ಸಂಸತ್ತಿನಲ್ಲಿ ಈ ವಾರ

ರಾಜ್ಯಸಭೆಯ (ಸಂಸತ್ತಿನ ಮೇಲ್ಮನೆ) 250ನೇ ಅಧಿವೇಶನದ ಆಚರಣೆಯೊಂದಿಗೆ ಭಾರತೀಯ ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರ ಶುರುವಾಗಿದೆ. ಇದು 3 ವಾರ ನಡೆಯುವ ಸುದೀರ್ಘ ಅಧಿವೇಶನದ ಪ್ರಮುಖ ಸಂಗತಿಗಳಲ್ಲೊಂದಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ದೃಷ್ಟಿಕೋನ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳುವಂತೆ ಸಂಸತ್ ಸದಸ್ಯರನ್ನು ವಿನಂತಿಸಿಕೊಂಡರು. ಜನರಿಗೆ ಅಗತ್ಯ ಇರುವ ವಿಷಯಗಳನ್ನು ಎತ್ತಿ ಹಿಡಿಯಲು ಸಂಸತ್ತನ್ನು ಬಳಸಿಕೊಳ್ಳಬೇಕು. ಸಂವಾದದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಆದ್ಯತೆ ನೀಡಬೇಕು ಎಂದು ಹೇಳಿದರು. ಪ್ರಜಾಪ್ರಭುತ್ವದಲ್ಲಿ ಕಂಡುಬರುವ ಏಳುಬೀಳುಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಮೇಲ್ಮನೆ ಅಸ್ತಿತ್ವದಲ್ಲಿರುವ ಅಗತ್ಯ ಇದೆ. ಇದೇ ಸಮಯದಲ್ಲಿ ಬಂದೊದಗುವ ಆಗುಹೋಗುಗಳನ್ನು ಪರಿಶೀಲಿಸಬೇಕಾದ ಮತ್ತು ಅವುಗಳಲ್ಲಿನ ವ್ಯತ್ಯಾಸಗಳನ್ನು ಕಂಡುಕೊಳ್ಳಬೇಕಾದ ಅವಶ್ಯಕತೆ ಕೂಡ ಇದೆ. ಭಾರತದ ದ್ಯೇಹವಾಕ್ಯ ವಿವಿಧತೆಯಲ್ಲಿ ಏಕತೆ ಎಂಬುದು ಈ ಹಿರಿಯರ ಸದನದಲ್ಲಿ ಬಹಳ ಚೆನ್ನಾಗಿ ಪ್ರತಿಬಿಂಬಿತವಾಗುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು.

ಭಾರತೀಯ ರಾಜಕಾರಣದಲ್ಲಿ ಮೇಲ್ಮನೆಯ ಪಾತ್ರ ಮತ್ತು ಸುಧಾರಣೆಗಳ ಅಗತ್ಯತೆಯ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿ ಮೋದಿ, ಸಂವಿಧಾನದ ಸ್ಥಾಪಕ ಪಿತಾಮಹರು ದ್ವಿಪಕ್ಷೀಯ ಶಾಸಕಾಂಗದ ಚೌಕಟ್ಟನ್ನು ರೂಪಿಸಿದ್ದಾರೆ ಮತ್ತು ಈ ದೃಷ್ಟಿಕೋನವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಶ್ರೀಮಂತಗೊಳಿಸಿದೆ. ಚುನಾವಣಾ ರಾಜಕೀಯದಿಂದ ದೂರವಿರುವವರು ಕೂಡ ರಾಷ್ಟ್ರ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಲು ರಾಜ್ಯಸಭೆಯು ಅವಕಾಶವನ್ನು ಒದಗಿಸಿಕೊಡುತ್ತದೆ. ಕೌನ್ಸಿಲ್ ಆಫ್ ಸ್ಟೇಟ್ಸ್ ಸಂಸದರಿಗೆ ಸಹಕಾರಿ ಫೆಡರಲಿಸಂ ಬಗ್ಗೆ ಉತ್ಸಾಹ ಹೆಚ್ಚಾಗಲು ಅನುವು ಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯಸಭೆಯು ಇಡೀ ದೇಶದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವ ಮನೆಯಾಗಿ ಉಳಿಯಬೇಕು ಎಂದು ಹೇಳಿದರು. ರಾಜ್ಯಸಭೆಯ ಅಧ್ಯಕ್ಷ ಎಂ. ವೆಂಕಯ್ಯನಾಯ್ಡು ಮಾತನಾಡಿ ದೇಶದ ಸಾಮಾಜಿಕ-ಆರ್ಥಿಕ ಪರಿವರ್ತನೆಯಲ್ಲಿ ರಾಜ್ಯಸಭೆಯು ಮಹತ್ವದ ಪಾತ್ರ ನಿರ್ವಹಿಸಿದೆ ಎಂದು ಅಭಿಪ್ರಾಯಪಟ್ಟರು.

ಕಳೆದ 6 ತಿಂಗಳ ಅವಧಿಯಲ್ಲಿ 13,000 ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು 35 ಲಕ್ಷ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ಕೊಟ್ಟಿದ್ದಾರೆ ಎಂಬ ಮಾಹಿತಿಯನ್ನು ಅಲ್ಲಿನ ರಾಜ್ಯ ಸರ್ಕಾರ ಕೇಂದ್ರಕ್ಕೆ ನೀಡಿದೆ ಎಂದು ಗೃಹ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ತಿಳಿಸಿದರು. ಇದನ್ನು ಲೋಕಸಭೆಯಲ್ಲಿ ಲಿಖಿತ ಉತ್ತರ ರೂಪದಲ್ಲಿ ತಿಳಿಸಿರುವ ಅವರು, ಈ ಅವಧಿಯಲ್ಲಿ ಪ್ರವಾಸೋದ್ಯಮದ ಮೂಲಕ ಜಮ್ಮು ಮತ್ತು‌ ಕಾಶ್ಮೀರ ರಾಜ್ಯ ಸರ್ಕಾರ 25 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಹೇಳಿದರು.

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಆ ರಾಜ್ಯದಲ್ಲಿ ನಡೆಯುತ್ತಿದ್ದ ಕಲ್ಲು ತೂರಾಟದಂತಹ ಘಟನೆಗಳು ಕಡಿಮೆಯಾಗಿವೆ ಎಂದು ಸಂಸತ್ತಿಗೆ ತಿಳಿಸಲಾಯಿತು. ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಅವರು, ಕಲ್ಲು ತೂರಾಟ ಮತ್ತು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ 2019ರ ಆಗಸ್ಟ್ 5 ರಿಂದ ನವೆಂಬರ್ 15ರವರೆಗೆ ಒಟ್ಟು 190 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಿದೆ. ಇಲ್ಲಿನ ಎಲ್ಲಾ 195 ಪೊಲೀಸ್ ಠಾಣೆ ಸರಹದ್ದುಗಳಲ್ಲಿ ಹಾಕಲಾಗಿದ್ದ ನಿಷೇಧಾಜ್ಞೆಯನ್ನು ಈಗ ಹಿಂಪಡೆಯಲಾಗಿದೆ ಎಂದು ಹೇಳಿದರು. ಈ ಪ್ರದೇಶಗಳ ಭದ್ರತಾ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡ ಬಳಿಕ ರಾಜ್ಯ ಸರ್ಕಾರದ ಅಧಿಕಾರಿಗಳು ನೀಡುವ ಶಿಫಾರಸನ್ನು ಆಧರಿಸಿ ಸೂಕ್ತ ಸಮಯದಲ್ಲಿ ಅಂತರ್ಜಾಲ ಸೇವೆಗಳನ್ನು ಮರುಸ್ಥಾಪಿಸುವ ಬಗ್ಗೆ ಕೂಡ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. ರಾಜ್ಯಸಭೆಯಲ್ಲಿ ಪೂರಕ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು, 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಹಾಗೂ ಜಮ್ಮು ಮತ್ತು ಕಾಶ್ಮೀರವನ್ನು ವಿಭಜನೆ ಮಾಡಿದ ಬಳಿಕ ಪೊಲೀಸರು ಗುಂಡು ಹಾರಿಸಿದ್ದರಿಂದ ಸಾವನ್ನಪ್ಪಿದ ಒಂದೇ ಒಂದು ಪ್ರಕರಣವೂ ಸಂಭವಿಸಿಲ್ಲ ಎಂದು ವಿವರಿಸಿದರು.

'ಒಂದು ರಾಷ್ಟ್ರ-ಒಂದು ಭಾಷೆ’ ಜಾರಿಗೊಳಿಸುವ ಯಾವುದೇ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದೆ ಇಲ್ಲ. ಸಂವಿಧಾನವು ದೇಶದ ಎಲ್ಲಾ ಭಾಷೆಗಳಿಗೂ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ರಾಜ್ಯ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಅಭಿಪ್ರಾಯಪಟ್ಟರು.

ಚೀನಾ ದೇಶದ ಒನ್ ಬೆಲ್ಟ್-ಒನ್ ರಸ್ತೆ (ಒಬಿಒಆರ್) ಯೋಜನೆ ವಿಚಾರವಾಗಿ ಭಾರತ ಸರ್ಕಾರದ ನಿಲುವು ಬಹಳ ಸ್ಪಷ್ಟ ಮತ್ತು ಸ್ಥಿರವಾಗಿದೆ ಎಂದು ಪ್ರಶ್ನೆ‌ಯೊಂದಕ್ಕೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ವಿ. ಮುರಳೀಧರನ್ ಅಭಿಪ್ರಾಯಪಟ್ಟರು. ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ಕೇಂದ್ರಾಡಳಿತ ಪ್ರದೇಶ ಲಡಾಕ್ ಮೂಲಕ ಹಾದುಹೋಗುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಅನ್ನು ಒಬಿಒಆರ್ ಪ್ರಮುಖ ಯೋಜನೆಗೆ ಸೇರಿಸುವುದು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ವಿಷಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಬಗ್ಗೆ ನಮ್ಮ ಸರ್ಕಾರಕ್ಕೆ ಕಳವಳವಿದೆ. ಯಾವುದೇ ಸಂಪರ್ಕ ಮಾರ್ಗಗಳು ಸಾರ್ವತ್ರಿಕವಾಗಿ ಗುರುತಿಸಲ್ಪಟ್ಟ ಅಂತರರಾಷ್ಟ್ರೀಯ ಮಾನದಂಡಗಳನ್ನು ಆಧರಿಸಿಯೇ ರೂಪಿತವಾಗಬೇಕು ಎಂಬುದು ಭಾರತದ ದೃಢವಾದ ವಿಶ್ವಾಸ ಎಂದು ಅವರು ಹೇಳಿದರು.

ಲೋಕಸಭೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಲಿನಗೊಂಡಿರುವ ಹವಾಮಾನದ ಬಗ್ಗೆಯೂ ಮಹತ್ವದ ಚರ್ಚೆ ನಡೆಯಿತು. ಪಕ್ಷಾತೀತವಾಗಿ ಎಲ್ಲಾ ಸಂಸದರು ದನಿಗೂಡಿಸಿದರು. ದೆಹಲಿಯ ಮಾಲಿನ್ಯ ನಿಯಂತ್ರಣ ಗಂಭೀರ ವಿಷಯವಾಗಿದೆ. ಎಲ್ಲರೂ ರಾಜಕೀಯವನ್ನು ಬದಿಗಿರಿಸಿ ಈ ಪರಿಸ್ಥಿತಿಯನ್ನು ನಿಭಾಯಿಸಬೇಕಾಗಿದೆ ಎಂದು ಮನಗೊಂಡು ಸಮಸ್ಯೆಯನ್ನು ನಿಭಾಯಿಸಲು ವ್ಯಾಪಕವಾದ ಸಲಹೆಗಳನ್ನು ನೀಡಿದರು. ಉದಾಹರಣೆಗೆ ಮಾಲಿನ್ಯಕ್ಕೆ ಕಾರಣರಾಗುತ್ತಿರುವ ರೈತರ ಆರ್ಥಿಕ ಸಬಲೀಕರಣಕ್ಕೆ ಕ್ರಮ ತೆಗೆದುಕೊಳ್ಳಬೇಕು. ಕೋಲಿನ ಸುಡುವಿಕೆಯನ್ನು ಕಡಿಮೆ ಮಾಡಲು ಪ್ರತಿ ಸಂಸದರ ಎಂಪಿಎಲ್‌ಎಡಿಗಳ ನಿಧಿಯಿಂದ ರೈತರಿಗೆ 2 ಕೋಟಿ ರೂಪಾಯಿಗಳನ್ನು ಕೊಡುಗೆಯಾಗಿ ನೀಡಬೇಕು ಮತ್ತು ವಾಯು ಶುದ್ಧೀಕರಣ ಗೋಪುರಗಳನ್ನು ನಿರ್ಮಿಸಬೇಕು ಎಂಬ ಸಲಹೆಗಳು ಕೇಳಿಬಂದವು.

ಸ್ಕ್ರಿಪ್ಟ್: ವಿ. ಮೋಹನ್ ರಾವ್, ಪತ್ರಕರ್ತ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ