ಭಾರತ ಮತ್ತು ಮಾಲ್ಡೀವ್ಸ್ ನಡುವೆ 6ನೇ ಜಂಟಿ ಆಯೋಗದ ಸಭೆ

ಭಾರತ ಹಾಗೂ ಮಾಲ್ಡೀವ್ಸ್ ನಡುವಿನ 6ನೇ ಜಂಟಿ ಆಯೋಗದ ಸಭೆ (ಜೆಸಿಎಂ) ನವದೆಹಲಿಯಲ್ಲಿ ನಡೆಯಿತು. ಮಾಲ್ಡೀವ್ಸ್ ವಿದೇಶಾಂಗ ವ್ಯವಹಾರಗಳ ಸಚಿವ ಅಬ್ದುಲ್ಲಾ ಶಾಹಿದ್ ಹಾಗೂ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಭಾರತ ಹಾಗೂ ಮಾಲ್ಡೀವ್ಸ್ ನಡುವಿನ ದ್ವಿಪಕ್ಷೀಯ ಸಹಕಾರದ ಸಂಪೂರ್ಣ ಹಾದಿಯನ್ನು ಪರಿಶೀಲಿಸುವ ಬಗ್ಗೆ ಈ ಜೆಸಿಎಂ ಸಭೆಯಲ್ಲಿ ಚರ್ಚೆ ಮಾಡಲಾಯಿತು.

ಮಾಲ್ಡೀವ್ಸ್ ನಲ್ಲಿ ಸೋಲಿಹ್ ಸರ್ಕಾರ ರಚನೆಯಾದ ಬಳಿಕ ಕಳೆದ ಒಂದು ವರ್ಷದ ಅವಧಿಯಲ್ಲಿ ಸಕಾರಾತ್ಮಕ ಬೆಳವಣಿಗೆಗಳಾಗಿವೆ. ಪ್ರಜಾತಾಂತ್ರಿಕವಾಗಿ ಪರಿವರ್ತನೆಯಾಗುವ ನಿಟ್ಟಿನಲ್ಲಿ ವ್ಯಾಪಕ ಅವಕಾಶಗಳನ್ನು ಒಳಗೊಂಡ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ದಾರಿ ಮಾಡಿಕೊಡಲಾಗಿದೆ‌. ಅಭಿವೃದ್ಧಿಯಲ್ಲಿ ಸಹಕಾರ ಎಂಬುದರ ಮೂಲಕ ಮಾಲ್ಡೀವ್ಸ್‌ನಲ್ಲಿ ಸಾಮಾಜಿಕ ವಲಯದ ಅಭಿವೃದ್ಧಿಯ ಹೊರತಾಗಿ ಉಭಯ ದೇಶಗಳ ಕಡಲುಗಳು, ಭದ್ರತೆ ಮತ್ತು ರಕ್ಷಣಾ ಸಹಕಾರವನ್ನು ವಿಸ್ತರಿಸಲು ಮುಂದಾಗಿವೆ. ಮಾಲ್ಡೀವ್ ಅಧ್ಯಕ್ಷೀಯ ಚುನಾವಣೆ ನಡೆದ ಬಳಿಕ ಭಾರತವು ಆ ದೇಶಕ್ಕೆ 1.4 ಬಿಲಿಯನ್ ಯುಎಸ್ ಡಾಲರ್ ಆರ್ಥಿಕ ಪ್ಯಾಕೇಜ್ ನೀಡುವುದಾಗಿ ಘೋಷಣೆ ಮಾಡಿದೆ. ನಿರ್ಣಾಯಕ ಮೂಲಸೌಕರ್ಯ ಯೋಜನೆಗಳಿಗಾಗಿ 800 ಮಿಲಿಯನ್ ಯುಎಸ್ ಡಾಲರ್ ಸಾಲ ನೀಡುವುದಾಗಿ ಹೇಳಿದೆ. ಅಲ್ಲದೆ ಹೆಚ್ಚಿನ ಮಟ್ಟದಲ್ಲಿ ಪ್ರಭಾವ ಬೀರುವ ಸಮುದಾಯದ ಅಭಿವೃದ್ಧಿ ಯೋಜನೆಗಳಿಗಾಗಿ 5.6 ಮಿಲಿಯನ್ ಯುಎಸ್ ಡಾಲರ್ ಅನುದಾನ ನೀಡುವುದಾಗಿ ಘೋಷಣೆ ಮಾಡಿದೆ. ಭಾರತ ನೀಡಿರುವ ಈ ಸಹಾಯ ಯೋಜನೆಗಳು ಮಾಲ್ಡೀವ್ಸ್‌ಗೆ ಅದರ ವಿವಿಧ ’ಅಟಾಲ್’ಗಳ (ದ್ವೀಪಗಳು) ನಡುವಿನ ಬೆಳವಣಿಗೆಯ ಅಂತರ ನಿವಾರಿಸಿಕೊಳ್ಳಲು ನೆರವಾಗುತ್ತವೆ. 2019ರ ಯುಎನ್ ಮಾನವ ಅಭಿವೃದ್ಧಿ ವರದಿ ಪ್ರಕಾರ ಮಾಲ್ಡೀವ್ಸ್ ದೇಶದಲ್ಲಿ ಇನ್ನೂ ಕೂಡ ಬಹಳ ದೊಡ್ಡ ಮಟ್ಟದ ಅಸಮಾನತೆ ಇದೆ.

ಈ ಪ್ರದೇಶದಲ್ಲಿ ಈಗೀಗ ಸಾಂಪ್ರದಾಯಿಕವಲ್ಲದ ಬೆದರಿಕೆಗಳು ತೀವ್ರಗೊಳ್ಳುತ್ತಿರುವುದರಿಂದ ದ್ವಿಪಕ್ಷೀಯ ಸಂಬಂಧಗಳಲ್ಲಿ ಭದ್ರತಾ ಸಹಕಾರವನ್ನು ಹೆಚ್ಚಿಸುವುದು ಆದ್ಯತೆಯ ಕ್ಷೇತ್ರವಾಗಿ ಹೊರಹೊಮ್ಮಿದೆ. ಕಡಲ ಸುರಕ್ಷತೆಯನ್ನು ಹೆಚ್ಚಿಸಲು ಭಾರತವು ಕೋಸ್ಟ್ ಗಾರ್ಡ್ ಹಡಗು ‘ಕಾಮ್ಯಾಬ್’ ಅನ್ನು ಉಡುಗೊರೆಯಾಗಿ ಕೊಟ್ಟಿದೆ. ಭಾರತ-ಮಾಲ್ಡೀವ್ಸ್ ರಕ್ಷಣಾ ಸಹಕಾರದ ಅಡಿ ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ (ಎಂಎನ್‌ಡಿಎಫ್)ಗೆ ಮೂಲಸೌಕರ್ಯ ಮತ್ತು ತರಬೇತಿ ನೀಡಲಾಗುತ್ತಿದೆ. ಹಾಗೂ ಕರಾವಳಿ ಕಣ್ಗಾವಲು ರಾಡಾರ್ ವ್ಯವಸ್ಥೆಯನ್ನು (ಸಿಎಸ್‌ಆರ್) ಸ್ಥಾಪಿಸಲಾಗುತ್ತಿದೆ. ಜಂಟಿ ಆಯೋಗದ ಸಭೆಯಲ್ಲಿ ಭಾರತ ಮತ್ತು ಮಾಲ್ಡೀವ್ಸ್ ದೇಶಗಳು ಭಯೋತ್ಪಾದನೆ ನಿಗ್ರಹ, ಹಿಂಸಾತ್ಮಕ ಉಗ್ರಗಾಮಿತ್ವ ಮತ್ತು ಆಮೂಲಾಗ್ರೀಕರಣದ ಜಂಟಿ ಕಾರ್ಯ ಸಮೂಹದ ಸಭೆಗೆ ಆರಂಭಿಕ ದಿನಾಂಕ ನಿಗದಿಪಡಿಸಲು ನಿರ್ಧಾರ ಮಾಡಿದವು.

ಮಾಲ್ಡೀವ್ಸ್ ದೇಶವು ಭಯೋತ್ಪಾದನೆಯನ್ನು ನಿಯಂತ್ರಣಕ್ಕೆ ತರಲು ಹಲವು ಉಪಕ್ರಮಗಳನ್ನು ಕೈಗೆತ್ತಿಕೊಂಡಿದೆ. ಸಿರಿಯಾ ದೇಶವನ್ನು ಯುದ್ಧ ವಲಯ ಎಂದು ಘೋಷಿಸುವ ಹಾಗೂ ‘ಸರ್ಕಾರದ ಅನುಮತಿಯಿಲ್ಲದೆ ಸಿರಿಯಾ ದೇಶಕ್ಕೆ ಪ್ರಯಾಣಿಸುವುದು ಶಿಕ್ಷಾರ್ಹ ಅಪರಾಧ ಎಂದು ಹೇಳುವ' ಭಯೋತ್ಪಾದನೆ ತಡೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಮಾಲ್ಡೀವ್ಸ್ ಅಧ್ಯಕ್ಷೀಯ ಆಯೋಗವು ಇಸ್ಲಾಮಿಕ್ ಸ್ಟೇಟ್ (ಐಎಸ್) ಮತ್ತು ಅಲ್-ಖೈದಾದೊಂದಿಗೆ ಸೇರಿಕೊಂಡಿರುವ ಮಾಲ್ಡೀವ್ಸ್ ದೇಶದ ನಾಗರಿಕರ ವಿರುದ್ಧ ಇರುವ ಆರೋಪಗಳ ಮಾಹಿತಿ ಕೇಳಿದೆ. ಮೊಹಮ್ಮದ್ ಅಮೀನ್, ಅಮೇರಿಕಾವು "ಭಯೋತ್ಪಾದಕ ನಾಯಕ" ಎಂದು ಘೋಷಿಸಲ್ಪಟ್ಟಿರುವ ಮೊದಲ ಮಾಲ್ಡೀವ್ ಪ್ರಜೆಯಾಗಿದ್ದಾನೆ. ಅಧ್ಯಕ್ಷೀಯ ಆಯೋಗವು ಆಹ್ಮದ್ ರಿಲ್ವಾನ್ ಯಮೀನ್ ರಶೀದ್ ಅವರಂತಹ ದ್ವೀಪ ದೇಶದ ಪ್ರಮುಖ ಬ್ಲಾಗಿಗರು ಮತ್ತು ಪತ್ರಕರ್ತರ ಕಣ್ಮರೆ ಹಾಗೂ ಹತ್ಯೆಯಲ್ಲಿ ಆಲ್-ಖೈದಾ ಸಂಘಟನೆ ಜೊತೆ ಗುರುತಿಸಲ್ಪಟ್ಟ ಆಪಾದಿತ ನಾಯಕರಾದ ಮೊಹಮ್ಮದ್ ಮಜೀದ್ ಹಾಗೂ ಸೊಮಿತ್ ಮೊಹಮದ್ ಅವರ ಪಾತ್ರವಿದೆ ಎಂಬುದನ್ನು ಹೆಸರಿಸಿದೆ. ಜೊತೆಗೆ ಮಾಲ್ಡೀವ್ಸ್ ದೇಶದಲ್ಲಿ 2014ರ ಜನವರಿಯಿಂದ ಈವರೆಗೆ 188 ಧಾರ್ಮಿಕ ಉಗ್ರವಾದದ ಪ್ರಕರಣಗಳು ಸಂಭವಿಸಿರುವ ಬಗ್ಗೆ ವರದಿಯಾಗಿವೆ ಎಂದು ಹೇಳಿದೆ.

ಡಿಜಿಟಲ್ ಸಂಪರ್ಕ ಹಾಗೂ ಜನರಿಂದ ಜನರ ಸಂಪರ್ಕಗಳನ್ನು ಹೆಚ್ಚಿಸುವುದು ಭಾರತ-ಮಾಲ್ಡೀವ್ಸ್ ದ್ವಿಪಕ್ಷೀಯ ಮಟ್ಟದಲ್ಲಿ ಆದ್ಯತೆಯ ವಿಷಯವಾಗಿದೆ. ‘ರುಪೇ’ ಕಾರ್ಡ್ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಲು ಹಾಗೂ ಮಾಲ್ಡೀವ್ಸ್‌ಗೆ ರಾಷ್ಟ್ರೀಯ ಜ್ಞಾನ ಜಾಲ (ಎನ್‌ಕೆಎನ್) ವಿಸ್ತರಿಸುವ ಮೂಲಕ ಒಬ್ಬರಿಂದ ಒಬ್ಬರನ್ನು ಬೆಸೆದು ಸಂಪರ್ಕ ಜಾಲವನ್ನು ಬಲಗೊಳ್ಳಿಸಲು ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಜೆಸಿಎಂ ಸಭೆ ಒಪ್ಪಿಕೊಂಡಿದೆ.

ಭಾರತದ ಹಣ ಸಹಾಯದಲ್ಲಿ ಹುಲ್ಹುಮಾಲೆಯಲ್ಲಿ ಕ್ರಿಕೆಟ್ ಕ್ರೀಡಾಂಗಣ ಅಭಿವೃದ್ಧಿಗೊಳಿಸುತ್ತಿರುವ ಯೋಜನೆಯ ಪ್ರಗತಿ ಬಗ್ಗೆ ಜೆಸಿಎಂ ಪರಿಶೀಲನೆ ನಡೆಸಿತು. ಭಾರತದ ಚುನಾವಣಾ ಆಯೋಗ ಮತ್ತು ಮಾಲ್ಡೀವ್ಸ್ ಪ್ರತಿರೂಪಗಳ ನಡುವೆ 6ನೇ ಜೆಸಿಎಂ ಸಭೆಯಲ್ಲಿ ಎರಡು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಜೆಸಿಎಂ ಸಭೆಯಲ್ಲಿ ಎರಡು ದೇಶಗಳು ಅಪರಾಧದ ವಿಷಯಗಳಲ್ಲಿ ಪರಸ್ಪರ ಕಾನೂನು ನೆರವು ಹಂಚಿಕೊಳ್ಳುವ ಕುರಿತಾದ ಒಪ್ಪಂದವನ್ನು ಅಂಗೀಕರಿಸಲಾಯಿತು. ಮಾಲ್ಡೀವ್ಸ್ ವಿದೇಶಾಂಗ ಸಚಿವರು ಭಾರತದ ಪ್ರಧಾನಿಯನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ, "ಉಭಯ ದೇಶಗಳ ನಡುವಿನ ಪರಸ್ಪರ ಲಾಭದಾಯಕ ಸಹಕಾರವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು, ಪ್ರಗತಿ ಪರಿಶೀಲನೆ ನಡೆಸಲು ಹಾಗೂ ಇನ್ನೂ ಹೆಚ್ಚಿನ ಮಹತ್ವಾಕಾಂಕ್ಷೆಯ ಮಾರ್ಗಗಳನ್ನು ಹುಡುಕಿಕೊಳ್ಳಲು ಎರಡೂ ಕಡೆಯವರಿಗೆ ಜೆಸಿಎಂ ಸಭೆಯು ಅನುವು ಮಾಡಿಕೊಡುತ್ತದೆ” ಎಂಬ ಭರವಸೆ ವ್ಯಕ್ತಪಡಿಸಿದರು.

ಭಾರತ ಮತ್ತು ಮಾಲ್ಡೀವ್ಸ್ ದೇಶಗಳಿಗೆ ದ್ವಿಪಕ್ಷೀಯ ಮಾತುಕತೆ ದೃಷ್ಟಿಯಿಂದ ಕಳೆದ ವರ್ಷವು ಉತ್ಪಾದಕವಾಗಿದೆ. ಹಲವಾರು ಉನ್ನತ ಮಟ್ಟದ ಸಭೆಗಳು ಜರುಗಿವೆ. ವಿಶ್ವಾಸಾರ್ಹತೆ ಹಾಗೂ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ಮಾಲ್ಡೀವ್ಸ್ ದೇಶವು ಭಾರತದೊಂದಿಗೆ ಸಾಧ್ಯವಿರುವ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಇಚ್ಛಾಶಕ್ತಿ ಪ್ರದರ್ಶಿಸಿದೆ. ಮಾಲ್ಡೀವ್ಸ್ ದೇಶದಲ್ಲಿ ಕಂಡುಬರುತ್ತಿರುವ ದೇಶೀಯ ರಾಜಕೀಯ ಸ್ಥಿರತೆಯು ಸಹಕಾರ ವೃದ್ಧಿಯಾಗಲು ಸಹಾಯಕವಾಗಿದೆ.

6ನೇ ಜಂಟಿ ಆಯೋಗದ ಸಭೆಯು ನಾಲ್ಕು ವರ್ಷಗಳ ಅಂತರದ ಬಳಿಕ ನಡೆಯಿತು. ಆದರೂ ಇದು ಭಾರತ ಹಾಗೂ ಮಾಲ್ಡೀವ್ಸ್ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರ‌ ವೃದ್ಧಿಗೆ ಪ್ರಚೋದನೆ ನೀಡಿತು. ಒಪ್ಪಿಕೊಂಡಿರುವ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವ ಮೂಲಕ ಗೋಚರ ಬದಲಾವಣೆಯನ್ನು ತೋರಿಸುವುದು ನೆರೆಯ ಎರಡೂ ದೇಶದವರಿಗೆ ಈಗ ಸವಾಲಾಗಿದೆ. ಹಾಗೆಯೇ ನಿಷ್ಕ್ರಿಯವಾಗಿರುವ ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘ (ಸಾರ್ಕ್)ದ ಅಡಿಯಲ್ಲಿ ಪ್ರಾದೇಶಿಕ ಸಹಕಾರವು ಫಲಿತಾಂಶ ತರುವಂಥದ್ದಾಗಿರಬೇಕು ಹಾಗೂ ಜನರಿಗೆ ಸ್ಪಷ್ಟ ಪ್ರಯೋಜನಗಳನ್ನು ತರಬೇಕು ಎಂದು ಮಾಲ್ಡೀವ್ಸ್ ನಿರೀಕ್ಷೆ ಮಾಡುತ್ತಿದೆ. ಆದ್ದರಿಂದ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಸಹಕಾರವನ್ನು ಹೆಚ್ಚಿಸಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. 7ನೇ ಜಂಟಿ ಆಯೋಗದ ಸಭೆಯು 2021ರಲ್ಲಿ ಮಾಲ್ಡೀವ್ಸ್‌ನಲ್ಲಿ ನಡೆಯಲಿದೆ.

ಸ್ಕ್ರಿಪ್ಟ್: ಡಾ. ಎಂ. ಸಮತಾ, ಹಿಂದೂ ಮಹಾಸಾಗರ ಪ್ರದೇಶದ ಕಾರ್ಯತಂತ್ರ ವಿಶ್ಲೇಷಕ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ