ವಿಚಾರ ರಹಿತ ಪಾಕಿಸ್ತಾನ

ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ಪಾಕಿಸ್ತಾನವು ಕಳೆದ ಒಂದು ತಿಂಗಳಲ್ಲಿ ಎಲ್ಲಾ ಸಮಸ್ಯೆಗಳನ್ನು ಬಿಟ್ಟಾಕಿ ರಾಜಕೀಯವನ್ನೇ ಆಸಕ್ತಿದಾಯಕ ವಿಚಾರವೆಂದು ಬಿಂಬಿಸುತ್ತಿರುವ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ.

ಈ ತಿಂಗಳು ಪೂರ್ತಿ ಪಾಕಿಸ್ತಾನದ ರಾಜಕೀಯ ಮೇಲಾಟವು ಮೌಲಾನಾ ಫಜ್ಲೂರ್ ರಹಮಾನ್ ಅವರ “ಆಜಾದಿ ಮಾರ್ಚ್” ಸುತ್ತಲೇ ಗಿರಕಿ ಹೊಡೆದಿದೆ. ಜೊತೆಗೆ ಅನಾರೋಗ್ಯದಿಂದ ಬಳಲುತ್ತಿರುವ ಮೂರು ಬಾರಿ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದ್ದ ನವಾಜ್ ಷರೀಫ್ ಅವರಿಗೆ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಲು ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚಿಸಲಾಗಿದೆ! ಪಾಕಿಸ್ತಾನ ದೂರದರ್ಶನ ವಾಹಿನಿಗಳ ಪ್ರೈಂ ಟೈಂಗಳು ಮತ್ತು ಮುದ್ರಣ ಮಾಧ್ಯಮಗಳಲ್ಲಿನ ಪ್ರಮುಖ ಪುಟಗಳು ಆ ದೇಶದ ಭವಿಷ್ಯವನ್ನು ರೂಪಿಸಲು ಪ್ರೇರಕವಾಗುವಂತ ವಿಷಯಗಳ ಮೇಲೆ ಕೇಂದ್ರೀಕರಿಸುವ ಬದಲಿಗೆ ಇಂತಹ ವಿಷಯಗಳಿಗೆ ಬಹಳ ಪ್ರಾಮುಖ್ಯತೆಯನ್ನು ಕೊಟ್ಟಿವೆ.

ಅಕ್ಟೋಬರ್ 27ರಂದು ಸುಕ್ಕೂರ್‌ನಿಂದ ಪ್ರಾರಂಭವಾಗಿ ಕೆಲ ದಿನಗಳ ನಂತರ ಇಸ್ಲಾಮಾಬಾದ್ ತಲುಪಿದ ಫಜ್ಲೂರ್ ಅವರ ಮೆರವಣಿಗೆ ಬಹಳ ದೊಡ್ಡ ಮಟ್ಟದಲ್ಲಿ ಮಾಧ್ಯಮಗಳ ಗಮನ ಸೆಳೆಯಿತು. ಮೆರವಣಿಗೆಯ ಮುಖ್ಯ ಉದ್ದೇಶ ಇಮ್ರಾನ್ ಖಾನ್ ಸರ್ಕಾರವನ್ನು ಉರುಳಿಸುವುದು ಎಂದು ಮೌಲಾನಾ ಫಜ್ಲೂರ್ ಹೇಳಿದರು. 'ಸರ್ಕಾರ ಉರಳದೆ ನಮ್ಮ ಜನರು ಇಸ್ಲಾಮಾಬಾದ್ ಅನ್ನು ತೊರೆಯುವುದಿಲ್ಲ’ ಎಂದು ಕೂಡ ತಿಳಿಸಿದರು. ಅವರ ಪಕ್ಷದ ಕಾರ್ಯಕರ್ತರು ಕೋಲುಗಳನ್ನು ಝಳಪಿಸುತ್ತಿರುವ ದೃಶ್ಯಾವಳಿಗಳು ವೈರಲ್ ಆದವು. ಇದರಿಂದಾಗಿ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡು ಸರ್ಕಾರವನ್ನೇ ಅಲುಗಾಡಿಸಬಹುದು ಎಂಬ ವ್ಯಾಖ್ಯಾನಗಳು ಕೇಳಿಬಂದವು. ಇದಾದ ಕೆಲ ದಿನಗಳ ಬಳಿಕ ಸರ್ಕಾರವು ಒಂದು ಮಟ್ಟದಲ್ಲಿ ತನ್ನ ಅಚಲತೆಯನ್ನು ಮತ್ತು ಇನ್ನೊಂದು ಹಂತದಲ್ಲಿ ಆತಂಕವನ್ನು ಇಟ್ಟುಕೊಂಡು ಫಜ್ಲೂರ್ ಮತ್ತು ಇತರೆ ಕೆಲವು ವಿರೋಧ ಪಕ್ಷದ ನಾಯಕರೊಂದಿಗೆ ಮೂಲ ವಿಷಯಗಳ ಕುರಿತಾದ ಮಾತುಕತೆಗಳನ್ನು ನಡೆಸಿತು. ಸರ್ಕಾರವು ಮೌಲಾನಾ ಅವರ ಬಳಿ ಮೆರವಣಿಗೆಯನ್ನು ಕೈಬಿಡುವಂತೆ ಕೇಳಿಕೊಂಡಿತು. ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡ ಮೌಲಾನಾ‌, ಇಸ್ಲಾಮಾಬಾದ್ ಅನ್ನು ಬಿಟ್ಟು ತಮ್ಮ ಪ್ಲಾನ್ ಬಿ ಪ್ರಕಾರ ದೇಶಾದ್ಯಂತ ಸಣ್ಣ ಪುಟ್ಟ ಪಟ್ಟಣಗಳಲ್ಲಿ ಮೆರವಣಿಗೆ ಆಯೋಜಿಸುವಂತೆ ಬೆಂಬಲಿಗರಲ್ಲಿ ಕೇಳಿಕೊಂಡರು‌. ಈ ಮೂಲಕ ಇಮ್ರಾನ್ ಖಾನ್ ಸರ್ಕಾರದ ವೈಫಲ್ಯಗಳ ಬಗ್ಗೆ ಜನ ಮಾತನಾಡಿಕೊಳ್ಳುವಂತಾಯಿತು. ಈ ಘಟನಾವಳಿಗಳನ್ನು ಹತ್ತಿರದಿಂದ ಕಂಡ ಪಾಕಿಸ್ತಾನದವರೇ ಹೇಳುವ ಪ್ರಕಾರ ಸೇನೆಯ ಅದೃಶ್ಯ ಕೈಗಳು ಮೆರವಣಿಗೆಯ ಹಿಂದೆ ಮತ್ತು ಅದು ಇಸ್ಲಾಮಾಬಾದ್ ತಲುಪಿದ ಕೂಡಲೇ ಮೌಲಾನಾ ಅವರನ್ನು ಸುತ್ತುವರಿದು ಮನವೊಲಿಸುವ ಪಿತೂರಿಯಲ್ಲಿ ತೊಡಗಿಕೊಂಡಿವೆ!.

ಮೌಲಾನಾ ಅವರ ಮೆರವಣಿಗೆಯ ಸುತ್ತಾ ಸಂಭವಿಸಿದ ಗದ್ದಲದ ನಡುವೆ ನವಾಜ್ ಷರೀಫ್‌ ಅವರಿಗೆ ಚಿಕಿತ್ಸೆಗಾಗಿ ವಿದೇಶ ಪ್ರವಾಸ ಮಾಡಲು ಅನುಮತಿ ನೀಡುವ ಕುರಿತಾದ ಪ್ರಕರಣವು ಕೂಡ ಮಾಧ್ಯಮಗಳಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿತು. ಇದು ಮೆರವಣಿಗೆಯ ಗಮನವನ್ನು ಬೇರೆಡೆಗೆ ಸೆಳೆಯುವಲ್ಲೂ ಪ್ರಮುಖ ಪಾತ್ರ ವಹಿಸಿತು. ನವಾಜ್ ಷರೀಫ್ ಈಗ ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಏಳು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದಾರೆ. ಈ ನಡುವೆ ಮತ್ತೊಂದು ಪ್ರಕರಣದಲ್ಲಿ ರಾಷ್ಟ್ರೀಯ ಹೊಣೆಗಾರಿಕೆ ಬ್ಯೂರೋ (ಎನ್‌ಎಬಿ) ನವಾಜ್ ಷರೀಫ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದೆ. ಧೀರ್ಘಕಾಲದ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು ಅವರ ಪ್ಲೇಟ್‌ಲೆಟ್ ಗಳು ಗಣನೀಯವಾಗಿ ಕಡಿಮೆ ಆಗಿರುವುದರಿಂದ ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯ ಇದೆ ಎಂದು ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ‌ ಲಾಹೋರ್ ಹೈಕೋರ್ಟ್ (ಎಲ್‌ಎಚ್‌ಸಿ) ನವಾಜ್ ಷರೀಫ್ ಅವರಿಗೆ ಇದೇ ಪ್ರಕರಣದಲ್ಲಿ ಜಾಮೀನು ನೀಡಿದೆ. ಆದರೂ ಪಿಟಿಐ ಸರ್ಕಾರವು ಎಕ್ಸಿಟ್ ಕಂಟ್ರೋಲ್ ಲಿಸ್ಟ್ (ಇಸಿಎಲ್) ನಿಂದ ನವಾಜ್ ಷರೀಫ್ ಹೆಸರನ್ನು ತೆಗೆದುಕೊಳ್ಳಲು ಹಿಂದೆ ಸರಿದ ಪ್ರಸಂಗ ಕಂಡುಬಂದಿದೆ. ಅಲ್ಲದೆ 7 ಬಿಲಿಯನ್ ರೂಪಾಯಿಗಳ ನಷ್ಟ ಪರಿಹಾರದ ಬಾಂಡ್ ಅನ್ನು ಠೇವಣಿ ಇರಿಸಿ 4 ವಾರ ಮಾತ್ರ ವಿದೇಶ ಪ್ರವಾಸ ಮಾಡಬಹುದು ಎಂಬ ಷರತ್ತುಬದ್ಧ ಅನುಮತಿ ನೀಡಿದೆ. ನಿರೀಕ್ಷೆಯಂತೆ ಸರ್ಕಾರದ ಈ ಪ್ರಸ್ತಾಪವನ್ನು ಪಿಎಂಎಲ್-ಎನ್ ತಿರಸ್ಕಾರ ಮಾಡಿದೆ. ಅಂತಿಮವಾಗಿ ಲಾಹೋರ್ ಹೈಕೋರ್ಟ್ ಮಧ್ಯಪ್ರವೇಶಿಸಿ ನವಾಜ್‌ ಷರೀಫ್ ಅವರಿಗೆ ವಿದೇಶ ಪ್ರವಾಸಕ್ಕೆ ಅವಕಾಶ ನೀಡುವಂತೆ ಸರ್ಕಾರಕ್ಕೆ ತಾಖೀತು ಮಾಡಿತು. ಬಳಿಕ ಕೋರ್ಟ್ ನಿರ್ದೇಶನದ ಅನ್ವಯ ಸರ್ಕಾರವು ಅಗತ್ಯ ಅನುಮತಿಯನ್ನು ನೀಡಿತು. ಅಂತಿಮವಾಗಿ ನವೆಂಬರ್ 20ರಂದು ಕತಾರ್ ಏರ್ ಆಂಬ್ಯುಲೆನ್ಸ್ ಮೂಲಕ ನವಾಜ್ ಷರೀಫ್ ಅವರನ್ನು ಚಿಕಿತ್ಸೆಗಾಗಿ ಲಂಡನ್‌ಗೆ ಕರೆದೊಯ್ಯಲಾಯಿತು.

ಭ್ರಷ್ಟರು ಮತ್ತು ಶಿಕ್ಷೆಗೊಳಗಾದವರು ಪಲಾಯನ ಮಾಡಲು ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದ ಇಮ್ರಾನ್ ಖಾನ್ ಅವರನ್ನು ಈ ಪ್ರಕರಣದ ಮೂಲಕ ಇಕ್ಕಟ್ಟಿಗೆ ಸಿಲುಕಿಸಿ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಡ ಹೇರಲು ಸೈನ್ಯವು ಸದ್ದಿಲ್ಲದೆ ಕೆಲಸ ಮಾಡಿದೆ ಎಂಬ ಊಹಾಪೋಹಗಳು ಕೇಳಿ ಬಂದವು. ನವಾಜ್ ಷರೀಫ್ ಬಹಳ ಪ್ರಭಾವಶಾಲಿ ರಾಜಕೀಯ ಹಿನ್ನೆಲೆ ಹೊಂದಿರುವುದರಿಂದ ಅವರಿಗೆ ಯಾವುದೇ ರೀತಿಯ ರಿಯಾಯಿತಿಗಳನ್ನು ನೀಡುವುದಿಲ್ಲ ಎಂಬ ನೈತಿಕ ನಿಲುವನ್ನು ತೆಗೆದುಕೊಳ್ಳಬಹುದಿತ್ತು. ಮತ್ತು ಇಮ್ರಾನ್ ಖಾನ್ ಅನಗತ್ಯವಾಗಿ ಈ ವಿಷಯವನ್ನು ಸಂಕೀರ್ಣಗೊಳಿಸಬಾರದಿತ್ತು. ಆದರೆ “ರಯಾಸತ್-ಎ-ಮದೀನಾ”ವನ್ನು ಜಾರಿಗೆ ತರಲು ಪ್ರಯತ್ನಿಸಿದ ಅವರ 'ನಯಾ ಪಾಕಿಸ್ತಾನ'ದಲ್ಲಿ ವಿಭಿನ್ನ ವರ್ಗಗಳಿಗೆ ವಿಭಿನ್ನ ನಿಯಮಗಳಿಗೆ ಯಾವುದೇ ಅವಕಾಶವಿರಲಿಲ್ಲ ಎಂಬುದು ಈ ಮೂಲಕ ಸಾಬೀತಾಗಿದೆ ಎನ್ನಲಾಗುತ್ತಿದೆ.

ಕಥೆ ಇಲ್ಲಿಗೆ ಮುಕ್ತಾಯ ಆಗುವುದಿಲ್ಲ. ನವಾಜ್ ಷರೀಫ್ ಪ್ರಕರಣದ ಬಗ್ಗೆ ಯು-ಟರ್ನ್ ತೆಗೆದುಕೊಂಡಿದ್ದಕ್ಕಾಗಿ ಆಕ್ಷೇಪಗಳನ್ನು ಎದುರಿಸುತ್ತಿರುವ ಇಮ್ರಾನ್ ಖಾನ್ ಅವರು, ತಮ್ಮ ನಿರ್ಧಾರವನ್ನು ಪರಿಷ್ಕರಿಸುವಂತೆ ಒತ್ತಾಯಿಸಿದ ನ್ಯಾಯಾಂಗವನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ. ಈ ಬಗ್ಗೆ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಅಸಮಾಧಾನ ವ್ಯಕ್ತಪಡಿಸಿ, ತಮ್ಮ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ನ್ಯಾಯಾಂಗದ ಮೇಲೆ ದೂಷಣೆ ಮಾಡಬಾರದು ಎಂದು ಕಿಡಿಕಾರಿದ್ದಾರೆ. ಇದರಿಂದ ಇಮ್ರಾನ್ ಖಾನ್ ಅವರ ಸರ್ಕಾರದ ನೀತಿಗಳ ಬಗ್ಗೆ ಮತ್ತೊಂದು ಸುತ್ತಿನ ಆಕ್ಷೇಪಗಳು ಕೇಳಿಬರುವ ಸಾಧ್ಯತೆಯಿದೆ. ರಾಜಕಾರಣಿಗಳು ಇಂತಹ ವಿಷಯಗಳಲ್ಲಿ ನಿರತರಾಗಿ ತಮ್ಮ ದೌರ್ಬಲ್ಯವನ್ನು ಪ್ರದರ್ಶಿಸಿದಷ್ಟೂ ಪಾಕಿಸ್ತಾನ ಸರ್ಕಾರದ ಮೇಲೆ ಸೇನೆಯ ನೆರಳು ದಟ್ಡವಾಗಿ ಮತ್ತು ವಿಸ್ತಾರವಾಗಿ ಬೆಳೆಯುತ್ತದೆ.

ಒಂದೆಡೆ ಹಣದುಬ್ಬರ‌ ತೀವ್ರವಾಗಿ ಬೆಳೆಯುತ್ತಿದೆ. ಇನ್ನೊಂದೆಡೆ ಈರುಳ್ಳಿ ಮತ್ತು ಟೊಮೆಟೊ ಬೆಲೆಗಳು ಗಗನಮುಖಿಯಾಗಿವೆ. ಇಂಥ ಸಂದರ್ಭದಲ್ಲಿ ಸರ್ಕಾರ ಈ ರೀತಿ ನಡೆದುಕೊಂಡರೆ ಜನ ಭ್ರಮನಿರಸನಕ್ಕೆ ಒಳಗಾಗುತ್ತಾರೆ. ಇಂತಹ ದೀರ್ಘಕಾಲದ ರಾಜಕೀಯ ಪ್ರಕ್ಷುಬ್ಧತೆಯು ಇಮ್ರಾನ್ ಸರ್ಕಾರಕ್ಕೆ ಮತ್ತು ದೀರ್ಘಾವಧಿಯಲ್ಲಿ ಪಾಕಿಸ್ತಾನದ ಪ್ರಜಾಪ್ರಭುತ್ವಕ್ಕೆ ಉಚಿತವಾಗಿರುವುದಿಲ್ಲ.
ಸ್ಕ್ರಿಪ್ಟ್: ಡಾ. ಅಶೋಕ್ ಬೆಹುರಿಯಾ, ಸಂಯೋಜಕ ಮತ್ತು ಹಿರಿಯ ಸಹೋದ್ಯೋಗಿ, ದಕ್ಷಿಣ ಏಷ್ಯಾ ಕೇಂದ್ರ, ಐಡಿಎಸ್ಎ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ