ಗಲ್ಫ್ ನಲ್ಲಿ ಏರಿದ ಪ್ರತಿಭಟನೆಯ ಬಿಸಿ
ಕಳೆದ ತಿಂಗಳು, ಇರಾನಿನ ಸರ್ಕಾರವು ತನ್ನ ಬಡ ನಾಗರಿಕರಿಗೆ ಸಹಾಯ ಮಾಡುವ ಸಲುವಾಗಿ ಹೆಚ್ಚುವರಿ ಹಣ ಉಳತಾಯ ಮಾಡಲು ಪೆಟ್ರೋಲ್ ಅನ್ನು ಪಡಿತರಗೊಳಿಸುವುದಾಗಿ ಘೋಷಿಸಿತ್ತು. ತೈಲ-ಶ್ರೀಮಂತ ರಾಷ್ಟ್ರದ ಈ ಹಠಾತ್ ಘೋಷಣೆಯು ತೈಲ ಬೆಲೆಗಳಲ್ಲಿ ಗಣನೀಯ ಹೆಚ್ಚಳಕ್ಕೆ ಕಾರಣವಾಯಿತು ಮತ್ತು ಜನರ ಪ್ರತಿಭಟನೆಗೆ ಕಾರಣವಾಯಿತು. ಅದು ಅನೇಕ ನಗರಗಳನ್ನು ತ್ವರಿತವಾಗಿ ಆವರಿಸಿತು ಮತ್ತು ರಾಜಕೀಯ ಅಶಾಂತಿಯ ಆಕಾರವನ್ನು ಪಡೆದುಕೊಂಡಿತು. ಅಲ್ಲದೆ ಆಡಳಿತದ ಸ್ಥಿರತೆಗೆ ತೀವ್ರ ಸವಾಲನ್ನು ಒಡ್ಡಿತು .
ಈ ಅಶಾಂತಿಗಳಿಗೆ ಗಡಿಪಾರಿಗೆ ಒಳಗಾಗಿದ್ದ ವಿರೋಧ ಗುಂಪುಗಳು ಕಾರಣ ಎಂದು ಇರಾನಿನ ಅಧಿಕಾರಿಗಳು ದೂಷಿಸಿದರು. ಸರ್ಕಾರ ವಿರೋಧಿ ಪ್ರದರ್ಶನಗಳು ಮತ್ತಷ್ಟು ಹರಡುವುದನ್ನು ತಡೆಯಲು ಅವರು ಅಂತರ್ಜಾಲವನ್ನು ಸ್ಥಗಿತಗೊಳಿಸಿದರು. ಇರಾನಿನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಯ ಮುಖ್ಯ ಕಮಾಂಡರ್ ಪ್ರಕಾರ, ಈ ಅಶಾಂತಿಗಳ ಮೂಲಕ ಇರಾನ್‌ನ ಶತ್ರುಗಳ ಗುರಿ ಇಸ್ಲಾಮಿಕ್ ಗಣರಾಜ್ಯದ ಅಸ್ತಿತ್ವಕ್ಕೆ ಅಪಾಯವನ್ನುಂಟು ಮಾಡುವುದು ಆಗಿದೆ.
ಈ ಅಶಾಂತಿಗಳಲ್ಲಿ ಕೊಲ್ಲಲ್ಪಟ್ಟ ಜನರ ಬಗ್ಗೆ ಇರಾನ್ ಯಾವುದೇ ಅಧಿಕೃತ ಅಂಕಿಅಂಶಗಳನ್ನು ಬಿಡುಗಡೆ ಮಾಡದಿದ್ದರೂ, ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯು ಈ ಪ್ರತಿಭಟನೆಯಲ್ಲಿ ಕನಿಷ್ಠ 208 ಜನರು ಸಾವಿಗೀಡಾಗಿದ್ದಾರೆ ಎಂದು ಹೇಳಿದೆ. ವರದಿಯ ಪ್ರಕಾರ, ಇರಾನ್‌ನಲ್ಲಿ ಪ್ರಸ್ತುತ ಅಶಾಂತಿಯ ಅವಧಿಯಲ್ಲಿ ಸುಮಾರು 2,000 ಜನರು ಗಾಯಗೊಂಡಿದ್ದಾರೆ ಮತ್ತು ಸುಮಾರು 7,000 ಜನರನ್ನು ಇರಾನಿನ ಭದ್ರತಾ ಪಡೆಗಳು ಬಂಧಿಸಿವೆ.
ಯಾವುದೇ ಅಂಕಿ ಅಂಶವನ್ನು ನೀಡದೆ, ಇರಾನಿನ ಮಾಧ್ಯಮಗಳು ಭದ್ರತಾ ಪಡೆಗಳಿಂದ ಕೆಲವು ಪ್ರತಿಭಟನಾಕಾರರನ್ನು ಹತ್ಯೆ ಮಾಡಿರುವುದಾಗಿ ಹೇಳಿವೆ. ಅವರನ್ನು ‘ಸಶಸ್ತ್ರ ಭಯೋತ್ಪಾದಕರು ಎಂದೂ ಹೇಳಿದೆ. ಹಾಗೆಯೇ ಅಶಾಂತಿಯನ್ನು ಹತ್ತಿಕ್ಕಲು ಭದ್ರತಾ ಪಡೆಗಳ ತಂತ್ರಗಳನ್ನೂ ಶ್ಲಾಘಿಸಿವೆ. ಈ ಅಶಾಂತಿಗಳ ಸಂದರ್ಭದಲ್ಲಿ ಸಿಐಎಗೆ ಸಂಬಂಧ ಹೊಂದಿರುವ ಕನಿಷ್ಠ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಇರಾನಿನ ಗುಪ್ತಚರ ಸಚಿವಾಲಯ ಹೇಳಿದೆ. ಸುಮಾರು ಎರಡು ವಾರಗಳ ಹಿಂಸಾತ್ಮಕ ಘರ್ಷಣೆಗಳ ನಂತರ, ದೂರದರ್ಶನದ ಭಾಷಣದಲ್ಲಿ, ಇರಾನಿನ ಅಧ್ಯಕ್ಷ ಹಸನ್ ರೂಹಾನಿ ಅವರು ಬಂಧಿಸಲಾಗಿರುವ ನಿರಾಯುಧ ಅಥವಾ ಮುಗ್ಧ ಜನರನ್ನು ಬಿಡುಗಡೆ ಮಾಡುವಂತೆ ಕರೆ ನೀಡಿದರು.
ಇರಾನ್ ಮತ್ತು ಆರು ವಿಶ್ವ ಶಕ್ತಿಗಳು ಒಪ್ಪಿದ ಪರಮಾಣು ಒಪ್ಪಂದದಿಂದ ಕಳೆದ ವರ್ಷ ಹಿಂದೆ ಸರಿದ ಇರಾನ್ ಅಮೆರಿಕದ ನಿರ್ಬಂಧಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಇಲ್ಲಿ ಅಶಾಂತಿ ಸಂಭವಿಸಿದೆ. ಅಮೆರಿಕದ ನಿರ್ಬಂಧಗಳಿಂದಾಗಿ, ಇರಾನ್ ತನ್ನ ತೈಲ ಮತ್ತು ಅನಿಲವನ್ನು ರಫ್ತು ಮಾಡುವಲ್ಲಿ ತೀವ್ರ ನಿರ್ಬಂಧಗಳನ್ನು ಎದುರಿಸುತ್ತಿದೆ ಮತ್ತು ತೈಲ ಆಧಾರಿತ ಆರ್ಥಿಕತೆಯಲ್ಲಿ ಪೆಟ್ರೋ-ಡಾಲರ್‌ಗಳನ್ನು ಭರಿಸುವುದನ್ನು ಪರಿಣಾಮಕಾರಿಯಾಗಿ ತಪ್ಪಿಸಿದೆ. ಈ ಸನ್ನಿವೇಶದಲ್ಲಿ ನಿರ್ಬಂಧಗಳು ಈಗ ಇರಾನಿನ ಜನರ ದೈನಂದಿನ ಜೀವನಕ್ಕೆ ಹಾನಿಯುಂಟು ಮಾಡುತ್ತಿವೆ. ಜನರು ಇದರಿಂದ ಆರ್ಥಿಕ ಕುಂದುಕೊರತೆಗಳಿಗೆ ಗುರಿಯಾಗುತ್ತಾರೆ. ಅದೇ ಕಾರಣದಿಂದ, ಇರಾನಿನ ಜನರ ಆರ್ಥಿಕ ಸಂಕಷ್ಟಗಳ ಸಂಪೂರ್ಣ ಆಪಾದನೆಯನ್ನು ತನ್ನ ವಿದೇಶಿ ವಿರೋಧಿಗಳ ಮೇಲೆ ಮಾಡಿರುವುದು ಇರಾನಿನ ಆಡಳಿತಕ್ಕೂ ಸೂಕ್ತ ಎನಿಸಿದೆ.
ತೈಲ-ಬೆಲೆ ಏರಿಕೆಯಿಂದ ಪ್ರಚೋದಿಸಲ್ಪಟ್ಟಿದ್ದರೂ, ಇರಾನ್‌ನಲ್ಲಿನ ಪ್ರಸ್ತುತ ಪ್ರತಿಭಟನೆಗಳು ಇರಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ದೀರ್ಘಕಾಲದ ಬಿಕ್ಕಟ್ಟಿನ ಪರಿಣಾಮಗಳಾಗಿವೆ. ಯುಎಸ್ ಮೊದಲು ನಿರ್ಬಂಧಗಳನ್ನು ತೆಗೆದುಹಾಕಿದರೆ ಮಾತುಕತೆ ಮೂಲಕ ಪ್ರಸ್ತುತ ಬಿಕ್ಕಟ್ಟನ್ನು ಕೊನೆಗೊಳಿಸಲು ಸಿದ್ಧವಾಗಿದೆ ಎಂದು ಇರಾನ್ ಸಮರ್ಥಿಸಿಕೊಂಡಿದೆ. ಆದಾಗ್ಯೂ, ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಹಿಂತೆಗೆದುಕೊಂಡರೆ , ಕ್ಷಿಪಣಿ ಕಾರ್ಯಕ್ರಮವನ್ನು ಕೊನೆಗೊಳಿಸಿದರೆ ಮಾತ್ರ ನಿರ್ಬಂಧಗಳನ್ನು ತೆಗೆದುಹಾಕಬಹುದು ಎಂದು ಅಮೆರಿಕ ಹೇಳುತ್ತಿದೆ. ಈ ಪರಿಸ್ಥಿತಿಯು ಇರಾನ್ ಮತ್ತು ಯುಎಸ್ ನಡುವೆ ಪರಿಹರಿಸಲು ಕಷ್ಟಕರವಾದ ರೀತಿಯಲ್ಲಿ ಗೊಂದಲವನ್ನು ಸೃಷ್ಟಿಸಿದೆ ಮತ್ತು ಪರ್ಷಿಯನ್ ಕೊಲ್ಲಿ ಪ್ರದೇಶದ ಶಾಂತಿ ಮತ್ತು ಸ್ಥಿರತೆಗೆ ಹಾನಿಕಾರಕವಾಗಿದೆ.
ಆದಾಗ್ಯೂ, ಅಸ್ಥಿರ ಇರಾನ್ ಯಾರಿಗೂ ಹಿತಕರವಲ್ಲ. ಜನಾಂಗೀಯ ಅಲ್ಪಸಂಖ್ಯಾತರು ಹೆಚ್ಚಿರುವ ಇರಾನ್ ಪ್ರಾಂತ್ಯಗಳಾದ ಖುಝೆಸ್ತಾನ್, ಸಿಸ್ತಾನ್ ಮತ್ತು ಬಲೂಚಿಸ್ತಾನ್ , ಕುರ್ದಿಸ್ತಾನಗಳಲ್ಲಿ ಪ್ರತಿಭಟನಾಕಾರರನ್ನು ನಿಗ್ರಹಿಸುವುದು ಹೆಚ್ಚು ಹಿಂಸಾಚಾರಕ್ಕೆ ಕಾರಣವಾಗಬಹುದು ಎಂಬ ಆತಂಕವಿದೆ. ತನ್ನ ಅಧಿಕಾರ ಪ್ರದರ್ಶಿಸುವ ಸಲುವಾಗಿ, ಇರಾನಿನ ಆಡಳಿತವು ದೇಶದ ಆಂತರಿಕ ಮತ್ತು ಬಾಹ್ಯ ವಿರೋಧಿಗಳಿಗೆ ಕಠಿಣ ಸಂದೇಶಗಳನ್ನು ಕಳುಹಿಸಲು ಮತ್ತು ಇಂತಹ ಪ್ರತಿಭಟನೆಗಳನ್ನು ಹತ್ತಿಕ್ಕಲು ದಮನಕಾರಿ ಶಕ್ತಿಯನ್ನು ಬಳಸಿಕೊಳ್ಳಬಹುದು ಎಂಬ ಆತಂಕವೂ ಇದೆ.
ಗಲ್ಫ್ ಪ್ರದೇಶದಲ್ಲಿ ತೊಂದರೆಗೊಳಗಾದ ಇರಾನ್ ಅಥವಾ ಸಂಬಂಧಿತ ಪ್ರಕ್ಷುಬ್ಧತೆಯು ಭಾರತದ ಹಿತಾಸಕ್ತಿಗಳಲ್ಲಿಲ್ಲ. ಸಾಂಪ್ರದಾಯಿಕವಾಗಿ ತೈಲ ರಫ್ತುದಾರರಾಗಿರುವ ಇರಾನ್ ಸೇರಿದಂತೆ ಕೊಲ್ಲಿ ರಾಷ್ಟ್ರಗಳೊಂದಿಗೆ ಭಾರತ ಉತ್ತಮ ಸಂಬಂಧವನ್ನು ಹೊಂದಿದೆ. ನವದೆಹಲಿ ಇರಾನ್‌ನ ಚಾಬಹಾರ್ ಬಂದರನ್ನು ಸಹ ಅಭಿವೃದ್ಧಿಪಡಿಸುತ್ತಿದೆ ಮತ್ತು ಈ ಪ್ರದೇಶದಲ್ಲಿನ ಮತ್ತಷ್ಟು ಅಡಚಣೆಗಳು ಅಂತಹ ಹೂಡಿಕೆಗಳಿಗೆ ಪ್ರತಿರೋಧಕವಾಗಬಹುದು.
ಲೇಖನ : ಡಾ. ಆಸಿಫ್ ಶೂಜಾ, ಇರಾನ್ ಕುರಿತ ವಿಶ‍್ಲೇಷಕರು
Comments
Post a Comment