ಮ್ಯಾಡ್ರಿಡ್ ಕಾನ್ಫರೆನ್ಸ್‌ನಲ್ಲಿ ಹವಾಮಾನ ಬದಲಾವಣೆ ತಗ್ಗಿಸುವ ಬಗ್ಗೆ ಭಾರತದ ಅಜೆಂಡಾ

ಹವಾಮಾನ ಬದಲಾವಣೆಯು ವಾಸ್ತವವಾಗಿದ್ದು, ಅದರ ಬಗ್ಗೆ ಉಪೇಕ್ಷೆ ಮಾಡಲು‌ ಸಾಧ್ಯವಿಲ್ಲ. ಪ್ರಪಂಚದ ಯಾವುದೇ ದೇಶ ಕೂಡ ಇದರ ಪರಿಣಾಮಗಳಿಂದ ಪ್ರತ್ಯೇಕವಾಗಿ ಉಳಿಯುವ ಪ್ರಶ್ನೆಯೇ ಇಲ್ಲ. ಏಕೆಂದರೆ ಇದು ಯಾವುದೋ ಒಂದು ದೇಶದ ಕ್ರಿಯೆ ಅಥವಾ ನಿಷ್ಕ್ರಿಯತೆಯ ಆಧಾರದ ಮೇಲೆ ಮಾತ್ರ ಅವಲಂಬಿತ ಆಗಿರುವುಂಥದ್ದಲ್ಲ. ಹವಾಮಾನ ವ್ಯವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆಯ ಬಿಸಿಯನ್ನು ಭಾರತ ಈಗಾಗಲೇ ಅನುಭವಿಸಲು ಆರಂಭಿಸಿದೆ. ಅನಿರ್ದಿಷ್ಟವಾದ ಮಳೆ, ಬಿಸಿ‌ ಗಾಳಿಯ ವಿಪರೀತ ಹಾವಳಿ, ಬದಲಾದ ಸಮಯದಲ್ಲಿ ತಣ್ಣನೆಯ ಗಾಳಿ ಒಂದಕ್ಕೊಂದು ಸಂಬಧ ಇಲ್ಲದಂತಾಗಿವೆ. ಇವು ಆಹಾರ ಉತ್ಪಾದನೆ, ಆರೋಗ್ಯ ಮತ್ತಿತ್ಯಾದಿಗಳ ಮೇಲೆ ಕೂಡ ಪರಿಣಾಮ‌ ಬೀರುತ್ತಿವೆ.


ಹವಾಮಾನ ಬದಲಾವಣೆ ಅಥವಾ ಸಿಓಪಿ25 ಬಗ್ಗೆ ನಡೆದ ಮ್ಯಾಡ್ರಿಡ್ ಸಮ್ಮೇಳನದಲ್ಲಿ 2020 ರಿಂದ 2015ರ ಪ್ಯಾರಿಸ್ ಒಪ್ಪಂದವನ್ನು ಕಾರ್ಯಗತಗೊಳಿಸುವ ಕ್ರಿಯಾ ಯೋಜನೆಯನ್ನು ಹೇಗೆ ಪೂರ್ಣಗೊಳಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಯಿತು.


ಎರಡು ವಾರಗಳ ಕಾಲ ನಡೆದ ಸಮ್ಮೇಳನದಲ್ಲಿ ಹವಾಮಾನ ಬದಲಾವಣೆಯಿಂದ ಆಗುತ್ತಿರುವ ಪರಿಣಾಮಗಳು, ಇದಕ್ಕೆ ಪೂರಕವಾಗಿ ನಿರ್ಮಾಣವಾಗುತ್ತಿರುವ ಪರಿಸ್ಥಿತಿ ಮತ್ತು ಮಾನವಕುಲದ ಮೇಲೆ ಆಗುತ್ತಿರುವ ದುರಂತಗಳಿಂದ ಜಗತ್ತನ್ನು ಉಳಿಸುವ ಕ್ರಮಗಳ ಕುರಿತು ಇರುವ ವೈಜ್ಞಾನಿಕ ಎಚ್ಚರಿಕೆಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಯುಎನ್ ಏಜೆನ್ಸಿ, ಇಂಟರ್ ಗವರ್ನಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್ ಚೇಂಜ್ (ಐಪಿಸಿಸಿ) ರಾಷ್ಟ್ರಗಳು ತಮ್ಮ ಕಾರ್ಯತಂತ್ರಗಳನ್ನು ಸದ್ಯದ ಪರಿಸ್ಥಿತಿಗೆ ಅನುಸಾರವಾಗಿ ಅಳೆಯದ ಹೊರತು, ಪ್ರಕೃತಿಯ ಮೇಲೆ ಈಗಾಗಲೇ ಉಂಟಾಗಿರುವ ಹಾನಿಗಳನ್ನು ಕಡಿಮೆ ಮಾಡುವ ವಿಷಯದಲ್ಲಿ ನಿರೀಕ್ಷಿತ ಮಟ್ಟ ಮುಟ್ಟಲು ಸಾಧ್ಯವಿಲ್ಲ ಎಂದು ಎಚ್ಚರಿಸಲಾಯಿತು.


ಯುಎನ್ ಎನ್ವಿರಾನ್ಮೆಂಟಲ್ ಪ್ರೋಗ್ರಾಂ ತನ್ನ ‘ಎಮಿಷನ್ ಗ್ಯಾಪ್ ರಿಪೋರ್ಟ್ 2019'ರಲ್ಲಿ ಅತ್ಯಂತ ಗಂಭೀರವಾದ ಎಚ್ಚರಿಕೆಯೊಂದನ್ನು ನೀಡಿದ್ದು, “ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸುವ ಅವಕಾಶವನ್ನು ನಾವು ಕಳೆದುಕೊಳ್ಳುವ ಅಂಚಿನಲ್ಲಿದ್ದೇವೆ” ಎಂದು ತಿಳಿಸಿದೆ.


ಸಾವಿರಾರು ವೈಜ್ಞಾನಿಕ ಉಲ್ಲೇಖಗಳನ್ನು ಆಧಾರಿಸಿ ವಿಶೇಷ ವರದಿ ನೀಡಿರುವ ಐಪಿಸಿಸಿ,‌ ಜಾಗತಿಕ ತಾಪಮಾನವು ಈಗಿನ ಪ್ರಮಾಣದಲ್ಲಿಯೇ ಹೆಚ್ಚಾಗುತ್ತಿದ್ದರೆ 2030 ರಿಂದ 2052ರ ನಡುವೆ ಕೈಗಾರಿಕಾ ಪೂರ್ವದ ಮಟ್ಟಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.


ಪ್ಯಾರಿಸ್ ಶೃಂಗಸಭೆಯ 2015ರ ಒಪ್ಪಂದವು ಹವಾಮಾನ ಬದಲಾವಣೆಯನ್ನು ಎದುರಿಸುವ ದೃಷ್ಡಿಯಿಂದ ನಡೆಸಬೇಕಿರುವ ಪ್ರಯತ್ನಗಳ ಬಗ್ಗೆ ಸಾಮಾನ್ಯ ಉದ್ದೇಶವೊಂದಿದ ರಾಷ್ಟ್ರಗಳೆಲ್ಲಾ ಸೇರಿಕೊಂಡು ಮಾಡಿಕೊಂಡ ಮೊದಲ ಒಪ್ಪಂದವಾಗಿದೆ. ಪ್ಯಾರಿಸ್ ಒಪ್ಪಂದದ ಪ್ರಮುಖ ಉದ್ದೇಶವೆಂದರೆ ಈ ಶತಮಾನದ ಜಾಗತಿಕ ತಾಪಮಾನ ಏರಿಕೆಯ ಪ್ರಮಾಣವನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ಇಟ್ಟುಕೊಂಡು ಹವಾಮಾನ ಬದಲಾವಣೆಯ ಬೆದರಿಕೆಗೆ ತಕ್ಕಂತೆ ಜಾಗತಿಕ ಪ್ರತಿಕ್ರಿಯೆಯನ್ನು ಹೆಚ್ಚಿಸುವುದು ಮತ್ತು ತಾಪಮಾನ ಹೆಚ್ಚಳವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸುವ ಪ್ರಯತ್ನಗಳನ್ನು ಮುಂದುವರಿಸುವುದು. ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಜಾಗತಿಕ ಕ್ರಿಯಾ ಯೋಜನೆಗೆ ಬದ್ಧವಾಗಿರಲು ಎಲ್ಲಾ ರಾಷ್ಟ್ರಗಳು ಒಪ್ಪಿಗೆ ನೀಡುವುದು ಮ್ಯಾಡ್ರಿಡ್ ಸಮ್ಮೇಳನದ‌ ಮಹತ್ವಾಕಾಂಕ್ಷೆಯ ಗುರಿಯಾಗಿತ್ತು.


ಚೀನಾ, ಭಾರತ, ಯುರೋಪಿಯನ್ ಯೂನಿಯನ್ ಮತ್ತು ಯುನೈಟೆಡ್ ಸ್ಟೇಟ್ಸ್ ದೇಶಗಳ ವತಿಯಿಂದ 2017ರಲ್ಲಿ ಪಳೆಯುಳಿಕೆ ಇಂಧನ ದಹನದ ಮೂಲಕ ಸುಮಾರು 60 ಪ್ರತಿಶತದಷ್ಟು ಇಂಗಾಲದ ಡೈಆಕ್ಸೈಡ್ ಹೊರಸೂಸಿವೆ. ಭಾರತವು ತನ್ನ ಹಸಿರು-ಮನೆ ಅನಿಲ ಹೊರಸೂಸುವಿಕೆಯ ತೀವ್ರತೆಯನ್ನು ಜಿಡಿಪಿಯ ಪ್ರತಿ ಯೂನಿಟ್‌ಗೆ 33-35 ಪ್ರತಿಶತದಷ್ಟು ಕಡಿಮೆ ಮಾಡುವುದಾಗಿ ಪ್ರತಿಜ್ಞೆ ಮಾಡಿತ್ತು. ಆದರಿದು 2030ರ ವೇಳೆಗೆ 2005ರ ಮಟ್ಟಕ್ಕಿಂತಲೂ ಹೆಚ್ಚಾಗಲಿದೆ. ಭಾರತವು ತನ್ನ ಬೇಷರತ್ತಾದ ಗುರಿಗಳನ್ನು ಈಗಿರುವ ನೀತಿಗಳ ಮೂಲಕವೇ ಪೂರೈಸುವ ನಿರೀಕ್ಷೆಯಿದೆ ಹಾಗೂ ತನ್ನ ಗುರಿಯನ್ನು ಶೇಕಡಾ 15ಕ್ಕಿಂತ ಹೆಚ್ಚಿಸುವ ನಿರೀಕ್ಷೆಯನ್ನು ಕೂಡ ಇಟ್ಟುಕೊಂಡಿದೆ. ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣವನ್ನು ಕಡಿಮೆ ಮಾಡುವ ಮಹತ್ವಾಕಾಂಕ್ಷೆಗೆ ಪುಷ್ಠಿ ನೀಡುವ ನವದೆಹಲಿಯ ಬದ್ಧತೆಯು ಅದರ ನಾಲ್ಕು ಪ್ರಮುಖ ಉಪಕ್ರಮಗಳ ಮೇಲೆ ನಿಂತಿದೆ. ಅವುಗಳೆಂದರೆ ಕಲ್ಲಿದ್ದಲಿನ ಮೂಲಕ ಉತ್ಪಾದಿಸಲ್ಪಟ್ಟ ವಿದ್ಯುತ್ ಸ್ಥಾವರಗಳಿಂದ ಪಳೆಯುಳಿಕೆ ರಹಿತವಾಗಿ ಇಂಧನ ಮೂಲಗಳಿಗೆ ರವಾನಿಸುವುದು, ಶೂನ್ಯ-ಹೊರಸೂಸುವಿಕೆ ತಂತ್ರಜ್ಞಾನಗಳತ್ತ ಆರ್ಥಿಕ-ವ್ಯಾಪಕ ಹಸಿರು ಕೈಗಾರಿಕೀಕರಣ ತಂತ್ರವನ್ನು ಅಭಿವೃದ್ಧಿಪಡಿಸುವುದು, ಸಾಮೂಹಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ವಿಸ್ತರಿಸುವುದು ಹಾಗೂ ಶೇಕಡಾ 100 ರಷ್ಟು ಶೂನ್ಯ ಪ್ರಮಾಣದಲ್ಲಿ ಹೊಗೆಯನ್ನು ಹೊರಸೂಸುವ ವಿದ್ಯತ್ಛಾಲಿತ ಕಾರುಗಳನ್ನು ಮಾರಾಟ ಮಾಡುವುದಾಗಿದೆ.


ಮ್ಯಾಡ್ರಿಡ್ ಸಮ್ಮೇಳನದಲ್ಲಿ ಭಾರತವು ಸುಸ್ಥಿರ ಅಭಿವೃದ್ಧಿ ಬಗ್ಗೆ ಮಹಾತ್ಮ ಗಾಂಧಿಯವರು ಹೊಂದಿದ್ದ ದೃಷ್ಟಿಕೋನವನ್ನು ಪ್ರಸ್ತುತಪಡಿಸಿತು. ಬಯಕೆಗಳನ್ನು ಕಡಿಮೆ ಮಾಡುವ ಮತ್ತು ಸರಳತೆಯಿಂದ ಬದುಕುವ ಗಾಂಧೀಜಿಯವರ ತತ್ತ್ವಶಾಸ್ತ್ರವನ್ನು ಹೇಳಿತು. ಸುಸ್ಥಿರ ಬಳಕೆ ಮತ್ತು ಉತ್ಪಾದನೆಯ ತತ್ವಗಳ ಆಧಾರದ ಮೇಲೆ ಮಹತ್ವಾಕಾಂಕ್ಷೆಯ ಪರಿಹಾರ ಕ್ರಮಗಳ ಮೂಲಕ ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬಹುದೆಂದು ಭಾರತ ಪ್ರತಿಪಾದಿಸಿತು.


"ಭಾರತವು ಹೊಗೆ ಹೊರಹಾಕುವಿಕೆಯ ತೀವ್ರತೆಯನ್ನು ಶೇಕಡಾ 21ರಷ್ಟು ಕಡಿಮೆಗೊಳಿಸಿದೆ ಮತ್ತು ಪ್ಯಾರಿಸ್ ನಲ್ಲಿ ಭರವಸೆ ನೀಡಿದಂತೆ ಶೇಕಡಾ 35ರಷ್ಟು ಹೊಗೆ ಹೊರಹಾಕುವಿಕೆಯ ಕಡಿತದ ಗುರಿಯನ್ನು ಸಾಧಿಸುವ ಹಾದಿಯಲ್ಲೂ ಇದೆ" ಎಂದು ಭಾರತೀಯ ನಿಯೋಗದ ಮುಖ್ಯಸ್ಥ ಮತ್ತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ಸಿಓಪಿ25ಕ್ಕೆ ತಿಳಿಸಿದರು. ಹವಾಮಾನ ಬದಲಾವಣೆ ಬಗ್ಗೆ ಕ್ರಮ ಕೈಗೊಳ್ಳುವ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಮುಖವಾದ ಆರು ದೇಶಗಳ ಪೈಕಿ ಭಾರತವು ಕೂಡ ಒಂದಾಗಿರಲಿದೆ ಎಂದು ಅವರು ಹೇಳಿದ್ದಾರೆ.


ಪ್ಯಾರಿಸ್ ಒಪ್ಪಂದದಲ್ಲಿ ನಿಗದಿಪಡಿಸಿರುವಂತೆ 175 ಗಿಗಾವಾಟ್ ನವೀಕರಿಸಬಹುದಾದ ಇಂಧನ ಗುರಿಯ ಪೈಕಿ ಭಾರತವು ಈಗಾಗಲೇ 83 ಗಿಗಾವಾಟ್ ಅನ್ನು ಬಳಸುತ್ತಿದೆ. ಮತ್ತು ಈ ಗುರಿಯನ್ನು 450 ಗಿಗಾವಾಟ್‌ಗೆ ಹೆಚ್ಚಿಸುವುದಕ್ಕಾಗಿ ಯೋಜಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.


ಹವಾಮಾನ ವಿಜ್ಞಾನ ಸ್ಪಷ್ಟವಾಗಿದೆ: ಜಗತ್ತು ಭಾರಿ ಪ್ರಮಾಣದ ಪರಿಸರ ಮತ್ತು ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹವಾಮಾನ ತುರ್ತುಪರಿಸ್ಥಿತಿಯು ಸದ್ಯದ ಅತ್ಯಂತ ನಿರ್ಣಾಯಕವಾದ ಮತ್ತು ಬಹಳ ಜರೂರಾದ ವಿಷಯವಾಗಿದೆ. ಈ ಪರಿಸ್ಥಿತಿಯಿಂದ ಹೊರಬರಲು ಪಳೆಯುಳಿಕೆ-ಇಂಧನ ಅವಲಂಬನೆಯಿಂದ ಜಾಗತಿಕ ಬದಲಾವಣೆ ಆಗದೆ ಬೇರೆ ಮಾರ್ಗವೇ ಇಲ್ಲದಂತಾಗಿದೆ.


ಸ್ಕ್ರಿಪ್ಟ್: ಎನ್. ಭದ್ರನ್ ನಾಯರ್, ಕಾರ್ಯನಿರ್ವಾಹಕ ಸಂಪಾದಕ, ಇಂಡಿಯನ್ ಸೈನ್ಸ್ ಜರ್ನಲ್

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ