ಭಾರತ-ಚೀನಾ 22ನೇ ವಿಶೇಷ ಪ್ರತಿನಿಧಿಗಳ ಮಾತುಕತೆಯಲ್ಲಿ ಪ್ರಗತಿ

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಜೊತೆ ಗಡಿ ವಿಷಯಗಳ ಬಗ್ಗೆ ಮಾತುಕತೆ ನಡೆಸುವ ಉದ್ದೇಶದಿಂದ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭಾರತಕ್ಕೆ ಭೇಟಿ ನೀಡಿದ್ದರು. ಅಲ್ಲದೆ ವಾಂಗ್ ಅವರು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರನ್ನೂ ಭೇಟಿ ಮಾಡಿದ್ದರು. ಕೆಲವು ಅಂಶಗಳಿಂದಾಗಿ ಈ ಬಾರಿಯ ವಿಶೇಷ ಪ್ರತಿನಿಧಿಗಳ ಮಾತುಕತೆಯು ಗಮನಾರ್ಹವಾಗಿತ್ತು. ಭಾರತದ ಪ್ರಧಾನಿ ಮತ್ತು ಚೀನಾ ಅಧ್ಯಕ್ಷರು ತಮ್ಮ 2ನೇ ಅನೌಪಚಾರಿಕ ಶೃಂಗಸಭೆಯನ್ನು ಚೆನ್ನೈ ಬಳಿಯ ಮಾಮಲ್ಲಾಪುರದಲ್ಲಿ 2019ರ ಅಕ್ಟೋಬರ್‌ನಲ್ಲಿ ನಡೆಸಿದ್ದರು. ಶೃಂಗಸಭೆಯ ಕೊನೆಯಲ್ಲಿ ಉಭಯ ನಾಯಕರು ಎರಡೂ ದೇಶಗಳ ನಡುವೆ ಹೆಚ್ಚಿನ ವಿಶ್ವಾಸ ಮೂಡಿಸುವಂತಹ ಕ್ರಮಗಳನ್ನು (ಸಿಬಿಎಂ) ರೂಪಿಸಿದರೆ ಗಡಿಗಳು ಶಾಂತವಾಗಿರುತ್ತವೆ ಎಂಬ ನಿರ್ಧಾರಕ್ಕೆ ಬಂದಿದ್ದರು.

ಎರಡೂ ದೇಶಗಳ ನಾಯಕತ್ವವು "ದ್ವಿಪಕ್ಷೀಯ ಸಂಬಂಧಗಳ ಅಭಿವೃದ್ಧಿ ಮತ್ತು ಗಡಿ ಪ್ರಶ್ನೆಯ ಇತ್ಯರ್ಥಕ್ಕೆ ಹೊಸ ದೃಷ್ಟಿ ಮತ್ತು ಕಾರ್ಯತಂತ್ರವನ್ನು ಅನುಸರಿಸುತ್ತಿವೆ" ಎಂದು ಎನ್ಎಸ್ಎ ಅಜಿತ್ ದೋವಲ್ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. "ಭಾರತ ಮತ್ತು ಚೀನಾ ದೇಶಗಳು ನಿರ್ವಹಣಾ ನಿಯಮಗಳನ್ನು ರೂಪಿಸಲು ಒಪ್ಪಿಕೊಂಡಿವೆ ಮತ್ತು ಗಡಿ ಪಡೆಗಳ ನಡುವೆ ಸಂವಹನ ಹಾಗೂ ವಿನಿಮಯವನ್ನು ವೃದ್ಧಿಸಿಕೊಳ್ಳಲು ಅನುಕೂಲ ಆಗುವಂತಹ ಗಡಿ ಸಭಾ ಕೇಂದ್ರಗಳನ್ನು ನಿರ್ಮಿಸಲು‌ ಒಪ್ಪಿಕೊಂಡಿವೆ" ಎಂದು ಮಾತುಕತೆಯ ಬಳಿಕ ಚೀನಾದ ಕಡೆಯವರು ಹೇಳಿದ್ದಾರೆ. ಆದ್ದರಿಂದ, ಭದ್ರತಾ ಪರಿಸರದ ಅನಿಶ್ಚಿತತೆ ಮತ್ತು ತ್ವರಿತ ಮಿಲಿಟರಿ ಆಧುನೀಕರಣವನ್ನು ಗಮನದಲ್ಲಿಟ್ಟುಕೊಂಡು ಗಡಿ ನಿರ್ವಹಣೆಯಲ್ಲಿ ಯಾವುದೇ ತಪ್ಪು ಹೆಜ್ಜೆಗಳನ್ನು ಇಡುವುದನ್ನು ತಡೆಯಲು ಮತ್ತು ಎರಡು ದೇಶಗಳು ಭಯೋತ್ಪಾದನೆ ವಿರುದ್ಧ ಮತ್ತಷ್ಟು ತೊಡಗಿಸಿಕೊಳ್ಳಲು ಹೆಚ್ಚಿನ ಕ್ರಮ ಕೈಗೊಳ್ಳಬೇಕೆಂಬ ಹಿನ್ನೆಲೆಯಲ್ಲಿ ಈ ಗಡಿ ಮಾತುಕತೆಯು ಬಹಳ ದೂರ ಸಾಗಿದಂತಾಗಿದೆ.

22ನೇ ಗಡಿ ಮಾತುಕತೆಯು ಲಡಾಖ್‌ ಪ್ರದೇಶವನ್ನು ಭಾರತ ಸರ್ಕಾರವು ಕೇಂದ್ರಾಡಳಿತ ಪ್ರದೇಶವನ್ನಾಗಿ ಬದಲಾಯಿಸಿದ ನಂತರ ನಡೆದ ಮೊದಲ ಮಾತುಕತೆಯಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಬಳಿಕ, ಲಡಾಖ್ ಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಿದ ಕ್ರಮಕ್ಕೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದಲ್ಲದೆ ಕಾಶ್ಮೀರದ ಸಮಸ್ಯೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತರುವ ನಿಟ್ಟಿನಲ್ಲಿ ಮುಂದಾಗಿರುವ ಪಾಕಿಸ್ತಾನದ ನಡೆಯನ್ನು ಬೆಂಬಲಿಸಿದೆ. ಈ ನಡುವೆ ಭಾರತವು ಚೀನಾವನ್ನು ತಡೆದು ನಿಲ್ಲಿಸಿದೆ.

ಗಡಿ ಮಾತುಕತೆ ಆರಂಭವಾಗುವುದಕ್ಕೂ ಸ್ವಲ್ಪ ಮೊದಲು ಚೀನಾ ದೇಶವು ಮತ್ತೊಮ್ಮೆ ಕಾಶ್ಮೀರದ ಸಮಸ್ಯೆಯ ಬಗ್ಗೆ ಸಭೆಯಲ್ಲಿ ಚರ್ಚೆ ಆಗಬೇಕು ಎಂಬ ಪ್ರಸ್ತಾಪ ಇಟ್ಟಿತ್ತು. ಆದರೆ ಯುಎನ್ ಶಾಂತಿಪಾಲನಾ ಕಾರ್ಯಾಚರಣೆ ಪರಿಸ್ಥಿತಿ ಕುರಿತು ಸದಸ್ಯರಿಗೆ ತಿಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಯಿತು. ಆದಾಗ್ಯೂ, ಯುಎನ್ ಶಾಂತಿಪಾಲನಾ ಕಾರ್ಯಾಚರಣೆಯ ವರದಿ ಸಿದ್ಧವಾದ ನಂತರ ಸಭೆಯನ್ನು ಆಯೋಜಿಸುವುದಾಗಿ ಯುಎನ್ ನಲ್ಲಿ ಚೀನಾದ ರಾಯಭಾರಿ ತಿಳಿಸಿದ್ದಾರೆ. "ಪರಸ್ಪರ ನಂಬಿಕೆಯನ್ನು ಬೆಳೆಸಲು" ಪರಸ್ಪರರ ಸೂಕ್ಷ್ಮತೆ ಮತ್ತು ಕಾಳಜಿಗಳನ್ನು ಗೌರವಿಸಬೇಕು ಎಂಬ ನಿಲುವಿಗೆ ಎರಡೂ ದೇಶದವರು ಒಪ್ಪಿಗೆ ಸೂಚಿಸಿದ್ದಾರೆ. ಹಾಗಾಗಿ ಚೀನಾ ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ನವದೆಹಲಿ ತೆಗೆದುಕೊಳ್ಳುವ ಭಾರತದ ಕ್ರಮಗಳ ಬಗ್ಗೆ ಹೆಚ್ಚು ಸೂಕ್ಷ್ಮವಾಗಿ ನಡೆದುಕೊಳ್ಳಬೇಕು ಎಂದು ಭಾರತದ ಪ್ರತಿನಿಧಿಗಳು ಸ್ಪಷ್ಟವಾಗಿ ತಿಳಿಸಿದ್ದಾರೆ.

ಗಡಿ ವಿವಾದಗಳನ್ನು ಪರಿಹರಿಸುವ ಬಗೆಗಿನ ಮಾತುಕತೆಗಾಗಿ ಚೀನಾ “ಪ್ರಾಯೋಗಿಕವಾದ ಚೌಕಟ್ಟನ್ನು” ಮುಂದಿಟ್ಟಿದೆ ಹಾಗೂ “ಭಾರತದ ಗಮನವನ್ನು ಸೆಳೆದಿದೆ” ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಗಡಿ ಮಾತುಕತೆಗಳ ಬಗ್ಗೆ ಬಂದ ಕೆಲವೇ ಸಕಾರಾತ್ಮಕ ಹೇಳಿಕೆಗಳಲ್ಲಿ ಇದು ಕೂಡ ಒಂದಾಗಿದೆ. ಚೌಕಟ್ಟಿನ ಸ್ಪಷ್ಟ ಸ್ವರೂಪದ ಬಗ್ಗೆ ಇನ್ನೂ ಹೆಚ್ಚಿನ ವಿವರಗಳ ಕೊರತೆಯಿದೆ. ಜೊತೆಗೆ ಚೌಕಟ್ಟಿನ ಅಂಶಗಳನ್ನು ಭಾರತೀಯ ಕಡೆಯವರು ಪರಿಗಣಿಸುತ್ತಾರೆಯೇ ಎಂಬುದರ ಬಗ್ಗೆಯೂ ಇನ್ನೂ ಸ್ಪಷ್ಟತೆ ಇಲ್ಲ. ಗಡಿ ಮಾತುಕತೆ ಪ್ರಾರಂಭವಾಗುವ ಮೊದಲೇ ವಾಂಗ್ ಯಿ ಅವರು ಗಡಿಯ ಡಿಲಿಮಿಟೇಶನ್ ಬಗ್ಗೆ ಎರಡೂ ದೇಶದವರು ತಮ್ಮ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದರು. ಅಂತಿಮವಾಗಿ ರಸ್ತೆ ನಕ್ಷೆಯ ಬಗೆಗೆ ರೂಪಿಸಲಾಗಿದ್ದ ಚೌಕಟ್ಟಿನ ಬಗ್ಗೆ ಸಮಾಲೋಚನೆ ವೇಳೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕಲು ಸಾಧ್ಯವಾಗಲಿಲ್ಲ. ಆದರೂ ಪರಸ್ಪರ ಸ್ವೀಕಾರರ್ಹವಾದ ಈ ಚೌಕಟ್ಟನ್ನು ಗಟ್ಟಿಗೊಳಿಸಲು ಎರಡೂ ದೇಶದವರು ತಮ್ಮ ಬದ್ಧತೆ ವ್ಯಕ್ತಪಡಿಸಿರುವುದಕ್ಕೆ ಸಾಕ್ಷ್ಯಗಳು ಸಿಗುತ್ತವೆ.

ಈಗ ನಡೆದ ಗಡಿ ಮಾತುಕತೆ ಬಹಳ ಮಹತ್ವವನ್ನು ಪಡೆದುಕೊಂಡಿದೆ. ಏಕೆಂದರೆ ಎರಡೂ ದೇಶಗಳು ಮುಂದಿನ ವರ್ಷ ರಾಜತಾಂತ್ರಿಕ ಸಂಬಂಧಗಳ 70ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿವೆ. ಆದ್ದರಿಂದ, ಎರಡೂ ದೇಶಗಳು ತಮ್ಮ ದ್ವಿಪಕ್ಷೀಯ ಸಂಬಂಧಗಳ ಮಾತುಕತೆ ವೇಳೆ ಅವಕಾಶಗಳ ಸೃಷ್ಟಿಗಾಗಿ ಪ್ರಮುಖ ಸುಧಾರಣೆಗಳನ್ನು ತರಲು ಯೋಜಿಸುತ್ತಿರುವಂತೆ ತೋರುತ್ತಿರುವುದರಿಂದ ಈ ನಿಟ್ಟಿನಲ್ಲಿ ಸ್ವಲ್ಪ ಮುನ್ನಡೆಯುವುದು ಬಹಳ ಮುಖ್ಯವಾದುದಾಗಿದೆ. ಮುಂದಿನ ವರ್ಷಕ್ಕಾಗಿ ರೂಪಿಸಲಾಗಿರುವ ಯೋಜನೆಗಳು ವಿನಿಮಯ ಮತ್ತು ಜನರಿಂದ ಜನರ ಸಹಕಾರಕ್ಕೆ ಒತ್ತು ನೀಡುತ್ತವೆ. ಚೀನಾ ಇದನ್ನು ‘ಸ್ನೇಹಕ್ಕಾಗಿ ಸಾಮಾಜಿಕ ಮತ್ತು ಸಾರ್ವಜನಿಕ ಅಡಿಪಾಯ’ ಎಂದು ಕರೆಯುತ್ತದೆ. ಪರಸ್ಪರ ಸಾಂಸ್ಕೃತಿಕ ವಿಧಾನಗಳ ಬಗ್ಗೆ ತಿಳುವಳಿಕೆಯನ್ನು ಬೆಳೆಸಿಕೊಳ್ಳುವುದು ಆದ್ಯತೆಯಾಗಿದೆ. ಇದು ಎರಡೂ ದೇಶಗಳ ಸಾಂಸ್ಕೃತಿಕ ಪರಂಪರೆಯನ್ನು ಬಳಸಿಕೊಂಡು ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸಲು ಭೌಗೋಳಿಕ ರಾಜಕೀಯ ಮಸೂರವನ್ನು ಮೀರಿ ಯೋಚಿಸಬೇಕೆಂದು ಹೇಳುವ ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರ ವಿಧಾನವನ್ನು ಪ್ರತಿಧ್ವನಿಸುತ್ತದೆ.

ಒಟ್ಟಾರೆಯಾಗಿ, ಭಾರತ-ಚೀನಾ ನಡುವಣ ಸಂಬಂಧಗಳು ಅನೇಕ ಏರಿಳಿತಗಳನ್ನು ಕಂಡಿರುವುದರಿಂದ ಗಡಿ ಮಾತುಕತೆಗಳು ಮುಂದಿನ ವರ್ಷಗಳಲ್ಲಿ ಭಾರತ-ಚೀನಾ ದ್ವಿಪಕ್ಷೀಯ ಸಂಬಂಧಕ್ಕೆ ನಾಂದಿ ಹಾಡಬಲ್ಲ ಸಕಾರಾತ್ಮಕ ಸಂಕೇತವನ್ನು ನೀಡಿವೆ.

ಸ್ಕ್ರಿಪ್ಟ್: ಡಾ. ಎಂ.ಎಸ್. ಪ್ರತಿಭಾ, ಚೀನೀ ವ್ಯವಹಾರಗಳ ಕಾರ್ಯತಂತ್ರದ ವಿಶ್ಲೇಷಕಾ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ