ನೀರು ನಿರ್ವಹಣೆಯಲ್ಲಿ ಭಾರತದ ಪವಿತ್ರವಾದ ನಡೆ

ಲಕ್ಷಾಂತರ ಜನರಿಗೆ ನೀರಿನ ಬವಣೆಯಿಂದ ಮುಕ್ತಿ ನೀಡಲು ಭಾರತ ಸರ್ಕಾರವು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯಂದು ಮಹತ್ವಾಕಾಂಕ್ಷೆಯ ನೀರು ನಿರ್ವಹಣಾ ಯೋಜನೆಯಾದ ‘ಅಟಲ್ ಭುಜಲ್ ಯೋಜನೆ’ಯನ್ನು ರಾಷ್ಟ್ರಕ್ಕೆ ಸಮರ್ಪಿಸುವ ದೃಢ ನಿರ್ಧಾರವನ್ನು ಕೈಗೊಂಡಿದೆ‌. ವಾಸ್ತವವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಅಧಿಕಾರಕ್ಕೆ ಬಂದು "ಜಲ ಶಕ್ತಿ" ಸಚಿವಾಲಯವನ್ನು ರಚಿಸಿದಾಗ ನೀರಿನ ಬಿಕ್ಕಟ್ಟನ್ನು‌ ಭಾರತವು ಹೇಗೆ ಸಮರ್ಥವಾಗಿ ನಿಭಾಯಿಸಲಿದೆ ಎಂದು ಪ್ರಪಂಚವೇ ಕುತೂಹಲದಿಂದ ನೋಡಿತ್ತು. ನೀರಿನ ವಿಷಯವನ್ನು ಇತರೆ ವಿಭಾಗೀಕರಿಸಲಾದ ವಿಷಯಗಳಿಂದ ಬೇರ್ಪಡಿಸಿ ಸಮಗ್ರಗೊಳಿಸಿರುವುದು ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಸಹಕಾರಿಯಾಗಿದೆ.

ಜನರ ನಿರೀಕ್ಷೆಗಳು ಹಾಗೂ ಆಕಾಂಕ್ಷೆಗಳಿಗೆ ಅನುಗುಣವಾಗಿ ದೇಶದ ಸಮಸ್ಯೆಗಳನ್ನು ಪರಿಹರಿಸದೇ ಇದ್ದರೆ ಹೊಸ ಭಾರತದ ದೃಷ್ಟಿ ಫಲಪ್ರದವಾಗಿ ಪರಿಣಮಿಸುವುದಿಲ್ಲ. ಅಟಲ್ ಭುಜಲ್ ಯೋಜನೆ ಗುಜರಾತ್, ರಾಜಸ್ಥಾನ, ಹರಿಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದ 78 ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ಸಮಸ್ಯೆಯನ್ನು ಪರಿಹರಿಸಲಿದೆ. ಅಲ್ಲದೆ ಕೃಷಿ ಕ್ಷೇತ್ರದಲ್ಲಿ ಪರ್ಯಾಯ ಬೆಳೆಗಳ ಅಗತ್ಯತೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಕೂಡ ಸಹಾಯ ಮಾಡುತ್ತದೆ.

ಭಾರತದ ಕೃಷಿ ಕ್ಷೇತ್ರವು ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲ ಬಳಕೆಯ ಮೂಲಕ ನಡೆಸುವ ನೀರಾವರಿ ಪದ್ಧತಿಯನ್ನು ಆಧರಿಸಿದೆ. ಆದರೀಗ ದೊಡ್ಡ ಪ್ರಮಾಣದ ಹೊರತೆಗೆಯುವಿಕೆ ಹಾಗೂ ಬದಲಾಗುತ್ತಿರುವ ಮಳೆಯ ಮಾದರಿಗಳನ್ನು ಪರಿಗಣಿಸಿ ಭಾರಿ ಪ್ರಮಾಣದಲ್ಲಿ ಕ್ಷೀಣಿಸಿದೆ. ಅಧ್ಯಯನದ ಪ್ರಕಾರ ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ಅಂತರ್ಜಲ ಕೋಷ್ಟಕವು ಶೇಕಡಾ 61ರಷ್ಟು ಕಡಿಮೆಯಾಗಿದೆ. ಅಂತರ್ಜಲ ಕುಸಿತಕ್ಕೆ ಜಾಗತಿಕ ತಾಪಮಾನ ಹೆಚ್ಚುತ್ತಿರುವುದು ಹಾಗೂ ಅನಿಯಮಿತವಾದ ಮಾನ್ಸೂನ್ ಮಳೆಗಳು ಪ್ರಮುಖ ಕಾರಣಗಳಾಗಿವೆ. 1950ರಿಂದ ಈಚೆಗೆ ಸರಾಸರಿ ಮಳೆ ಶೇಕಡಾ 7ರಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ. ಭಾರತದಲ್ಲಿ ಸಾಮಾನ್ಯವಾಗಿ ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮಾನ್ಸೂನ್ ಸಂಭವಿಸುತ್ತದೆ. ನೈಋತ್ಯದಿಂದ ಬೀಸುವ ಗಾಳಿಯು ಹಿಂದೂ ಮಹಾಸಾಗರ, ಅರೇಬಿಯನ್ ಸಮುದ್ರ ಹಾಗೂ ಬಂಗಾಳಕೊಲ್ಲಿಯಿಂದ ತೇವಾಂಶವನ್ನು ಹೊತ್ತು ತಂದು ಭೂಮಿಯ ಮೇಲೆ ಮಳೆಯಾಗಿ ಸುರಿತ್ತದೆ. ಬಳಿಕ ಅಕ್ಟೋಬರ್ ಹಾಗೂ ಡಿಸೆಂಬರ್ ನಡುವೆ ಗಾಳಿಯು ತನ್ನ ದಿಕ್ಕನ್ನು ಬದಲಿಸಿ ಇತರೆ ದಿಕ್ಕುಗಳಿಂದ ಬೀಸಲಿದೆ. ಹೀಗಿದ್ದರೂ ಹವಾಮಾನ ಬದಲಾವಣೆಯ ಕಾರಣದಿಂದಾಗಿ ಮಳೆಗಾಲದ ಕಾಲಾನುಕ್ರಮದಲ್ಲಿ ಏರುಪೇರುಗಳಾಗುತ್ತಿವೆ.

ಮಳೆಯ ವಿಷಯದಲ್ಲಿ ನಿಯಮಿತ ಮಾದರಿ ಬದಲಾಗಿದ್ದು, ಈಗ ಮಳೆಯಿಲ್ಲದ ಹಂತಗಳು ಸೃಷ್ಟಿಯಾಗುತ್ತಿವೆ. ಕೆಲವೊಮ್ಮ ಬರ ಮತ್ತು ಕೆಲವೊಮ್ಮೆ ಪ್ರವಾಹ ಪರಿಸ್ಥಿತಿಯೂ ಕಂಡುಬರುತ್ತಿದೆ. ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಭಾರತವು ಕಡಿಮೆ ಪ್ರಮಾಣದ ಹಸಿರುಮನೆ ಅನಿಲ (ಜಿಎಚ್‌ಜಿ)ವನ್ನು ಹೊರಸೂಸುತ್ತದೆ.‌ ಇಂಥ ಕೊಡುಗೆ ನೀಡುವುದರ ಹೊರತಾಗಿಯೂ ಭಾರತ ಈ ಎಲ್ಲಾ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಈ ನಡುವೆ ಸಿಕ್ಕಿರುವ ಒಳ್ಳೆಯ ಸುದ್ದಿ ಏನೆಂದರೆ, ಅಂತರ್ಜಲ ಕ್ಷೀಣತೆಯ ಭೀತಿಯನ್ನು ಎದುರಿಸಲು ಭಾರತ ಸರ್ಕಾರ ಸಿದ್ಧವಾಗಿದೆ. ಅಟಲ್ ಭುಜಲ್ ಯೋಜನೆಯ ನಿರ್ಮಿತ ಕಾರ್ಯವಿಧಾನದಲ್ಲಿ ಈ ಸಂಗತಿಯನ್ನು ಸ್ಪಷ್ಟವಾಗಿ ಸೂಚಿಸಲಾಗಿದೆ. ಅಂತರ್ಜಲ ನಿರ್ವಹಣೆಗೆ ಸಾಂಸ್ಥಿಕ ಚೌಕಟ್ಟನ್ನು ಬಲಪಡಿಸುವುದು ಹಾಗೂ ಸುಸ್ಥಿರ ಅಂತರ್ಜಲ ಸಂಪನ್ಮೂಲ ನಿರ್ವಹಣೆಗಾಗಿ ಜನ ಸಮುದಾಯದ ಮಟ್ಟದಲ್ಲಿ ವರ್ತನೆಯ ಬದಲಾವಣೆಗಳನ್ನು ತರಲು ಉದ್ದೇಶಿಸಲಾಗಿದೆ.

ನೀರಿನ ಬಳಕೆದಾರರ ಸಂಘಗಳ ರಚನೆ, ಅಂತರ್ಜಲ ದತ್ತಾಂಶಗಳ ಮೇಲ್ವಿಚಾರಣೆ ಹಾಗೆ ಪ್ರಸಾರ, ನೀರಿನ ಬಜೆಟ್, ಗ್ರಾಮ ಪಂಚಾಯಿತಿವಾರು ನೀರಿನ ಭದ್ರತಾ ಯೋಜನೆಗಳ ತಯಾರಿಕೆ ಹಾಗೂ ಅನುಷ್ಠಾನ ಮತ್ತಿತರ ವಿವಿಧ ಚಟುವಟಿಕೆಗಳಲ್ಲಿ ಸಮುದಾಯಗಳ ಭಾಗವಹಿಸುವಿಕೆಯು ಅಟಲ್ ಭುಜಲ್ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ.

ಏಳು ರಾಜ್ಯಗಳ 78 ಜಿಲ್ಲೆಗಳಲ್ಲಿ ವ್ಯಾಪಿಸಿರುವ ಸುಮಾರು 8,350 ಗ್ರಾಮ ಪಂಚಾಯಿತಿಗಳು ಈ ಯೋಜನೆಯಿಂದ ಪ್ರಯೋಜನ ಪಡೆಯಲಿವೆ. ನೀರಿನ ನಿರ್ವಹಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಗ್ರಾಮ ಪಂಚಾಯಿತಿಗಳನ್ನು ಪ್ರೋತ್ಸಾಹಿಸುವ ಅವಕಾಶ ಕೂಡ ಈ ಯೋಜನೆಯಲ್ಲಿ ಇದೆ. ಈ ಯೋಜನೆಯ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಈ ಬಗ್ಗೆ ಬಹಿರಂಗಪಡಿಸಿದ್ದಾರೆ. ಅಟಲ್ ಜಲ್ ಯೋಜನೆಯಡಿ ಉತ್ತಮ ಕಾರ್ಯ ನಿರ್ವಹಿಸುವ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಹಣ ಹಂಚಿಕೆ ನೀಡಲಾಗುವುದು ಎಂದು ಕೂಡ ತಿಳಿಸಿದ್ದಾರೆ. ಇದು ನಿಜವಾಗಿಯೂ ಅಂತರ್ಜಲ ನಿರ್ವಹಣೆಯ ದೃಷ್ಟಿಯಲ್ಲಿ ಇಟ್ಟಿರುವ ದೃಢವಾದ ಮಾರ್ಗವಾಗಿದೆ ಎಂಬುದನ್ನು ಸೂಚಿಸುತ್ತದೆ.

ಹೀಗಿದ್ದರೂ ಈ ಯೋಜನೆಯು ಹೆಚ್ಚು ಫಲಿತಾಂಶ ನೀಡುವಂತೆ ಮಾಡಲು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಹಾಗೂ ಅವರ ಕೃಷಿ ಪದ್ಧತಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ತಿಳಿಸಬೇಕು. ಕಡಿಮೆ ನೀರನ್ನು ಬಳಸಿ ಬೆಳೆಯಬಹುದಾದ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವತ್ತ ಅವರನ್ನು ಹುರಿದುಂಬಿಸಬೇಕು. ಕಬ್ಬಿನಂತಹ ಬೆಳೆಗಳಿಗೆ ಹೆಚ್ಚಿನ ಪ್ರಮಾಣದ ನೀರು ಬೇಕು ಹಾಗೂ ಕಬ್ಬು ಬೆಳೆದ ಭೂಮಿ ಅಂತರ್ಜಲ ಕೋಷ್ಟಕದಲ್ಲಿ ಕುಸಿತ ಕಂಡಿದೆ ಎಂಬುದು ಗಮನಾರ್ಹ.

ನೀರು ವ್ಯರ್ಥ ಆಗುವುದನ್ನು ಕಡಿಮೆ ಮಾಡಲು ಹಳೆಯ ಕೃಷಿ ತಂತ್ರಗಳಿಗೆ ಬದಲಾವಣೆಯನ್ನು ತರುವ ಜರೂರತ್ತಿದೆ. ಕಡಿಮೆ‌ ಪ್ರಮಾಣದ ಅಂತರ್ಜಲ ಬಳಸಿ ಕೃಷಿ ಮಾಡುವಂತಹ ನೀರಿನ ವಿಷಯದ ಬಜೆಟ್ ಮಾಡಲು ರೈತರನ್ನು ಪ್ರೋತ್ಸಾಹಿಸಬೇಕು. ಜೊತೆಗೆ ಗ್ರಾಮಸ್ಥರೆಲ್ಲರೂ ಒಂದಾಗಿ ನೀರಿನ ಕ್ರಿಯಾ ಯೋಜನೆಯೊಂದನ್ನು ರೂಪಿಸಿ ಅದಕ್ಕೆ ಪೂರಕವಾಗಿ ನೀರಿನ ನಿಧಿಯನ್ನು ರಚಿಸಬೇಕು. ಇವೆಲ್ಲದರ ನಡುವೆ ದೇಶದಲ್ಲಿ ನೀರಿನ ಬಳಕೆ ಮತ್ತು ಅದರ ನಿರ್ವಹಣೆಯ ಬಗ್ಗೆ ಜನರು ತಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳಬೇಕು. ಈ ಮೂಲಕ ಒಣಗಿದ ಭೂಮಿಯನ್ನು ಹಸಿರು ಮೈದಾನವನ್ನಾಗಿ ಪರಿವರ್ತಿಸುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸನ್ನು ನನಸು ಮಾಡಬಹುದು. ಈ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದರೆ ಅದು ವಾಜಪೇಯಿ ಅವರ ದೂರದೃಷ್ಟಿಗೆ ನೀಡಿದ ಗೌರವ ಸಲ್ಲಿಸಿದಂತಾಗುತ್ತದೆ.

ಸ್ಕ್ರಿಪ್ಟ್: ಶಂಕರ್ ಕುಮಾರ್, ಪತ್ರಕರ್ತ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ