ಸಿಪಿಇಸಿ ಬಗ್ಗೆ ಯುಎಸ್ ಎಚ್ಚರಿಕೆ

2013ರಲ್ಲಿ ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (ಬಿಆರ್ ಐ) ವಿಶೇಷವಾಗಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆ ಆರಂಭ ಆದಾಗಿನಿಂದಲೂ ಭಾರತದಲ್ಲಿ ಆತಂಕಗಳನ್ನು ಸೃಷ್ಟಿ ಮಾಡಿದೆ. ಏಕೆಂದರೆ ಸಿಪಿಇಸಿಯ ನಿಯಮಗಳೇ ಆತಂಕಕಾರಿಯಾಗಿವೆ, ಮೇಲಾಗಿ ಇದು ಭಾರತದ ಸಾರ್ವಭೌಮತ್ವವನ್ನು ಉಲ್ಲಂಘಿಸುವಂತಹುದಾಗಿದೆ.
ಇದೇ ಹಿನ್ನೆಲೆಯಲ್ಲಿ ಭಾರತವು ತತ್ವಬದ್ಧವಾದ ಮತ್ತು ದೃಢವಾದ ನಿಲುವಿನೊಂದಿಗೆ ಸಿಪಿಇಸಿಗೆ ವಿರೋಧ ವ್ಯಕ್ತಪಡಿಸಿದೆ. ವಾಸ್ತವವಾಗಿ ಭಾರತವು ಬಿಆರ್‌ಐ ಅನ್ನು ವಿರೋಧಿಸಿದ ಮೊದಲ ರಾಷ್ಟ್ರವಾಗಿದೆ. ಮತ್ತು ಈ ಹಿಂದೆ ಚೀನಾದಲ್ಲಿ ನಡೆದ ಎರಡು ಬೆಲ್ಟ್ ಮತ್ತು ರಸ್ತೆ ವೇದಿಕೆಗಳಿಗೆ ತನ್ನ ಯಾವುದೇ ಪ್ರಾತಿನಿಧಿಗಳನ್ನು ಕಳಿಸದ ಏಕೈಕ ದೇಶವಾಗಿದೆ. ಭಾರತವು 2013ರಲ್ಲಿ ಇಂಥದೊಂದು ನಿಲುವು ತೆಳೆದಿದ್ದು ಇಂದಿಗೂ ಅದೇ ನಿಲುವಿಗೆ ಕಟಿಬದ್ದವಾಗಿದೆ. ಈ ಮೂಲಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮೂಲಕ ಹಾದುಹೋಗುವ ಬಿಆರ್ ಐನ ಪ್ರಮುಖ ಕಾರಿಡಾರ್ ಸಿಪಿಇಸಿಗೆ ತನ್ನ ವಿರೋಧವಿದೆ ಎಂಬ ಭಾವನೆಯನ್ನು ಖಚಿತವಾಗಿ ವ್ಯಕ್ತಪಡಿಸುತ್ತಿದೆ. “ಸಿಪಿಇಸಿ ಎಂದು ಕರೆಯಲ್ಪಡುವ ಸೇರ್ಪಡೆಯು ಭಾರತದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ ವಿಷಯಗಳ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುತ್ತದೆ ಎನ್ನುವ ಸಂಗತಿಯನ್ನು ಪ್ರತಿಬಿಂಬಿಸುತ್ತದೆ" ಎಂಬುದು ಭಾರತದ ಅಧಿಕೃತವಾದ ನಿಲುವು.

ಭಾರತ ಮಾತ್ರವಲ್ಲದೆ ಹಲವು ರಾಷ್ಟ್ರಗಳು ಚೀನಾದ ಬಿಆರ್‌ಐ ಬಗ್ಗೆ ವಿಶೇಷವಾಗಿ ಸಿಪಿಇಸಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ. ಯುನೈಟೆಡ್ ಸ್ಟೇಟ್ಸ್ ಕೂಡ ಸಿಪಿಇಸಿ ಕಾರಿಡಾರ್ ಬಗ್ಗೆ ತನ್ನ ಅಸಮಾಧಾನವನ್ನು ಪ್ರದರ್ಶಿಸಿದೆ. ವಾಷಿಂಗ್ಟನ್‌ ಡಿಸಿ ಮೂಲದ ವುಡ್ರೊ ವಿಲ್ಸನ್ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಸ್ಕಾಲರ್ಸ್ ಜೊತೆ ಮಾತನಾಡುವ ವೇಳೆ ಸಿಪಿಇಸಿ ಕುರಿತು ದಕ್ಷಿಣ ಮತ್ತು ಮಧ್ಯ ಏಷ್ಯಾದ ವ್ಯವಹಾರಗಳ ಕಾರ್ಯಕಾರಿ ಸಹಾಯಕ ಕಾರ್ಯದರ್ಶಿ ಆಲಿಸ್ ವೆಲ್ಸ್ ಅವರು “ಭಾರತವು ಮೊದಲಿನಿಂದಲೂ ತನ್ನ ನಿಲುವಿನಲ್ಲಿ ಸ್ಪಷ್ಟವಾಗಿದೆ. ಬಿಆರ್ ಐನ ಭೌಗೋಳಿಕ ರಾಜಕೀಯ ಸ್ವರೂಪ ಆಧಾರವಿಲ್ಲದ್ದಾಗಿದೆ. ನಾವು ಯಾವುದೇ ಆರ್ಥಿಕ ಉದ್ದೇಶವಿಲ್ಲದ, ತನ್ನ ಸಾರ್ವಭೌಮತ್ವದ ವಿಷಯವನ್ನು ಮಾತ್ರವೇ ಒಳಗೊಂಡ ಭಾರತದ ಹಿತಾಸಕ್ತಿಯನ್ನು ಹಂಚಿಕೊಳ್ಳುತ್ತೇವೆ" ಎಂದು ಅಭಿಪ್ರಾಯಪಟ್ಟರು.

"ಚೀನಾ ಮತ್ತು ಪಾಕಿಸ್ತಾನ ನಡುವಣ ಸಂಬಂಧ ಹಾಗೂ ಸಿಪಿಇಸಿಗಳು ವಿಶೇಷವಾಗಿ ಭಾರತದ ಸಾರ್ವಭೌಮ ಹಕ್ಕುಗಳನ್ನು ಉಲ್ಲಂಘಿಸುತ್ತವೆ". ಆಲಿಸ್ ವೆಲ್ಸ್ ಅವರ ಈ ಹೇಳಿಕೆಗಳು ತನ್ನ ಪ್ರದೇಶದಾಚೆಗೆ ಚೀನಾ ಮಾಡುತ್ತಿರುವ ಬಿಆರ್ ಐ ಬಗ್ಗೆ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಗಳ ಸಾಮಾನ್ಯ ಗ್ರಹಿಕೆಯಾಗಿದೆ. ಇದು ಪರಸ್ಪರ ಆಸಕ್ತಿಗಳು ಮತ್ತು ಕಾಳಜಿಗಳು ಒಂದಾಗಿರುವುದನ್ನು ತೋರಿಸುತ್ತದೆ. ಈ ಬೆಳವಣಿಗೆಯ ಬಳಿಕ ಭಾರತವು ಜಪಾನ್ ಜೊತೆ ಸೇರಿಕೊಂಡು ಹಲವಾರು ದೇಶಗಳನ್ನು ಬೆಸೆಯುವಂತಹ ವಿಶ್ವಾಸಾರ್ಹ ಮತ್ತು ಶಾಶ್ವತವಾದ ಪರ್ಯಾಯವನ್ನು ಒದಗಿಸಲು ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ಏಷ್ಯಾ-ಆಫ್ರಿಕಾ ಬೆಳವಣಿಗೆಯ ಕಾರಿಡಾರ್ (ಎಎಜಿಸಿ) ಶುರುಮಾಡಲು ಮುಂದಾಗಿದೆ. ಜಪಾನ್ ಸಹಯೋಗದೊಂದಿಗೆ ಕೊಲಂಬೊ ಬಂದರಿನಲ್ಲಿ ಆಳ ಸಮುದ್ರದ ಕಂಟೇನರ್ ಟರ್ಮಿನಲ್ ಅನ್ನು ಅಭಿವೃದ್ಧಿಪಡಿಸಲು ಶ್ರೀಲಂಕಾದ ಜೊತೆ ಒಪ್ಪಂದಕ್ಕೆ ಇತ್ತೀಚೆಗೆ ಸಹಿ ಹಾಕಿದೆ. ಇವೆರಡು ಪ್ರಮುಖ ಉದಾಹರಣೆಗಳಾಗಿವೆ. ಯುನೈಟೆಡ್ ಸ್ಟೇಟ್ಸ್ ಸಹ ಬ್ಯಾಂಡ್ ವ್ಯಾಗನ್ ಸೇರಲು ಸಿದ್ಧವಾಗಿದೆ.

ಶ್ರೀಮತಿ ವೆಲ್ ಅವರ ಅಭಿಪ್ರಾಯಗಳನ್ನು ವೇಗವಾಗಿ ಬೆಳೆಯುತ್ತಿರುವ ಇಂಡೋ-ಯುನೈಟೆಡ್ ಸ್ಟೇಟ್ಸ್ ಪಾಲುದಾರಿಕೆಯ ದೃಷ್ಟಿಕೋನದಿಂಲೂ ವಿಶ್ಲೇಷಣೆಗೆ ಒಡ್ಡಬಹುದು. 2019ರ ಸೆಪ್ಟೆಂಬರ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆನಂತರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅಮೆರಿಕದ ಕಾರ್ಯತಂತ್ರದ ಸಮುದಾಯಕ್ಕೆ ಭೇಟಿ ನೀಡಿ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪರಸ್ಪರ ಆಸಕ್ತಿಗಳು ಮತ್ತು ನಿರೀಕ್ಷೆಗಳನ್ನು ತಿಳಿಸುವುದು, ಮತ್ತು ಸಂಬಂಧಗಳಲ್ಲಿ ಭವಿಷ್ಯದ ಪಥವನ್ನು ಸುಲಭಗೊಳಿಸುವುದು‌ ಈ ಭೇಟಿಗಳ ಉದ್ದೇಶವಾಗಿತ್ತು. ಚೀನಾ ಮತ್ತು ಪಾಕಿಸ್ತಾನಗಳು ಒಂದಾಗಿರುವುದರಿಂದ ಭಾರತ ಎದುರಿಸುತ್ತಿರುವ ಗಂಭೀರ ಸ್ವರೂಪದ ಸವಾಲನ್ನು ಯುನೈಟೆಡ್ ಸ್ಟೇಟ್ಸ್ ನೀತಿ ನಿರೂಪಕರು ಅರ್ಥಮಾಡಿಕೊಂಡಿದ್ದಾರೆ. ಇದು ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ದೇಶಗಳು ಕಾರ್ಯತಂತ್ರದ ಪಾಲುದಾರರಾಗಿ ಬೆಳೆಯುತ್ತಿರುವ ಒಂದು ಅಂಶವಾಗಿ ಹೊರಹೊಮ್ಮಿದೆ.

ಇನ್ನೊಂದು ಅಭಿಪ್ರಾಯದಲ್ಲಿ ಯುಎಸ್ ಸಹಾಯಕ ರಾಜ್ಯ ಕಾರ್ಯದರ್ಶಿ ಅವರು ಪಾಕಿಸ್ತಾನದ ಆರ್ಥಿಕತೆಯ ಮೇಲೆ ಸಿಪಿಇಸಿ ಬೀರಬಹುದಾದ ಸಂಭವನೀಯ ಅಪಾಯಗಳ ಬಗ್ಗೆ ಹಾಗೂ ಪಾಕಿಸ್ತಾನದ ಕಾರಿಡಾರ್‌ನ ದೀರ್ಘಕಾಲೀನ ಕಾರ್ಯಸಾಧ್ಯತೆಯ ಬಗ್ಗೆ ಗಮನ ಸೆಳೆದಿದ್ದಾರೆ. ಚೀನಾವು ಕೇವಲ ಹಣಕಾಸಿನ ವ್ಯವಹಾರಗಳನ್ನು ಮಾಡುತ್ತಿಲ್ಲ. ಅದು ಪಾಕಿಸ್ತಾನವನ್ನು ಸಾಲದ ಸುಳಿಯಲ್ಲಿ ಸಿಲುಕಿಸುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ. ಮಿಸ್ ವೆಲ್ಸ್ ಅವರು ಇದು ಪರಸ್ಪರ ಲಾಭದಾಯಕ ಯೋಜನೆಯಲ್ಲ ಮತ್ತು ಚೀನಾಕ್ಕೆ ಮಾತ್ರ ಪ್ರಯೋಜನವನ್ನು ನೀಡುತ್ತದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. 2019ರಲ್ಲಿ ಪಾಕಿಸ್ತಾನದ ಆರ್ಥಿಕತೆಯು 3.3 ಶೇಕಡಾ ದರದಲ್ಲಿ ಬೆಳೆಯಿತು. ಈಗ 2020ರ ನಿರೀಕ್ಷಿತ ಬೆಳವಣಿಗೆ ದರವು 2.8 ಪ್ರತಿಶತದಷ್ಟಿದೆ ಎಂದು ಹೇಳಿದ್ದಾರೆ.

ಸಿಪಿಇಸಿ ಬಹುಕೋಟಿ ಡಾಲರ್ ಯೋಜನೆಯಾಗಿದ್ದು, ಇದು ಪಾಕಿಸ್ತಾನದ ಬಾಹ್ಯ ಸಾಲ ಹೆಚ್ಚಾಗುವಂತೆ ಮಾಡಿದೆ. 2018ರಲ್ಲಿ ಪಾಕಿಸ್ತಾನದ ಬಾಹ್ಯ ಸಾಲವು 105 ಬಿಲಿಯನ್ ಅಮೆರಿಕನ್ ಡಾಲರ್ ಆಗಿದ್ದರೆ, ಅದೇ ವರ್ಷದಲ್ಲಿ ಅದರ ಜಿಡಿಪಿ 312 ಬಿಲಿಯನ್ ಯುಎಸ್ ಡಾಲರ್ ಆಗಿತ್ತು. ಮೇ 2019ರಲ್ಲಿ ಪಾಕಿಸ್ತಾನ ತನ್ನ ಆರ್ಥಿಕತೆಯನ್ನು ಸ್ಥಿರಗೊಳಿಸಲು ಅಂತರರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯೊಂದಿಗೆ 6 ಬಿಲಿಯನ್ ಯುಎಸ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತು. ಇದಲ್ಲದೆ ಹೆಚ್ಚುವರಿಯಾಗಿ ಸೌದಿ ಅರೇಬಿಯಾದಂತಹ ದೇಶಗಳಿಂದ ಸಿಪಿಇಸಿ ಮತ್ತು ಬಿಆರ್ ಐ ಯೋಜನೆಗಳಿಗೂ ಹಣಕ್ಕಾಗಿ ಮೊರೆಯಿಟ್ಟಿದೆ. ಚೀನಾ ಮತ್ತು ಪಾಕಿಸ್ತಾನದ ಅಧಿಕಾರಿಗಳು ಸಿಪಿಇಸಿ ಬಗ್ಗೆ ವೆಲ್ ಅವರು ಮಾಡಿರುವ ಟೀಕೆಗಳನ್ನು ಖಂಡಿಸಿದ್ದಾರೆ ಮತ್ತು ಅದನ್ನು ‘ಗೇಮ್ ಚೇಂಜರ್’ ಎಂದು ಘೋಷಿಸಿದ್ದಾರೆ. ಆದರೆ ಈ ಯೋಜನೆಯು ಪಾಕಿಸ್ತಾನಕ್ಕೆ ಸಮರ್ಥನೀಯವಲ್ಲ ಎಂಬುದು ಸಾಬೀತಾಗಿದೆ. ಪಾಕಿಸ್ತಾನದ ಆರ್ಥಿಕ ಸ್ಥಿತಿಯೂ ಈಗಾಗಲೇ ಅಸ್ತವ್ಯಸ್ತಗೊಂಡಿದೆ.

ಸ್ಕ್ರಿಪ್ಟ್: ಸನಾ ಹಶ್ಮಿ, ಚೀನಾ ಕುರಿತ ಕಾರ್ಯತಂತ್ರದ ವಿಶ್ಲೇಷಕ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ