೆಪ್ಸಿ ಕೋಡ್’ (ಐಬಿಸಿ)ಗೆ ತಿದ್ದುಪಡಿ ಮಾಡುವ ಮುಸೂದೆಯನ್ನು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ಚಿಂತನೆ ಕೇಂದ್ರ ಸರ್ಕಾರದ್ದಾಗಿದೆ. ‘ಇನ್ಸೊಲ್ವೆನ್ಸಿ ಅಂಡ್ ಬ್ಯಾಂಕರೆಪ್ಸಿ ಕೋಡ್’ (ಐಬಿಸಿ)ಗೆ ತಿದ್ದುಪಡಿ ಮಾಡುವುದುರಿಂದ ಬಾಕಿ ಉಳಿಸಿಕೊಂಡು ವಿದೇಶಕ್ಕೆ ಪರಾರಿಯಾದವರಿಂದ ಭಾರತೀಯ ಸಂಸ್ಥೆಗಳಿಗೆ ಬಾಕಿ ಹಣ ಪಡೆಯುವುದು ಸುಲಭವಾಗುತ್ತದೆ. ವಿದೇಶಿ ಸಾಲಗಾರರಿಗೆ ಭಾರತೀಯ ಕಂಪನಿಗಳಿಂದ ಸಾಲ ಮರುಪಡೆಯುವುದಕ್ಕೂ ಅವಕಾಶ ನೀಡಲಾಗುತ್ತದೆ. ವಿದೇಶಿ ಸಾಲಗಾರರ ಹೊರತಾಗಿ ಇದು ಭಾರತೀಯ ಬ್ಯಾಂಕುಗಳ ವಿದೇಶಿ ಶಾಖೆಗಳಿಗೆ ಭಾರತದಲ್ಲಿ ತಮ್ಮ ಬಾಕಿ ಹಣವನ್ನು ವಸೂಲಿ ಮಾಡಲು ಸಹಾಯ ಮಾಡುತ್ತದೆ. ಐಬಿಸಿಯೊಳಗೆ ಗಡಿಯಾಚೆಗಿನ ದಿವಾಳಿತನ ನಿಬಂಧನೆಗಳನ್ನು ಪರಿಚಯಿಸುವುದರಿಂದ ಸಾಲಗಾರರ ಆಸ್ತಿಗಳು ಪ್ರಪಂಚದಾದ್ಯಂತ ಹರಡಿರುವ ಸಂದರ್ಭಗಳಲ್ಲಿ ಪರಿಹಾರವನ್ನು ಪಡೆಯಲು ಸಾಲದಾತರಿಗೆ ನೆರವಾಗುತ್ತವೆ.
ಬ್ಯಾಂಕಿಂಗ್ ಕಂಪನಿಗಳಲ್ಲದ (ಎನ್‌ಬಿಎಫ್‌ಸಿ)ನಂತಹ ಹಣಕಾಸು ಸೇವಾ ಪೂರೈಕೆದಾರ ಸಂಸ್ಥೆಗಳು ತಮ್ಮ ಹಣ ವಾಪಸ್ ಪಡೆದುಕೊಳ್ಳಲು ‘ಇನ್ಸೊಲ್ವೆನ್ಸಿ ಅಂಡ್ ಬ್ಯಾಂಕರೆಪ್ಸಿ ಕೋಡ್’ ಅಡಿಯಲ್ಲಿ ಸೆಕ್ಷನ್ 227ಅನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರವು ಆಲೋಚನೆ ನಡೆಸಿದೆ. ಇದರಿಂದ ಪ್ರಸ್ತುತ ಹೊಡೆತ ತಿಂದಿರುವ ಸಂಸ್ಥೆಗಳಿಗೆ ನೆರವಾಗುತ್ತದೆ. ಏಕೆಂದರೆ ಅಂತಹ ಗಡಿಯಾಚೆಗಿನ ದಿವಾಳಿತನದಂತಹ ಸಂಕೀರ್ಣ ಪ್ರಕರಣಗಳನ್ನು ಪರಿಹರಿಸಲು ಈಗಿರುವ ದಿವಾಳಿತನ ಕುರಿತಾದ ಕಾನೂನಿನಲ್ಲಿ ಖಚಿತತೆ ಇಲ್ಲ. ಜವಾಬ್ದಾರಿಯುತ ಪ್ರತಿಪಕ್ಷಗಳ ಕರ್ತವ್ಯ ಕಲಾಪದ ವೇಳೆ ಗದ್ದಲ ಮಾಡುವುದು ಅಥವಾ ಸದನದಿಂದ ಹೊರನಡೆಯುವದಲ್ಲ. ಸಂಸತ್ತಿನಲ್ಲಿ ಮಂಡನೆಯಾಗುವ ಎಲ್ಲಾ ವಿಷಯಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಳ್ಳುವುದು. ಎಲ್ಲಾ ಪಕ್ಷಗಳ ಸಂಸದರು ಹೊಸ ಭಾರತಕ್ಕಾಗಿ ಒಂದು ತಂಡವಾಗಿ ಇಂತಹ ಕೆಲಸ ಮಾಡಬೇಕಾಗಿದೆ.
ಸ್ಕ್ರಿಪ್ಟ್: ಯೋಗೇಶ್ ಸೂಡ್, ಪತ್ರಕರ್ತ
Comments
Post a Comment