ಸೌದಿ-ಕತಾರ್ ಹಿಮದ್ರವನ: ಮೃದುಭಾವಗಳ ಆಟ
40ನೇ ಕೊಲ್ಲಿ ಸಹಕಾರ ಮಂಡಳಿಯ (GCC) ಸುಪ್ರೀಂ ಕೌನ್ಸಿಲ್ ಶೃಂಗಸಭೆಯಿಂದ ಸೌದಿ-ಕತಾರ್ ಸಂಬಂಧ ತಿಳಿಯಾಗುತ್ತಿದೆಯೆಂಬ ಭಾವನೆಗೆ ಆಸ್ಪದ ಕೊಟ್ಟಿದೆ. ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುತ್ತಿದೆ ಎಂದು ಸೌದಿ ಅರೇಬಿಯಾ, ಈಜಿಪ್ಟ್, UAE ಮತ್ತು ಬಹ್ರೇನ್ ಕ್ವಾರ್ಟೆಟ್, ಕತಾರ್ ಅನ್ನು ದೂಷಿಸಿ ರಾಜತಾಂತ್ರಿಕ ಸಂಬಂಧಗಳನ್ನು ಸಂಪೂರ್ಣವಾಗಿ ಕಡಿತಗೊಳಿಸಿತ್ತು. ರಿಯಾದ್‌ನಲ್ಲಿ ನಡೆಯಲಿರುವ 2019ರ GCC ಶೃಂಗಸಭೆಯಲ್ಲಿ ಭಾಗವಹಿಸಲು ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಅವರು ಕತಾರಿ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ಥಾನಿಗೆ ವೈಯಕ್ತಿಕ ಆಹ್ವಾನವನ್ನು ಕಳುಹಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಕತಾರ್ ತನ್ನ ಪ್ರಧಾನ ಮಂತ್ರಿ ಶೇಖ್ ಅಬ್ದುಲ್ಲಾ ಬಿನ್ ನಾಸರ್ ಅಲ್ಥಾನಿಯನ್ನು ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಕಳುಹಿಸಿತ್ತು. ಇದು 2017ರಿಂದೀಚೆಗೆ ಕತಾರ್ ನ ಅತ್ಯುನ್ನತ ಪ್ರಾತಿನಿಧ್ಯವಾಗಿದೆ. ಈ ಸಮಯದಲ್ಲಿ ಸೌದಿ ಅರೇಬಿಯಾ ಕತಾರ್ ಅನ್ನು ಅರೇಬಿಯನ್ ಪರ್ಯಾಯ ದ್ವೀಪದಿಂದ ವಿಮುಕ್ತಿಗೊಳಿಸಲು ಬಯಸಿತ್ತು. ಇದನ್ನು ಪೂರೈಸಲು ಕತಾರ್ ಅನ್ನು ಒಂದು ದ್ವೀಪವನ್ನಾಗಿ ಪರಿವರ್ತಿಸಲು 200 ಮೀಟರ್ ಅಗಲದ ‘ಸಾಲ್ವ’ ಕಾಲುವೆಯನ್ನು ಕತಾರ್‌ನ 61 ಕಿ.ಮೀ ಗಡಿಯುದ್ದಕ್ಕೂ ನಿರ್ಮಿಸಲು ಬಯಸಿತ್ತು.
ಸೌದಿ-ಕತಾರ್ ಮೃದುವಾದ ನಡವಳಿಕೆಯಿಂದ ಎರಡೂ ದೇಶಗಳ ಪರಸ್ಪರ ಸಂಬಂಧ ಬೆಚ್ಚಗಾಗುತ್ತಿದೆ. ಈ ವರ್ಷದ ಆರಂಭದಲ್ಲಿ, ಸೌದಿ ಅರಾಮ್ಕೊ ತೈಲ ಸೌಲಭ್ಯದ ಮೇಲಿನ ದಾಳಿಯ ಹಿನ್ನೆಲೆಯಲ್ಲಿ, ತುರ್ತು ಭದ್ರತಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಕತಾರ್ ಪ್ರೀಮಿಯರ್ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ಧರು. ದೋಹಾದಲ್ಲಿ ನಡೆದ ಗಲ್ಫ್ ಕಪ್ ಸಾಕರ್ ಪಂದ್ಯಾವಳಿಯಲ್ಲಿ ಸೌದಿ ಅರೇಬಿಯಾ, UAE ಮತ್ತು ಬಹ್ರೇನ್ ಇತ್ತೀಚೆಗೆ ಭಾಗವಹಿಸಿರುವುದು ಸೌದಿ ಅರೇಬಿಯಾದ ಗುಪ್ತಚರ ಸೇವೆಯ ಮಾಜಿ ಮುಖ್ಯಸ್ಥ ಪ್ರಿನ್ಸ್ ತುರ್ಕಿ ಅಲ್-ಫೈಸಲ್ ಈ ಮೂರು ದೇಶಗಳು ಕತಾರ್‌ನೊಂದಿಗೆ ತೊಡಗಿಸಿಕೊಳ್ಳಲು ಸಿದ್ಧವಾಗಿವೆ ಎಂಬುದರ ಸಂಕೇತವಾಗಿದೆ ಎಂದು ಒತ್ತಿ ಹೇಳಿದ್ದಾರೆ. ಅರಾಮ್ಕೊ ದಾಳಿಯಿಂದ ತೈಲ ಉತ್ಪಾದನೆಯನ್ನು ಅರ್ಧಕ್ಕೆ ಇಳಿಸಬೇಕಾದ ಕಾರಣದಿಂದ, ಸೌದಿಯು ಮೃದು ನಿಲುವು ತೆಗೆದುಕೊಳ್ಳಲು ಪ್ರೇರೇಪಿಸಿರಬಹುದು. ಇದರ ಜೊತೆಯಲ್ಲಿ, ಪ್ರಾದೇಶಿಕ ಘಟನೆಗಳಿಗೆ ಅಮೆರಿಕಾ ನೀಡಿದ ನಿರುತ್ಸಾಹ ಪ್ರತಿಕ್ರಿಯೆಯು, ವಿಶೇಷವಾಗಿ ಅರಾಮ್ಕೊ ದಾಳಿ ಕುರಿತು, ಸೌದಿ ಅರೇಬಿಯಾವು ಅಮೆರಿಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಗಲ್ಫ್ ಐಕ್ಯತೆಯನ್ನು ಬಲಪಡಿಸಲು ಕಾರಣವಾಯಿತು. ಇದು 2019ರ GCC ಶೃಂಗಸಭೆಯ ಜಂಟಿ ಸಂವಹನದಲ್ಲಿ ಗೋಚರಿಸಿತು.
ಆದಾಗ್ಯೂ, ಕತಾರ್ ವಿರುದ್ಧ UAE ಇನ್ನೂ ದೃಡ ನಿಲುವನ್ನು ಹೊಂದಿದೆ ಮತ್ತು ಕತಾರ್ ಜೊತೆಯ ಅನುಸಂಧಾನದಲ್ಲಿ ಯಾವುದೇ ಬದಲಾವಣೆಯ ಸೂಚನೆಯನ್ನು ನೀಡಿಲ್ಲ. ಹಾಗಾಗಿ ಈ ಸೂಚನೆಗಳು ಮುಂದಿನ ದಿನಗಳಲ್ಲಿ ಕತಾರ್ ನ ಬಿಕ್ಕಟ್ಟಿನ ಅಂತ್ಯವನ್ನು ಖಚಿತಪಡಿಸುವುದಿಲ್ಲ. UAEಯ ವಿದೇಶಾಂಗ ವ್ಯವಹಾರ ಸಚಿವ ಅನ್ವರ್ ಗರ್ಗಶ್ ಅವರು ಈ ಬಿಕ್ಕಟ್ಟಿಗೆ ಕತಾರ್ ಅನ್ನು ದೂಷಿಸಿದ್ದಾರೆ ಮತ್ತು ಪರಿಹಾರದ ಹೊಣೆಗಾರಿಕೆಯು ಬಿಕ್ಕಟ್ಟಿಗೆ ಕಾರಣವಾದವರ ಜವಾಬ್ದಾರಿ ಎಂದೂ ಹೇಳಿದ್ದಾರೆ. ಕತಾರ್ ಬಿಕ್ಕಟ್ಟಿನ ಪರಿಹಾರಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದೂ ಅವರು ಉಲ್ಲೇಖಿಸಿದ್ದಾರೆ. GCC ಶೃಂಗಸಭೆಯಲ್ಲಿ ಕತಾರ್ ಎಮಿರ್ ಅವರ ಅನುಪಸ್ಥಿತಿಯ ಬಗ್ಗೆ ಬಹ್ರೇನ್‌ನ ವಿದೇಶಾಂಗ ಸಚಿವ ಖಾಲಿದ್ ಬಿನ್ ಅಹ್ಮದ್ ಅಲ್ ಖಲೀಫಾ ಗಮನಸೆಳೆದರು ಮತ್ತು ಸೌದಿ ನೇತೃತ್ವದ ಬಣದೊಂದಿಗೆ ದೀರ್ಘಕಾಲದ ಬಿರುಕನ್ನು ಕೊನೆಗೊಳಿಸುವ ಬಗ್ಗೆ ಕತಾರ್ ಗಂಭೀರವಾಗಿಲ್ಲ ಎಂದೂ ಹೇಳಿದರು.
ಅದೇನೇ ಇದ್ದರೂ, ಕತಾರ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಮೊಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಬಿನ್ ಜಾಸಿಮ್ ಅಲ್ಥಾನಿ ಅವರು ಪರಸ್ಪರ ಗೌರವ ಮತ್ತು ಇತರ ದೇಶಗಳ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವ ಆಧಾರದ ಮೇಲೆ ಬೇಷರತ್ತಾದ ಸಂವಾದದಲ್ಲಿ ತೊಡಗಿಸಿಕೊಳ್ಳಲು ಕತಾರ್‌ನ ಇಚ್ಛೆಯನ್ನು ಪುನರುಚ್ಚರಿಸಿದ್ದಾರೆ. ಸಧ್ಭಾವನೆಯ ಸೂಚನೆಯಂತೆ UAE ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಸಹೋದರ ಶೇಖ್ ಸುಲ್ತಾನ್ ಸಾವಿಗೆ ಕತಾರಿ ಎಮಿರ್ ಅವರು ಸಂತಾಪ ಸೂಚಿಸಿದ್ದಾರೆ. ಇವರು ಅಕ್ಟೋಬರ್‌ನಲ್ಲಿ ಕತಾರ್‌ನಲ್ಲಿ ಬಹ್ರೇನ್ ಒಳಗೊಂಡ ಹ್ಯಾಂಡ್‌ಬಾಲ್ ಆಟದಲ್ಲೂ ಭಾಗವಹಿಸಿದ್ದರು. ಸಾಂಪ್ರದಾಯಿಕ ಅರಬ್ ಜಗತ್ತಿನಲ್ಲಿ ಇಂತಹ ‘ದೃಗ್ವಿಜ್ಞಾನ’ ಬಹಳ ಪ್ರಾಮುಖ್ಯತೆ ಪಡೆದಿದೆ. ಆದಾಗ್ಯೂ, GCCಯಲ್ಲಿನ ಬಿರುಕನ್ನು ಇತರ ಪ್ರಾದೇಶಿಕ ಶಕ್ತಿಯಾದ ಇರಾನ್ ತನ್ನ ಅನುಕೂಲಕ್ಕೆ ನೋಡುತ್ತದೆ. ಇರಾನ್-ಅಮೆರಿಕಾದ ಪರಮಾಣು ಒಪ್ಪಂದದ ಭವಿಷ್ಯವು ನಿರುಪಯುಕ್ತವಾದ್ದರಿಂದ ಅಮೆರಿಕ ಹೇರಿದ ನಿರ್ಬಂಧಗಳಿಂದ ಹೊರಬರಲು ಇರಾನ್ ಉತ್ಸುಕವಾಗಿದೆ.
ಕತಾರ್ ಬಿಕ್ಕಟ್ಟನ್ನು ಪರಿಹರಿಸಲು ಭಾರತ ಯಾವಾಗಲೂ ಕರೆ ನೀಡುತ್ತಾ ಬಂದಿದೆ. ಪರ್ಷಿಯನ್ ಕೊಲ್ಲಿಯ ಶಾಂತಿ, ಸುರಕ್ಷತೆ ಮತ್ತು ಸ್ಥಿರತೆಗೆ ಇದು ನಿರ್ಣಾಯಕವಾಗಿದೆ. ಅಲ್ಲದೆ, ಸೌದಿ ಅರೇಬಿಯಾದಲ್ಲಿ 3.2 ಮಿಲಿಯನ್ ಮತ್ತು ಕತಾರ್ ನಲ್ಲಿ 0.6 ಮಿಲಿಯನ್ ಭಾರತೀಯ ವಲಸಿಗರಿದ್ದಾರೆ. ಅವರ ಸುರಕ್ಷತೆಯು ಭಾರತದ ಪ್ರಮುಖ ಕಾಳಜಿಯಾಗಿದೆ. ವ್ಯಾಪಾರ, ಇಂಧನ, ವಲಸಿಗರು, ಹಣ ರವಾನೆ ಮತ್ತು ಹಜ್ ತೀರ್ಥಯಾತ್ರೆಯಂತಹ ಕಾರಣಗಳಿಗಾಗಿ ಸೌದಿ ಅರೇಬಿಯಾ ದೇಶ ಭಾರತಕ್ಕೆ ಮಹತ್ವದ್ದಾಗಿದೆ. ಆದರೆ ಕತಾರ್ ದೇಶದೊಂದಿಗೆ ಮಾತ್ರ ಭಾರತ ದೀರ್ಘಾವಧಿಯ ಇಂಧನ ಆಮದು ಒಪ್ಪಂದವನ್ನು ಹೊಂದಿರುವುದು.
ಕತಾರ್ ಅನ್ನು ಕ್ವಾರ್ಟೆಟ್ ಪ್ರತ್ಯೇಕಿಸಿದಾಗ ಭಾರತವು ಸಮತೋಲಿತ ನಿಲುವನ್ನು ತೆಗೆದುಕೊಂಡಿತು. ಇತರ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಪರಸ್ಪರ ಗೌರವ, ಸಾರ್ವಭೌಮತ್ವ ಮತ್ತು ಹಸ್ತಕ್ಷೇಪ ಮಾಡದಿರುವ ಸುಸ್ಥಾಪಿತ ಅಂತಾರಾಷ್ಟ್ರೀಯ ತತ್ವಗಳ ಆಧಾರದ ಮೇಲೆ ರಚನಾತ್ಮಕ ಸಂವಾದ ಮತ್ತು ಶಾಂತಿಯುತ ಮಾತುಕತೆಗಳ ಪ್ರಕ್ರಿಯೆಯ ಮೂಲಕ ಎಲ್ಲಾ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಅಗತ್ಯವನ್ನು ಭಾರತ ಒತ್ತಿ ಹೇಳಿದೆ. ಕತಾರ್ ಬಿಕ್ಕಟ್ಟಿನ ಪರಿಹಾರವು ಪ್ರಾದೇಶಿಕ ಮತ್ತು ಜಾಗತಿಕ ಸ್ಥಿರತೆಗೆ ಅವಶ್ಯಕವಾಗಿದೆ ಮತ್ತು ಸೌದಿ-ಕತಾರ್ ಸಂಬಂಧಗಳು ಬೆಸಿಯುವ ಸೂಚನೆಗಳು ಈ ಪ್ರದೇಶಕ್ಕೆ ಹಾಗೂ ಭಾರತಕ್ಕೂ ಸಕಾರಾತ್ಮಕ ಸಂಕೇತವಾಗಿದೆ.
ಲೇಖನ: ಡಾ. ಲಕ್ಷ್ಮೀಪ್ರಿಯಾ, ಸಂಶೋಧನಾ ವಿಶ್ಲೇಷಕ, IDSA
Comments
Post a Comment