ಕಾಮೆಂಟರಿ
ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರವನ್ನು ಬೇರ್ಪಡಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಲಾಗಿರುವ ಪರಿಷ್ಕೃತ ನಕ್ಷೆಯನ್ನು ನವದೆಹಲಿಯು ಬಿಡುಗಡೆ ಮಾಡಿದ ನಂತರ ಉತ್ತರಾಖಂಡ ರಾಜ್ಯದ ಪಿಥೋರಘಢ ಜಿಲ್ಲೆಯ ಹಿಮಾಲಯ ಪರ್ವತ ಪ್ರದೇಶದಲ್ಲಿ ಭಾರತ, ನೇಪಾಳ ಮತ್ತು ಚೀನಾ ಗಡಿಗಳು ಸೇರು ತ್ರಿವೇಣಿ ಸಂಗಮದಂತಹ ಕಲಾಪಾನಿ ಪ್ರದೇಶದ ನಿಯಂತ್ರಣದ ವಿಚಾರವಾಗಿ ಇದ್ದ ಹಳೆಯ ವಿವಾದ ಮತ್ತೊಮ್ಮೆ ಸದ್ದುಮಾಡಿದೆ. ಕಲಾಪಾನಿ ಮತ್ತು ಅದರ ಪಕ್ಕದ ಪ್ರದೇಶಗಳನ್ನು ತನ್ನದೆಂದು ಭಾರತವು ನಕ್ಷೆಯಲ್ಲಿ ಪ್ರತಿಬಿಂಬಿಸಿದೆ. ಇನ್ನೊಂದೆಡೆ ನೇಪಾಳ ಇದು ತನ್ನ ಜಾಗವೆಂದು ಹೇಳಿಕೊಂಡಿದೆ.
1816ರಲ್ಲಿ ಅಂದಿನ ಭಾರತದ ಬ್ರಿಟಿಷ್ ಸರ್ಕಾರ ಮತ್ತು ನೇಪಾಳದ ರಾಜನ ನಡುವೆ ಐತಿಹಾಸಿಕ ಸಾಗಾಲಿ ಒಪ್ಪಂದ ಆದಾಗಿನಿಂದಲೂ ಕಲಾಪಾನಿ ವಿವಾದ ಊರ್ಜಿತದಲ್ಲಿದೆ. ಈ ಒಪ್ಪಂದವು ಮಹಾಕಾಳಿ ನದಿಯನ್ನೇ ಉಭಯ ದೇಶಗಳ ಗಡಿ ಎಂಬುದಾಗಿ ವ್ಯಾಖ್ಯಾನಿಸುತ್ತದೆ. ಆದರೆ ಮಹಾಕಾಳಿ ನದಿಯ ಮೂಲ ಸ್ಥಳದ ಬಗ್ಗೆ ಈ ಒಪ್ಪಂದದಲ್ಲಿ ಯಾವುದೇ ಉಲ್ಲೇಖವಿಲ್ಲ. ಜೊತೆಗೆ ಯಾವ ಉಪನದಿ ಮುಂದೆ ಮುಖ್ಯ ಮಹಾಕಳಿ ನದಿಯಾಗಿ ಮಾರ್ಪಡಲಿದೆ ಎಂಬುದರ ಬಗ್ಗೆಯೂ ಮಾಹಿತಿ ನೀಡಿಲ್ಲ. ಇನ್ನೊಂದೆಡೆ ಅಂದಿನ ಭಾರತದ ಬ್ರಿಟಿಷ್ ಸರ್ಕಾರ ಸರ್ವೇಯರ್ ಜನರಲ್ ಹೊರಡಿಸಿ ಕಲಾಪಾನಿ, ಲಿಪು ಲೆಖ್ ಮತ್ತು ಲಿಂಪಿಯಾಡುರಾ ಪ್ರದೇಶಗಳನ್ನು ಭಾರತೀಯ ಪ್ರದೇಶವೆಂದು ಸ್ಪಷ್ಟವಾಗಿ ಹೇಳಿಕೊಂಡಿದೆ. ಆದರೂ ನೇಪಾಳವು ಈ ಪ್ರದೇಶಗಳ ಮೇಲೆ ಸಾರ್ವಭೌಮತ್ವವನ್ನು ಪ್ರತಿಪಾದಿಸುತ್ತಾ ಬಂದಿದೆ. ಜೊತೆಗೆ ಮಹಾಕಾಳಿ ನದಿಯ ಮೂಲವನ್ನೇ ವಿವಾದವನ್ನಾಗಿ ಪರಿವರ್ತಿಸುತ್ತಿದೆ. ಕಲಾಪಾನಿಯು ತನ್ನ ದೂರದ ಪಶ್ಚಿಮ ಧಾರ್ಚುಲಾ ಜಿಲ್ಲೆಯ ಬಗೆಹರಿಯಲ್ಪಡದ ಪ್ರದೇಶ ಎಂಬುದಾಗಿ ಪ್ರತಿಪಾದಿಸುತ್ತಿದೆ.
2019ರ ನವೆಂಬರ್ 2ರಂದು ಭಾರತವು ಹೊರಡಿಸಿರುವ ನಕ್ಷೆಯನ್ನು ಪರಿಷ್ಕರಿಸಬೇಕೆಂದು ಒತ್ತಾಯಿಸಿರುವ ಅಪರೂಪದ ಘಟನೆಗೆ ನೇಪಾಳದ ರಾಜಧಾನಿ ಕಠ್ಮಂಡು ಸಾಕ್ಷಿಯಾಗಿದೆ. ನೇಪಾಳದ ವಿದೇಶಾಂಗ ಸಚಿವಾಲಯವು ಕಲಾಪಾನಿ ತನ್ನ ದೇಶದ ಒಂದು ಭಾಗ ಎಂದು ನೇಪಾಳವು ದೃಢವಾಗಿ ನಂಬಿದೆ ಎಂಬ ಹೇಳಿಕೆ ಬಿಡುಗಡೆ ಮಾಡಿತು. ಇದಕ್ಕೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಸಚಿವಾಲಯವು ನವದೆಹಲಿ ಹೊರಡಿಸಿರುವ ಹೊಸ ನಕ್ಷೆಯು ಭಾರತದ ಸಾರ್ವಭೌಮ ಪ್ರದೇಶವನ್ನು ಪ್ರತಿಬಿಂಬಿಸುತ್ತಿದೆ. ಹಾಗಾಗಿ ಯಾವುದೇ ರೀತಿಯಲ್ಲಿ ನೇಪಾಳದ ಗಡಿಯಂಚಿನಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿತು.
ವಿವಾದಕ್ಕೆ ಸಂಬಂಧಿಸಿದಂತೆ ಸರ್ವಪಕ್ಷಗಳ ಸಭೆ ನಡೆಸಿದ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರು ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತದೊಂದಿಗಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ತಮ್ಮ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ. ನೇಪಾಳವು ತನ್ನ ಭೂಪ್ರದೇಶದ ಒಂದು ಇಂಚು ಜಮೀನನ್ನೂ ಸಹ ಬಿಟ್ಟುಕೊಡುವುದಿಲ್ಲ ಎಂದು ಪ್ರತಿಪಾದಿಸಿರುವ ಓಲಿ ಅವರು, ದ್ವಿಪಕ್ಷೀಯ ಚರ್ಚೆಗಳ ಮೂಲಕವೇ ಭಾರತದೊಂದಿಗಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ತಮ್ಮ ಸರ್ಕಾರದ ಬದ್ಧತೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
2015ರಲ್ಲಿ ಬೀಜಿಂಗ್ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಲಿಪು ಲೆಖ್ ಪಾಸ್ ಅಭಿವೃದ್ಧಿಪಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲೂ ನೇಪಾಳ ಇದೇ ರೀತಿಯ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಲಿಪು ಲೆಖ್ ಪಾಸ್ ಹಿಂದೂಗಳು ಅತಿಹೆಚ್ಚು ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುವ ಯಾತ್ರಾ ಕೇಂದ್ರವಾದ ಮಾನಸ ಸರೋವರ ತಲುಪಲು ಸುಲಭದ ಮಾರ್ಗವಾಗಿದೆ. ಇದನ್ನು ನೇಪಾಳವು ತನ್ನ ಪ್ರದೇಶವೆಂದು ಹೇಳಿಕೊಂಡಿದೆ. ಈವರೆಗೆ ಇಲ್ಲಿ ಏನೂ ಆಗಿಲ್ಲ. ಭಾರತೀಯ ಭದ್ರತಾ ಪಡೆಗಳು ಈ ಪ್ರದೇಶವನ್ನು ನಿಯಂತ್ರಿಸುತ್ತಾ ಬಂದಿವೆ.
ಭಾರತ ಮತ್ತು ನೇಪಾಳ ದೇಶಗಳು ಸಂವಾದ ಪ್ರಕ್ರಿಯೆಗಳ ಮತ್ತು ತಮ್ಮ ನಿಕಟವಾದ ಸ್ನೇಹ ಸಂಬಂಧಗಳ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದರ ಪರವಾಗಿಯೇ ಇವೆ. ಆದರೂ ಬೇರೆಲ್ಲಾ ಸಮಸ್ಯೆಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವಂತೆ ಗಡಿ ವಿವಾದವೆಂಬುದು ಕೂಡ ಅಸ್ತಿತ್ವದಲ್ಲಿರುವ ಕಾರ್ಯವಿಧಾನದ ಮೂಲಕ ನಡೆಯುತ್ತಿರುವ ಪ್ರಕ್ರಿಯೆಯಿಂದಾಗಿ ಮಾತ್ರವೇ ಬಗೆಹರಿಯುವಂಥದ್ದು ಎಂಬುದನ್ನು ನವದೆಹಲಿ ಒತ್ತಿ ಹೇಳಿದೆ. ಜೊತೆಗೆ ಇಂಥ ಇಬ್ಬರು ಸ್ನೇಹಪರ ನೆರೆಹೊರೆಯವರ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಎಚ್ಚರಿಕೆ ವಹಿಸಬೇಕೆಂದು ನೇಪಾಳವನ್ನು ಒತ್ತಾಯಿಸಿದೆ.
ದೇಶೀಯ ಒತ್ತಡಗಳು, ಅಲ್ಟ್ರಾ ರಾಷ್ಟ್ರೀಯತೆ ಮತ್ತು ನೇಪಾಳ ವ್ಯವಹಾರಗಳ ಮೇಲೆ ಹಿಡಿತ ಸಾಧಿಸಲೆತ್ನಿಸುತ್ತಿರುವ ಬಾಹ್ಯ ಹಿತಾಸಕ್ತಿಗಳು ಬಹುಶಃ ಕಠ್ಮಂಡು ಜೊತೆ ಭಾರತದೊಂದಿಗಿನ ಸಮಸ್ಯೆಗಳನ್ನು ಉದ್ದೇಶಪೂರ್ವಕವಾಗಿ ಜೀವಂತವಾಗಿಡಲು ಪ್ರಯತ್ನಿಸುತ್ತಿರಬಹುದು. ಆದರೆ ಭಾರತ-ನೇಪಾಳ ದೇಶಗಳಲ್ಲಿನ ನಾಯಕತ್ವವು ಎಲ್ಲಾ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಸಂವಾದದ ಮೂಲಕ ಪರಿಹರಿಸಿಕೊಳ್ಳಲು ಬಯಸುತ್ತದೆ. ಕಲಾಪಾನಿ ವಿವಾದದ ವಿಷಯದಲ್ಲಿಯೂ ಉಭಯ ದೇಶಗಳ ನಡುವೆ ಪ್ರಾಥಮಿಕ ಸಂವಾದ ಪ್ರಕ್ರಿಯೆ ಪ್ರಾರಂಭವಾಗಿದೆ. ನೇಪಾಳದ ಭಾರತದ ರಾಯಭಾರಿ ನಿಲಾಂಬರ್ ಆಚಾರ್ಯ ನವದೆಹಲಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಿದರು. ಈ ವಿಷಯದ ಬಗ್ಗೆ ನೇಪಾಳವು ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಚರ್ಚೆಗಳನ್ನೂ ಎದುರು ನೋಡುತ್ತಿದೆ. ಕಲಾಪಾನಿಯ ಬಗ್ಗೆ ಐತಿಹಾಸಿಕ ಸಂಗತಿಗಳನ್ನು ಪತ್ತೆಹಚ್ಚಲೆಂದು ನೇಪಾಳ ಸರ್ಕಾರವು ತಜ್ಞರ ಕಾರ್ಯಪಡೆಯನ್ನೂ ಸ್ಥಾಪಿಸಿದೆ.
ಕಳೆದ ಆಗಸ್ಟ್‌ನಲ್ಲಿ ವಿದೇಶಾಂಗ ಸಚಿವರ ಮಟ್ಟದ ನೇಪಾಳ-ಭಾರತ ಜಂಟಿ ಆಯೋಗವು ಕಠ್ಮಂಡುವಿನಲ್ಲಿ ತನ್ನ 5ನೇ ಸಭೆ ನಡೆಸಿ ದ್ವಿಪಕ್ಷೀಯ ಸಂಬಂಧಗಳ ಕುರಿತಾದ ಸಂಪೂರ್ಣ ವಿವರಗಳ ಬಗ್ಗೆ ಸಮಾಲೋಚನೆ ನಡೆಸಿತು. ವಾಸ್ತವವಾಗಿ ಭಾರತ ಮತ್ತು ನೇಪಾಳ ನಡುವಿನ ಸಂಬಂಧಗಳು ಕಳೆದ ವರ್ಷದಂತೆ ಗಟ್ಟಿಗೊಳ್ಳುತ್ತಾ ಹೊಸ ಎತ್ತರವನ್ನು ಮುಟ್ಟಿವೆ. ಉಭಯ ದೇಶಗಳು ರಾಕ್ಸೌಲ್-ಕಠ್ಮಂಡು ವಿದ್ಯುದ್ದೀಕೃತ ರೈಲು ಮಾರ್ಗ, ಇಲ್ಲಿಯವರೆಗೆ ಅನ್ವೇಷಿಸದಂತಹ ಜಲಮಾರ್ಗಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಕೃಷಿ ಎಂಬ ಮೂರು ಹೊಸ ಸಹಕಾರ ಕ್ಷೇತ್ರಗಳನ್ನು ಕೂಡ ಗುರುತಿಸಿಕೊಂಡಿವೆ.
ಕಲಾಪಾನಿ ವಿವಾದವು ಭಾರತ ಮತ್ತು ನೇಪಾಳ ಎರಡು ದೇಶಗಳಿಗೂ ಸೂಕ್ಷ್ಮವಾದ ವಿಷಯ ಎಂಬುದರಲ್ಲಿ ಸಂಶಯಗಳಿಲ್ಲ. ಈ ನಡುವೆ ಉಭಯ ದೇಶಗಳ ಗಡಿ ಸಮೀಕ್ಷಾ ತಂಡಗಳು ಕಾರ್ಯಪ್ರವೃತ್ತವಾಗಿದ್ದು ಈ ವಿವಾದವನ್ನು ಶೀಘ್ರದಲ್ಲೇ ಸೌಹಾರ್ದಯುತವಾಗಿ ಬಗೆಹರಿಸುತ್ತವೆ ಎಂದು ನಿರೀಕ್ಷಿಸಲಾಗಿದೆ.
ಕಲಾಪಾನಿ ವಿವಾದ
ಸ್ಕ್ರಿಪ್ಟ್: ರಟ್ಟನ್ ಸಾಲ್ಡಿ, ರಾಜಕೀಯ ನಿರೂಪಕ
Comments
Post a Comment