ಪರ್ವತಾರೋಹಣದ ನಿಯಮ ಬಿಗಿಗೊಳಿಸಿದ ನೇಪಾಳ್

ವಿಶ್ವದ ಅತಿ ಎತ್ತರದ ಶಿಖರವನ್ನು ಹೊಂದಿರುವ ನೇಪಾಳವು ತನ್ನ ದೇಶದ 8,848 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಪರ್ವತಾರೋಹಣದಿಂದ ಪ್ರತಿವರ್ಷ ಉತ್ತಮ ಆದಾಯವನ್ನು ಗಳಿಸುತ್ತಿದೆ. ಈ ನಡುವೆ ಪ್ರಸಕ್ತ ಸಾಲಿನ ಮೇ ತಿಂಗಳಲ್ಲಿ ಪರ್ವತಾರೋಹಣ ನಡೆಯುತ್ತಿದ್ದ ಸಂದರ್ಭದಲ್ಲಿ ಅತಿ ಹೆಚ್ಚು, ಅಂದರೆ 11 ಸಾವುಗಳು ಘಟಿಸಿವೆ. ಇಲ್ಲಿ 2015ರಲ್ಲಿ ಹೆಚ್ಚಿನ ತೀವ್ರತೆಯ ಭೂಕಂಪನ ಇಡೀ ಹಿಮಾಲಯನ್ ಪ್ರದೇಶವನ್ನು ಅಪ್ಪಳಿಸಿದಾಗ 22 ಸಾವುಗಳು ಸಂಭವಿಸಿದ್ದವು. ಏಪ್ರಿಲ್ 25ರಂದು ಹಿಮಪಾತವಾಗಿ ಹೆಚ್ಚಿನ ಸಂಖ್ಯೆಯ ಪರ್ವತಾರೋಹಿಗಳು ಸಾವನ್ನಪ್ಪಬೇಕಾಯಿತು. ಈ ವರ್ಷ 800ಕ್ಕೂ ಹೆಚ್ಚು ಪರ್ವತಾರೋಹಿಗಳು ಶಿಖರವನ್ನು ಏರಲು ಪ್ರಯತ್ನಿಸಿದರು, ಆ ಪೈಕಿ ಹೆಚ್ಚಿನ ಸಂಖ್ಯೆಯ ಜನರು 8,000 ಮೀಟರ್‌ಗಿಂತಲೂ ಮೇಲೇರಿ “ಸಾವಿನ ವಲಯ” ಎಂದು ಕರೆಯಲ್ಪಡುವ ಸರತಿಯಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದರು. ಪ್ರತಿಯೊಬ್ಬರೂ ಅಲ್ಪಾವಧಿಯ ಸೂಕ್ತ ಹವಾಮಾನ ವಿಂಡೋ ಮೂಲಕ ಶಿಖರವನ್ನು ತಲುಪಿಬಿಡುವ ಅಭಿಲಾಷೆ ಹೊಂದಿದ್ದರು. ಆದರೆ ಅಲ್ಲಿ ಎತ್ತರ ತಲುಪಿದ ಬಳಿಕ ಆಗುವ ಸಹಜ ಸಮಸ್ಯೆಗಳಿಂದಾಗಿ ಸಾವು ಕಾಣಬೇಕಾಗಯತ್ತಿತ್ತು. ನೇಪಾಳ ಸರ್ಕಾರದ ಪ್ರಕಾರ ಈ ವರ್ಷದ ಮೇ 22ರಂದು ಒಂದೇ ದಿನದಲ್ಲಿ 223 ಪರ್ವತಾರೋಹಿಗಳು ಶಿಖಿರವನ್ನು ತಲುಪಿದ್ದು, ಹಿಂದೆ 2016ರಲ್ಲಿ 204 ಮಂದಿ ಯಶಸ್ವಿಯಾಗಿ ಪರ್ವತಾರೋಹಣ ಮಾಡಿದ್ದ ದಾಖಲೆಯನ್ನು ಮುರಿದ್ದಾರೆ.

ಪ್ರತಿವರ್ಷ ಪರ್ವತಾರೋಹಣದ ಸಮಯದಲ್ಲಿ ಉಂಟಾಗುವ ಜನದಟ್ಟಣೆಯ ಬಗ್ಗೆ ನೇಪಾಳ ಸರ್ಕಾರವು ಚಿಂತಿಗೀಡಾಗಿದೆ. ಹಾಗೂ ಎತ್ತರದ ಶಿಖರವನ್ನು ಇಳಿಜಾರುಗಳ ಮೂಲಕ ಅಳೆಯಲು ಸ್ಪರ್ಧೆಗಿಳಿಯುತ್ತಿರುವ ಹೆಚ್ಚಿನ ಸಂಖ್ಯೆಯ ಉತ್ಸಾಹಿಗಳ ಸುರಕ್ಷತೆಗಾಗಿ ಕಠಿಣ ಮಾರ್ಗಸೂಚಿಗಳನ್ನು ಕೈಗೊಳ್ಳಲು ಆಲೋಚನೆ ನಡೆಸುತ್ತಿದೆ. ಈ ವರ್ಷ 381 ಪರವಾನಗಿಗಳನ್ನು ನೀಡಲಾಗಿದ್ದು, ಇದು ಎವರೆಸ್ಟ್ ಶಿಖರದಲ್ಲಿ ಭಾರೀ ಒತ್ತಡವನ್ನು ಸೃಷ್ಟಿಸಿದೆ.

ತಜ್ಞರ ಸಮಿತಿಯು ನೀಡಿದ ವರದಿಯ ಆಧಾರದ ಮೇಲೆ ಹೊಸ ನಿಯಮಗಳು ಹಾಗೂ ನಿಬಂಧನೆಗಳನ್ನು ರೂಪಿಸಲಾಗಿದೆ. ಇವನ್ನು ನೇಪಾಳ ಸರ್ಕಾರ 2020ರ ಪರ್ವತಾರೋಹಣ ಋತುವಿನಿಂದ ಅನ್ವಯವಾಗುವಂತೆ ಪರಿಚಯಿಸಲು ಯೋಜಿಸಿದೆ. ಈ‌ ಹೊಸ ನಿಯಮಗಳ ಪ್ರಕಾರ ಎಲ್ಲಾ ಪರ್ವತಾರೋಹಿಗಳು ಅಗತ್ಯ ಶುಲ್ಕ 11,000 ಡಾಲರ್ ಹಣವನ್ನು ಪಾವತಿಸಿರುವುದಕ್ಕೆ ಪುರಾವೆ ಸಲ್ಲಿಸಬೇಕು, ನೇಪಾಳದಲ್ಲಿ ಕನಿಷ್ಠ 6,500 ಮೀಟರ್ ಎತ್ತರದ ಶಿಖರವನ್ನು ಆರೋಹಣ ಮಾಡಿದ ಅನುಭವ ಹೊಂದಿರಬೇಕು ಹಾಗೂ ಉತ್ತಮ ಆರೋಗ್ಯ ಹೊಂದಿರುವ ಬಗ್ಗೆ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಎವರೆಸ್ಟ್ ಮೂಲ ಶಿಬಿರದಲ್ಲಿ ಆರೋಗ್ಯ ತಪಾಸಣೆಗೆ ಒಳಪಟ್ಟಿರುವುದನ್ನು ನೇಪಾಳ ಸರ್ಕಾರ ಪರಿಗಣಿಸಲಿದೆ. ಎಲ್ಲಾ ಆರೋಹಿಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಜೀವ ವಿಮೆಯ ಜೊತೆಗೆ ಹುಡುಕಾಟ, ಪರಿಶೋಧ ಕಾರ್ಯ ಹಾಗೂ ಚಿಕಿತ್ಸೆಗಳಿಗೂ ವಿಮೆಯನ್ನು ಮಾಡಿಸಬೇಕಾಗುತ್ತದೆ. ಒಂದು ವೇಳೆ ಯಾವುದಾದರೂ ಪರ್ವತಾರೋಹಿ ಎತ್ತರದಲ್ಲಿ ಸಿಲುಕಿಕೊಂಡಿದ್ದಾನೆ ಎಂದರೆ ಯಾತ್ರೆಯ ಮಾರ್ಗದರ್ಶಕರು ಆ ಎತ್ತರಕ್ಕೆ ಏರಲು ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು.

ಎವರೆಸ್ಟ್ ಶಿಖರಕ್ಕೆ ಏರುವವರು ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಪಾಸ್‌ಪೋರ್ಟ್, ಸೀಮಿತ ಜೀವನಚರಿತ್ರೆಯ ಡೆಟಾ ಹಾಗೂ ಆರೋಗ್ಯ ಪ್ರಮಾಣಪತ್ರದ ನಕಲನ್ನು ಸಲ್ಲಿಸುವುದು ಕಡ್ಡಾಯ. ಯಾತ್ರೆಯನ್ನು ಆಯೋಜಿಸುವ ಕಂಪನಿಗಳು ಎವರೆಸ್ಟ್ ಪರ್ವತದ ಯಾತ್ರೆಗೆ ಕನಿಷ್ಠ 35,000 ಡಾಲರ್ ಶುಲ್ಕವನ್ನು ಹಾಗೂ 8,000 ಮೀಟರ್ ಗಿಂತಲೂ ಎತ್ತರವಿರುವ ಇತರೆ ಪರ್ವತ ಶಿಖರಗಳಿಗೆ ಹೆಚ್ಚುವರಿಯಾಗಿ 20,000 ಡಾಲರ್ ಶುಲ್ಕವನ್ನು ಪಾವತಿಸಬೇಕು ಎಂದು ಸಮಿತಿ ಸೂಚಿಸಿದೆ. ಎವರೆಸ್ಟ್ ಶಿಖರಾರೋಹಣಕ್ಕೆ ನೀಡಲಾಗುತ್ತಿರುವ ಅನುಮತಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ನೇಪಾಳ ಸರ್ಕಾರವು ಉದ್ದೇಶಿಸಿದೆ. ಆದರೆ ಹಾಗೆ ಮಾಡುವುದರಿಂದ ಉಂಟಾಗಬಹುದಾದ ನಷ್ಟದ ಬಗ್ಗೆಯೂ ಯೋಚನೆ ಮಾಡುತ್ತಿದೆ.

1953ರಲ್ಲಿ ಮೊದಲ ಬಾರಿಗೆ ಎಡ್ಮಂಡ್ ಹಿಲರಿ ಮತ್ತು ಟೆನ್ಜಿಂಗ್ ನಾರ್ಗೆ ಅವರು ಮೌಂಟ್ ಎವರೆಸ್ಟ್ ಅನ್ನು ಯಶಸ್ವಿಯಾಗಿ ಏರಿದ ಬಳಿಕ ಎವರೆಸ್ಟ್ ಪರ್ವತಕ್ಕೆ ಧಾವಿಸುವವರ ಸಂಖ್ಯೆ ಹೆಚ್ಚುತ್ತಿದೆ. ವಿಶೇಷವಾಗಿ 1990ರ ನಂತರ. ಪರ್ವತಾರೋಹಿಗಳು ಇಲ್ಲಿ ಮಾನವ ತ್ಯಾಜ್ಯ, ಆಹಾರ ತ್ಯಾಜ್ಯ, ಹರಿದ ಡೇರೆಗಳು, ಹಗ್ಗಗಳು, ಬಳಸಿದ ಆಮ್ಲಜನಕ ಸಿಲಿಂಡರ್‌ಗಳು, ಏಣಿಗಳು, ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಕ್ಯಾನ್‌ಗಳನ್ನು ಒಳಗೊಂಡ ಕಸದ ರಾಶಿಯನ್ನು ಸೃಷ್ಟಿಸಿದ್ದಾರೆ. ನೇಪಾಳ ಸರ್ಕಾರ ಈ ವರ್ಷ ಎವರೆಸ್ಟ್ ಶಿಖರದಲ್ಲಿ ಹುಡುಕಾಟ ನಡೆಸಿ 11 ಟನ್ ಕಸ ಮತ್ತು ನಾಲ್ಕು ಮೃತ ದೇಹಗಳನ್ನು ಹೊರತೆಗೆದಿದೆ.

ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹಿಮಪರ್ವತಗಳು ಹೆಚ್ಚಿನ ಪ್ರಮಾಣದಲ್ಲಿ ಕರಗುತ್ತಿರುವುದರಿಂದ ಹಿಮಪಾತಗಳು, ಭೂಕುಸಿತಗಳು ಹಾಗೂ ವಿಶ್ವದ ವಿವಿಧ ಭಾಗಗಳಲ್ಲಿ ಪ್ರವಾಹ ಉಂಟಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಸಮುದಾಯವು ಆತಂಕಕ್ಕೊಳಗಾಗಿದೆ‌. ಅಧ್ಯಯನವೊಂದರ ಪ್ರಕಾರ 'ಭಾರತ, ನೇಪಾಳ ಹಾಗೂ ಬಾಂಗ್ಲಾದೇಶ ಸೇರಿದಂತೆ ಅಫ್ಘಾನಿಸ್ತಾನದಿಂದ ಮ್ಯಾನ್ಮಾರ್‌ವರೆಗೆ ವ್ಯಾಪಿಸಿರುವ ಈ ಪ್ರದೇಶದ ಹಿಮಾಲಯನ್ ಹಿಮನದಿಗಳಲ್ಲಿ ಕನಿಷ್ಠ ಮೂರನೇ ಒಂದು ಭಾಗದಾದರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಕರಗಲಿದೆ' ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಎವರೆಸ್ಟ್ ಶಿಖರವನ್ನು ಎರಲು ಪ್ರಯತ್ನಿಸುತ್ತಿರುವವರ ಸಂಖ್ಯೆಯನ್ನು ನಿರ್ಬಂಧಿಸುವ ನೇಪಾಳ ಸರ್ಕಾರದ ಕ್ರಮವನ್ನು ಭಾರತ ಸ್ವಾಗತಿಸಿದೆ. ನವದೆಹಲಿ ಸ್ವಾಭಾವಿಕವಾಗಿ ಈ ಬೆಳವಣಿಗೆಗಳ ಬಗ್ಗೆ ಚಿಂತಾಕ್ರಾಂತವಾಗಿದ್ದು ಹಿಮಾಲಯನ್ ಪರಿಸರ ವಿಜ್ಞಾನದ ಅವನತಿಯನ್ನು ಪರೀಕ್ಷಿಸಲು ಸ್ವತಃ ಮುಂದಾಗಿದೆ. ಇದೇ ಹಿನ್ನೆಲೆಯಲ್ಲಿ ಹವಾಮಾನ ಬದಲಾವಣೆಯ ಕುರಿತಾದ ರಾಷ್ಟ್ರೀಯ ಕ್ರಿಯಾ ಯೋಜನೆ ಹಾಗೂ ಹಿಮಾಲಯನ್ ಪರಿಸರ ವ್ಯವಸ್ಥೆಯನ್ನು ಸುಸ್ಥಿರಗೊಳಿಸುವ ರಾಷ್ಟ್ರೀಯ ಮಿಷನ್ ಅನ್ನು ಜಾರಿಗೆ ತಂದಿದೆ. ಸಿಕ್ಕಿಂ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಉತ್ತರಾಖಂಡ ಸೇರಿದಂತೆ 12 ಪರ್ವತ ರಾಜ್ಯಗಳು ಕಳೆದ ವರ್ಷ 1,500ಕ್ಕೂ ಹೆಚ್ಚು ಸ್ಥಳಗಳಲ್ಲಿ ‘ಹಿಮಾಲಯನ್ ಕ್ಲೀನಪ್’ ಕಾರ್ಯಕ್ರಮವನ್ನು ಆಯೋಜಿಸಿದ್ದವು.

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ