19ನೇ ಭಾರತ-ಇರಾನ್ ಜಂಟಿ ಆಯೋಗದ ಸಭೆ
ಉಭಯ ದೇಶಗಳ ಜಂಟಿ ಆಯೋಗದ ಸಭೆಯ 19ನೇ ಅಧಿವೇಶನದಲ್ಲಿ ಪಾಲ್ಗೊಳ್ಳಲು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಇರಾನ್‌ಗೆ ಭೇಟಿ ನೀಡಿದ್ದರು. ಭಾರತ ಮತ್ತು ಇರಾನ್ ವಿದೇಶಾಂಗ ಸಚಿವರ ಸಹ-ಅಧ್ಯಕ್ಷತೆಯಲ್ಲಿರುವ ಜಂಟಿ ಆಯೋಗವು ಈ ಎರಡು ಸ್ನೇಹಪರ ರಾಷ್ಟ್ರಗಳ ನಡುವಿನ ಆಳವಾದ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ಕಾರ್ಯವಿಧಾನವಾಗಿದೆ. ಡಾ. ಜೈಶಂಕರ್ ಅವರು ಭೇಟಿಯ ಸಂದರ್ಭದಲ್ಲಿ ಇರಾನ್ ಅಧ್ಯಕ್ಷ ಡಾ. ಹಸನ್ ರೂಹಾನಿ ಅವರನ್ನು ಭೇಟಿ ಮಾಡಿ ಜಂಟಿ ಆಯೋಗದ ಸಭೆಯಲ್ಲಿನ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದರು. ಅಲ್ಲದೆ ಇರಾನ್ ದೇಶದ ಸರ್ವೋಚ್ಛ ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯದರ್ಶಿ ರಿಯರ್ ಅಡ್ಮಿರಲ್ ಅಲಿ ಶಮ್ಖಾನಿ ಹಾಗೂ ರಸ್ತೆಗಳು ಮತ್ತು ನಗರಾಭಿವೃದ್ಧಿ ಸಚಿವ ಮೊಹಮ್ಮದ್ ಎಸ್ಲಾಮಿ ಅವರನ್ನು ಕೂಡ ಭೇಟಿ ಮಾಡಿದರು.
ಇರಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ನಿರಂತರವಾಗಿ ನಡೆಯುತ್ತಿದ್ದ ವ್ಯವಹಾರ ಸ್ಥಗಿತಗೊಂಡು ಇರಾನ್ ದೇಶವು ತೀವ್ರ ಆರ್ಥಿಕ ಒತ್ತಡಕ್ಕೆ ಸಿಲುಕಿರುವ ಸಂದರ್ಭದಲ್ಲಿ ಭಾರತ ಮತ್ತು ಇರಾನ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಸಭೆಗಳನ್ನು ಆಯೋಜಿಸಲಾಗಿದೆ. ಇರಾನ್ ಜೊತೆ ಪರಮಾಣು ಒಪ್ಪಂದದಿಂದ ಯುಎಸ್ ಏಕಪಕ್ಷೀಯವಾಗಿ ಹಿಂದೆ ಸರಿದಿದೆ. ಇರಾನ್ ಮೇಲೆ ಕಠಿಣ ಆರ್ಥಿಕ ಮತ್ತು ರಾಜಕೀಯ ನಿರ್ಬಂಧಗಳನ್ನು ಹೇರುವ ದೃಷ್ಟಿಯಿಂದಲೇ ಯುಎಸ್ ಇಂಥ ನಿಲುವಿಗೆ ಬಂದಿದೆ ಎಂಬುದು ಗಮನಾರ್ಹವಾದ ಸಂಗತಿಯಾಗಿದೆ.
ಈ ‘ಅತ್ಯಂತ ಉತ್ಪಾದಕ’ ಜಂಟಿ ಆಯೋಗದ ಸಭೆಯಲ್ಲಿ ಭಾರತ-ಇರಾನ್ ಸಂಬಂಧಗಳ ಸಮಗ್ರವಾದ ಸ್ವರೂಪವನ್ನು ಉಭಯ ಪಕ್ಷಗಳು ಪರಿಶೀಲಿಸಿದವು. ಇರಾನ್ ದೇಶದ ಚಬಹಾರ್ ಬಂದರು ಯೋಜನೆಯನ್ನು ತ್ವರಿತಗೊಳಿಸಲು ಭಾರತ ಮತ್ತು ಇರಾನ್ ಒಪ್ಪಿಕೊಂಡಿವೆ. ಭಾರತ-ಇರಾನ್ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಕುರಿತಾದ ‘ಅತ್ಯುತ್ತಮ ಚರ್ಚೆಗಳ’ ಬಗ್ಗೆ ಇರಾನ್ ವಿದೇಶಾಂಗ ಸಚಿವ ಜವಾದ್ ಜರೀಫ್ ತೃಪ್ತಿಯನ್ನು ವ್ಯಕ್ತಪಡಿಸಿದರು. ಹಾಗೂ ಉಭಯ ದೇಶಗಳ ನಡುವಿನ ಸಂಬಂಧದ ‘ಪ್ರಾಚೀನ, ಐತಿಹಾಸಿಕ ಮತ್ತು ಅಳಿಸಲಾಗದ’ ಸ್ವರೂಪವನ್ನು ಅವರು ಮತ್ತೊಮ್ಮೆ ಹೇಳಿದರು.
ಸಂಪರ್ಕ, ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಭಾರತ-ಇರಾನ್ ಸಹಕಾರ ಎಂಬವು ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ವಿಷಯಗಳು. ಭಾರತ ಮತ್ತು ಇರಾನ್ ಮೇಲೆ ಪರಿಣಾಮ ಬೀರುವ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಎರಡೂ ದೇಶದವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಅಲ್ಲದೆ ಚಬಹಾರ್‌ನಲ್ಲಿ ಇರುವ ಶಾಹಿದ್ ಬೆಹೆಶ್ತಿ ಬಂದರು ನಿರ್ವಹಣೆಯ ಪ್ರಗತಿ ಬಗ್ಗೆ ಪರಸ್ಪರ ತೃಪ್ತಿಯನ್ನು ಕೂಡ ವ್ಯಕ್ತಪಡಿಸಿದರು. ಚಬಹಾರ್ ಬಂದರಿನ ವಿಶೇಷ ಏನೆಂದರೆ ಅದು ಭಾರತದ ಉಪಖಂಡ, ಇರಾನ್, ಅಫ್ಘಾನಿಸ್ತಾನ, ಮಧ್ಯ ಏಷ್ಯಾ ಮತ್ತು ಯುರೋಪ್ ನಡುವಿನ ಗೇಟ್‌ವೇ ಆಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದಾಗಿ ಗುರುತಿಸಲ್ಪಟ್ಟಿದೆ. ಇಂಧನ ಸಮೃದ್ಧ ರಾಷ್ಟ್ರದ ದಕ್ಷಿಣ ಕರಾವಳಿಯ ಈ ಬಂದರನ್ನು ಭಾರತದ ಪಶ್ಚಿಮ ಕರಾವಳಿಯಿಂದ ಸುಲಭವಾಗಿ ಪ್ರವೇಶಿಸಬಹುದಾಗಿದೆ. ಪಾಕಿಸ್ತಾನದ ಗ್ವಾದರ್ ಬಂದರಿಗೆ ಪ್ರತಿಯಾಗಿ ಬಳಸಬಹುದಾದ ಇದನ್ನು ಚೀನಾದ ಹೂಡಿಕೆಯೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಇದು ಚಬಹಾರ್‌ನಿಂದ ಸುಮಾರು 80 ಕಿ.ಮೀ. ದೂರದಲ್ಲಿದೆ.
ಚಬಹಾರ್ ಬಂದರನ್ನು ಅಫ್ಘಾನಿಸ್ತಾನದಿಂದ ರಫ್ತು ಮಾಡಲು ಬಳಸಿಕೊಳ್ಳುವುದಕ್ಕೆ ಭಾರತ ಮತ್ತು ಇರಾನ್ ವಿದೇಶಾಂಗ ಸಚಿವರು ಸ್ವಾಗತಿಸಿದರು ಹಾಗೂ ವ್ಯಾಪಾರ ಮತ್ತು ಸಾಗಣೆಯ ಉದ್ದೇಶಕ್ಕಾಗಿ ವ್ಯಾಪಕ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲು ಈ ಬಂದರನ್ನು ಉತ್ತೇಜಿಸುವ ಸಾಧ್ಯತೆಯ ಬಗ್ಗೆಯೂ ಸಮಾಲೋಚನೆ ನಡೆಸಿದರು.
ದ್ವಿಪಕ್ಷೀಯ ವ್ಯಾಪಾರ ಮತ್ತು ವಾಣಿಜ್ಯವನ್ನು ಬಲಪಡಿಸಲು ಬೆಂಬಲ ನೀಡುವುದಕ್ಕೆ ಭಾರತ ಮತ್ತು ಇರಾನ್ ದೇಶಗಳು ಈ ಜಂಟಿ ಆಯೋಗದ ಸಭೆಯಲ್ಲಿ ಮತ್ತೊಮ್ಮೆ ಒಪ್ಪಿಗೆ ಸೂಚಿಸಿವೆ. ಇದೇ ವೇಳೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಹಾಗೂ ಕಸ್ಟಮ್ಸ್ ವಿಷಯಗಳಲ್ಲಿ ಭಾರತ-ಇರಾನ್ ಸಹಕಾರವನ್ನು ಉತ್ತೇಜಿಸುವ ಆದ್ಯತೆಯ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ಸಲುವಾಗಿ ಭಾರತ-ಇರಾನ್ ಜಂಟಿ ಕಾರ್ಯ ಸಮೂಹದ ವ್ಯಾಪಾರದ ಆರಂಭಿಕ ಸಭೆಯನ್ನು ನಡೆಸುವುದಕ್ಕೂ ನಿರ್ಧರಿಸಿವೆ.
ಮುಖ್ಯವಾಗಿ, ಭಯೋತ್ಪಾದನೆಯಿಂದ ಉಂಟಾಗುವ ಬೆದರಿಕೆಯ ಬಗ್ಗೆ ಹಂಚಿಕೊಂಡಿರುವ ತಮ್ಮ ಅಭಿಪ್ರಾಯಗಳನ್ನು ಭಾರತ ಮತ್ತು ಇರಾನ್ ಈಗ ಮತ್ತೊಮ್ಮೆ ಹೇಳಿವೆ. ಇದಕ್ಕೆ ಅನುಗುಣವಾಗಿ ಭಯೋತ್ಪಾದಕ ಚಟುವಟಿಕೆಗಳಿಗೆ ಎಲ್ಲಾ ರೀತಿಯಿಂದಲೂ ಸಿಗುತ್ತಿರುವ ಬೆಂಬಲವನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಕರೆ ನೀಡಲಾಗಿದೆ. ಜೊತೆಗೆ ಈ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡುವ ಪ್ರಯತ್ನಗಳಿಗೆ ಎರಡು ದೇಶದವರು ತಮ್ಮ ಬೆಂಬಲವನ್ನು ಸೂಚಿಸಿದರು.
19ನೇ ಭಾರತ-ಇರಾನ್ ಜಂಟಿ ಆಯೋಗದ ಸಭೆಯ ಮತ್ತೊಂದು ಗಮನಾರ್ಹ ಫಲಿತಾಂಶವೆಂದರೆ 2020ರಲ್ಲಿ ತಮ್ಮ ದ್ವಿಪಕ್ಷೀಯ ಸ್ನೇಹ ಒಪ್ಪಂದದ 70ನೇ ವಾರ್ಷಿಕೋತ್ಸವದ ನೆನಪಿಗಾಗಿ ಉಭಯ ದೇಶಗಳ ನಡುವೆ ಒಪ್ಪಂದ ಏರ್ಪಟ್ಟಿರುವುದು. ಈ ಸಂದರ್ಭದಲ್ಲಿ ಭಾರತ ಮತ್ತು ಇರಾನ್ ತಮ್ಮ ಸಂಸದರ ನಡುವೆ ವಿನಿಮಯವನ್ನು ಉತ್ತೇಜಿಸಲು ಮತ್ತು ಸಂಘಟಿಸಲು ಸಾಂಸ್ಕೃತಿಕ ಹಬ್ಬಗಳನ್ನು ಕೂಡ ಆಯೋಜಿಸುತ್ತಿವೆ.
ಯುಎಸ್ ಕಠಿಣ ನಿರ್ಬಂಧಗಳು ತೀವ್ರ ಪರಿಣಾಮ ಬೀರುತ್ತಿರುವ ಸಮಯದಲ್ಲೇ ಇರಾನ್‌ನಿಂದ ಭಾರತದ ತೈಲ ಆಮದು ಹೆಚ್ಚಾಗಿರುವುದು ಹಾಗೂ ಈ ಜಂಟಿ ಆಯೋಗದ ಸಭೆ ನಡೆದಿರುವುದು ಭಾರತ ಮತ್ತು ಇರಾನ್ ನಡುವಿನ ಆಳವಾದ ಸಂಬಂಧಗಳನ್ನು ಇನ್ನಷ್ಟು ಬಹುಮುಖಿ ರೀತಿಯಲ್ಲಿ ದೃಢಗೊಳಿಸುವ ನಿಶ್ಚಯದ ಪ್ರಯತ್ನಗಳಿಗೆ ಉದಾಹರಣೆಯಾಗಿದೆ. ಹಿಂದೆ ಎರಡೂ ದೇಶದವರು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಭೇಟಿಯಾಗಿದ್ದರು. ಈಗ ಈ ಸಂಬಂಧಕ್ಕೆ ಇನ್ನಷ್ಟು ಬದ್ಧತೆಯನ್ನು ಒದಗಿಸಲಾಗಿದೆ. ಇರಾನ್ ಅಧ್ಯಕ್ಷ ಡಾ. ಹಸನ್ ರೂಹಾನಿ ಕಳೆದ ವರ್ಷ ಭಾರತಕ್ಕೆ ಮಹತ್ವದ ಭೇಟಿ ನೀಡಿದ್ದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74ನೇ ಅಧಿವೇಶನದ ಬದಿಯಲ್ಲಿ ನ್ಯೂಯಾರ್ಕ್‌ನಲ್ಲಿ ಇರಾನ್ ಅಧ್ಯಕ್ಷರನ್ನು ಭೇಟಿ ಮಾಡಿದ್ದರು. ಇದೇ ವೇಳೆ ಭಾರತ-ಇರಾನ್ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಅವರುಗಳು ಚರ್ಚೆ ನಡೆಸಿದ್ದರು. ಹಾಗಾಗಿ ಇತ್ತೀಚೆಗೆ ಮುಕ್ತಾಯವಾದ ಜಂಟಿ ಆಯೋಗದ ಸಭೆ ಭಾರತ-ಇರಾನ್ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ಸ್ಕ್ರಿಪ್ಟ್: ಡಾ. ಎಸಿಫ್ ಶುಜಾ, ಇರಾನ್ ಕಾರ್ಯತಂತ್ರದ ವ್ಯವಹಾರಗಳ ವಿಶ್ಲೇಷಕ
Comments
Post a Comment