ಭಾರತದ ಪ್ರಾದೇಶಿಕ ಆರ್ಥಿಕ ಬೆಳವಣಿಗೆ ತಂತ್ರ: 2020ಕ್ಕೆ ಹಾಗೂ ನಂತರ

ಭಾರತದ ರಾಜತಾಂತ್ರಿಕ ನಡೆಗಳಲ್ಲಿ ನಿಖರವಾಗಿ ವ್ಯಾಖ್ಯಾನಿಸಲ್ಪಟ್ಟ ಹಾಗೂ ಸೂಕ್ತವಾಗಿ ರೂಪಿಸಲಾಗಿರುವ ಪ್ರಾದೇಶಿಕ ಆರ್ಥಿಕ ಒಪ್ಪಂದಗಳ ಕಾರ್ಯತಂತ್ರದ ಆರಂಭಿಕ ಬಾಹ್ಯರೇಖೆಗಳು ಬಹಳ ಸ್ಪಷ್ಟವಾಗಿ ಗೋಚರಿಸುತ್ತವೆ. ಏಕೆಂದರೆ 2020ರ ಕ್ಯಾಲೆಂಡರ್ ಆರಂಭವಾಗುವುದನ್ನು ನಾವು ಹೊಸ ರೀತಿಯಲ್ಲಿ ಕಾಣಬಹುದಾಗಿದೆ. ಮುಕ್ತ ವ್ಯಾಪಾರ ಒಪ್ಪಂದಗಳು (ಎಫ್‌ಟಿಎ) ಸ್ವಲ್ಪಮಟ್ಟಿಗೆ ಅನ್ಯಾಯವೇ ಆಗಿದ್ದರೂ ಸಹ ಪ್ರಾದೇಶಿಕವಾಗಿ ನಾವು ಪ್ರಸ್ತುತವಾಗಲು ಇತ್ತೀಚಿನವರೆಗೂ ಅದನ್ನು ಒಂದು ಪ್ರಮುಖ ಸಾಧನವನ್ನಾಗಿಯೇ ನೋಡಲಾಗಿತ್ತು. ಎಲ್ಲಾ ರಾಷ್ಟ್ರಗಳ ಜಾಗತಿಕ ವೇದಿಕೆಯಲ್ಲಿ ಧ್ವನಿ ಎತ್ತಲು ಅವಕಾಶ ಆಗಬಹುದೇ ಎಂದು ಖಚಿತಪಡಿಸಿಕೊಂಡು ಭಾರತವು ಹಾಬ್ಸನ್ ಆಯ್ಕೆ ಮಾಡಿಕೊಂಡಿದೆ ಎಂದು ಗ್ರಹಿಸಲಾಗಿತ್ತು. ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಿಂದ (ಆರ್‌ಸಿಇಪಿ) ಭಾರತವು ಹೊರಬಂದ ಕೂಡಲೆ ಈ ಆಲೋಚನೆಯು ಗಮನಾರ್ಹವಾಗಿ ಬದಲಾಯಿತು. ಈ ನಡೆ ನಮ್ಮ ವಿದೇಶಿ ಆರ್ಥಿಕ ನೀತಿಯಲ್ಲಿನ ಕಾರ್ಯತಂತ್ರದ ಬದಲಾವಣೆಗಳನ್ನು ತಿಳಿಸಿತು. ಅಲ್ಲದೆ ಪ್ರಾದೇಶಿಕವಾಗಿ ಸಂಬಂಧಿತ ಕಾರ್ಯತಂತ್ರಗಳ ಅನುಸರಣೆಯು ಹಿಂದೆ ಆದ ವ್ಯಾಪಾರ ಒಪ್ಪಂದಗಳಿಗೆ ಒಂದು ನಿರ್ದಿಷ್ಟ ಮಟ್ಟದ ಸಹಿಷ್ಣುತೆಯ ಅಗತ್ಯವಿರುತ್ತದೆ ಎಂಬ ಚಿಂತನೆಗೆ ಹಿನ್ನಡೆ ಉಂಟುಮಾಡಿತು.



ಬ್ಯಾಂಕಾಕ್ ನಲ್ಲಿ ನಡೆದ ಶೃಂಗಸಭೆ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊರತುಪಡಿಸಿ ಬೇರೆ ಯಾರೂ ಆರ್‌ಸಿಇಪಿಯಿಂದ ಹಿಂದೆ ಸರಿಯುವ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಈ ಮೂಲಕ ಭಾರತ ರವಾನಿಸಿದ ಸಂದೇಶವು ಗಟ್ಟಿಯಾಗಿತ್ತು ಮತ್ತು ಸ್ಪಷ್ಟವಾಗಿತ್ತು. ನಮ್ಮ ರೈತರ, ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳ (ಎಂಎಸ್‌ಎಂಇ) ಹಿತಾಸಕ್ತಿಗಳಿಗೆ ಧಕ್ಕೆ ಆಗದಂತಹ ಪ್ರಮುಖ ಬೇಡಿಕೆಗಳನ್ನು ಈಡೇರಿಸದಿದ್ದರೆ ಅಂತಹ ಯಾವುದೇ ಗುಂಪುಗಳಿಂದ ಭಾರತ ಹಿಂದೆ ಸರಿಯಲಿದೆ. ಹಾಗೂ ಅವುಗಳ ಪರ ವಕಾಲತ್ತು ವಹಿಸಲು ಸಾಧ್ಯವಿಲ್ಲ ಎಂದು ಹೇಳಿತು. ನಮ್ಮ ಒಪ್ಪಂದಗಳು ಆರ್ಥಿಕ ರಾಜತಾಂತ್ರಿಕತೆ ಹಾಗೂ ಪ್ರಮುಖ ರಾಷ್ಟ್ರೀಯ ಹಿತಾಸಕ್ತಿಗಳ ನಡುವಿನ ಹಿತಾಸಕ್ತಿಗಳ ಸಮತೋಲನಕ್ಕೆ ಪೂರಕವಾಗಿರುತ್ತವೆ. ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾದ ಭಾರತವು ಮುಂದಿನ ಕೆಲವು ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಹಾದಿಯಲ್ಲಿದೆ. ಅಲ್ಲದೆ ಈ ಆರ್ಥಿಕ ಬೆಳವಣಿಗೆಯನ್ನು ನಮ್ಮ ದೇಶೀಯ ಪ್ರಮುಖ ಕ್ಷೇತ್ರಗಳ ಹಿತಾಸಕ್ತಿಗಳಿಗೆ ಅಡ್ಡಿ ಉಂಟುಮಾಡದಂತಹ ತಂತ್ರಗಳ ಆಧಾರದ ಮೇಲೆ ಸಾಧಿಸುವ ಉದ್ದೇಶವನ್ನು ಮಾತ್ರವೇ ಹೊಂದಲಾಗುವುದು.



ಭಾರತದ ಹೆಚ್ಚಿನ ವ್ಯಾಪಾರ ವ್ಯವಹಾರಗಳು ಅದರ ಪೂರ್ವ ಏಷ್ಯಾದ ನೆರೆಹೊರೆಯ ದೇಶಗಳೊಂದಿಗೆ ಇವೆ- ಇದು ನಾವು ಅಳವಡಿಸಿಕೊಂಡಿರುವ ‘ಲುಕ್ ಈಸ್ಟ್ ಅಂಡ್ ದೇರ್ ಆಫ್ಟರ್ ಆಕ್ಟ್ ಈಸ್ಟ್’ ಎಂಬ ನೀತಿಗಳ ತರ್ಕದ ಫಲಿತಾಂಶವಾಗಿದೆ. ಈ ಒಪ್ಪಂದಗಳಿಂದಾಗಿ ಭಾರೀ ಪ್ರಮಾಣದ ವ್ಯಾಪಾರ ಕೊರತೆ ಉಂಟಾಗುತ್ತಿದ್ದು ಭಾರತೀಯ ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಅಲ್ಲದೆ ಎಫ್‌ಟಿಎ ಬಳಕೆಯಲ್ಲಿ ಕಡಿಮೆ ದರಗಳನ್ನು ನಿಗದಿ ಮಾಡಲಾಗಿದೆ. ವಿದೇಶಿ ಕಾರ್ಯತಂತ್ರ ಮತ್ತು ಆರ್ಥಿಕ ನೀತಿಗಳ ವಿರೋಧಾತ್ಮಕ ಬೇಡಿಕೆಗಳ ನಡುವೆ ಹಾಗೂ ಪ್ರಮುಖ ದೇಶೀಯ ಹಿತಾಸಕ್ತಿಗಳನ್ನು ಮತ್ತು ಕ್ಷೇತ್ರಗಳನ್ನು ಗುರುತಿಸಿಕೊಳ್ಳುವ ವಿಷಯದಲ್ಲಿ ಆಗಾಗ್ಗೆ ಸಮಸ್ಯೆಯಾಗುತ್ತಿದೆ. ರಾಜತಾಂತ್ರಿಕರು ಖಂಡಿತವಾಗಿಯೂ ಜನಾದೇಶಕ್ಕೆ ಪೂರಕವಾದ ನಿಖರವಾದ ಮತ್ತು ಸ್ಪಷ್ಟವಾದ ನೀತಿ ನಿರ್ದೇಶನಗಳನ್ನು ಬಯಸುತ್ತಾರೆ. ಹಾಗಾಗಿ ಸರ್ಕಾರ ಮುಂದಿನ ಹಾದಿಯನ್ನು ಸ್ಪಷ್ಟವಾಗಿ ವಿವರಿಸಿದೆ. ಭಾರತವು ತನ್ನ ವ್ಯಾಪಾರ ಒಪ್ಪಂದಗಳ ಕುರಿತು ಮಾತುಕತೆ ನಡೆಸುವ ವಿಷಯುದಲ್ಲಿ ರಕ್ಷಣಾತ್ಮಕವಾಗಿರುವುದಿಲ್ಲ ಅಥವಾ ತನ್ನ ಪ್ರಮುಖ ದೇಶೀಯ ಹಿತಾಸಕ್ತಿಗಳನ್ನು ರಕ್ಷಿಸುವ ವಿಷಯದಲ್ಲಿ ಕ್ಷಮೆಯಾಚಿಸುವುದಿಲ್ಲ. ಪರಸ್ಪರ ಲಾಭದಾಯಕ ಆಗುವಂತಹ ಒಪ್ಪಂದಗಳನ್ನು ಮಾಡಿಕೊಳ್ಳುವ ಉದ್ದೇಶದಿಂದ ಸಮಾನ ಮನಸ್ಕರೊಂದಿಗೆ ಮಾತ್ರ ಮಾತುಕತೆ ನಡೆಸಲಿದೆ ಎಂದು ಹೇಳಿದೆ.



ಭಾರತವು ರಕ್ಷಣಾತ್ಮಕ ನೀತಿಗಳಲ್ಲಿನ ಭೀತಿಗಳನ್ನು ನಿವಾರಿಸಿಕೊಳ್ಳುವ, ಅಸ್ತಿತ್ವದಲ್ಲಿರುವ ಒಪ್ಪಂದಗಳನ್ನು ಮರುಪರಿಶೀಲಿಸುವ, ಮರು ಮಾತುಕತೆ ನಡೆಸುವ, ಇಕ್ವಿಟಿ ಮತ್ತು ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು ಹೊಸ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳತ್ತ ಗಮನ ಹರಿಸುವ ಉದ್ದೇಶವನ್ನು ಹೊಂದಿದೆ. ದಕ್ಷಿಣ ಕೊರಿಯಾ, ಜಪಾನ್ ಮತ್ತು ಆಸಿಯಾನ್‌ ದೇಶಗಳು ಎಫ್‌ಟಿಎಗಳ ಜೊತೆ ಮಾಡಿಕೊಂಡಿರುವ ಷರತ್ತುಗಳನ್ನು ಪರಿಶೀಲಿಸಲು ಮುಂದಾಗಿವೆ. ಭಾರತವು ಸಹ ಇದೇ ತಂತ್ರವನ್ನು ಬಳಸಲು ನಿರ್ಧರಿಸಿದೆ. ಇದರಿಂದ ರೂಲ್ಸ್ ಆಫ್ ಒರಿಜಿನ್ ಮತ್ತು ಸುಂಕ ರಹಿತ ಅಡೆತಡೆಗಳಂತಹ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ. ವಿಶಾಲ ಆಧಾರಿತ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದ (ಬಿಟಾ) ಕುರಿತು ಸ್ಥಗಿತಗೊಂಡ ಮಾತುಕತೆಗಳನ್ನು ಪುನರಾರಂಭಿಸಲು ಭಾರತವು ಯುರೋಪಿಯನ್ ಯೂನಿಯನ್ (ಇಯು) ಜೊತೆ ಚರ್ಚಿಸುತ್ತಿದೆ. ಭಾರತವು ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕಾಗಿ ಯುಎಸ್ ಅನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಎರಡೂ ದೇಶಗಳು ತೆರಿಗೆ ಸ್ವರೂಪದಲ್ಲಿ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳನ್ನು ಒಳಗೊಂಡಂತಹ ಸಂಕೀರ್ಣ ಸಮಸ್ಯೆಗಳು ಅಡಕವಾಗಿರುವ ಕೃಷಿ ಮಾರುಕಟ್ಟೆ ಪ್ರವೇಶ ವಿಷಯವನ್ನು ಹೊಸ ಬಗೆಯಲ್ಲಿ ನೋಡಲು ಸಕಾರಾತ್ಮಕವಾಗಿ ವ್ಯವಹರಿಸುತ್ತಿವೆ. ಬ್ರೆಕ್ಸಿಟ್ ಬಳಿಕ ಯುಕೆ ಜೊತೆ ಕೂಡ ಸ್ವತಂತ್ರ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಭಾರತ ಆಲೋಚನೆ ಮಾಡುತ್ತಿದೆ. ಇಸ್ರೇಲ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಯುರೇಷಿಯನ್ ಎಕನಾಮಿಕ್ ಯೂನಿಯನ್ ಅನ್ನು ತೊಡಗಿಸಿಕೊಳ್ಳುವ ಬೇಡಿಕೆಗಳು ಕೂಡ ಇವೆ. ಇದರಿಂದ ಭಾರತವು ಸಾಕಷ್ಟು ಲಾಭ ಗಳಿಸುವ ನಿರೀಕ್ಷೆಯನ್ನು ಹೊಂದಿದೆ.



ಭಾರತವು ಮುಕ್ತ ಮತ್ತು ನ್ಯಾಯೋಚಿತ ವ್ಯಾಪಾರ ಹಾಗೂ ಹೂಡಿಕೆಗಳನ್ನು ಉತ್ತೇಜಿಸುವ ಮೂಲಕ ಜಾಗತಿಕ ಮತ್ತು ಪ್ರಾದೇಶಿಕ ಮೌಲ್ಯ ಸರಪಳಿಗಳ ಅವಿಭಾಜ್ಯ ಅಂಗವಾಗಬೇಕೆಂಬ ಉದ್ದೇಶವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಎಫ್‌ಟಿಎ ಮಾತುಕತೆಗಳಿಗೆ ಮುಂಚಿತವಾಗಿ ಪಾರದರ್ಶಕ ಮಧ್ಯಸ್ಥಗಾರರ ಜೊತೆ ಸಮಾಲೋಚನೆ ನಡೆಸುವುದು ಸೇರಿದಂತೆ ಸಾಕಷ್ಟು ತಯಾರಿ ಮಾಡಿಕೊಂಡಿದೆ. ಈ ಒಪ್ಪಂದಗಳನ್ನು ಅವಸರದಲ್ಲಿ ಮಾಡಿಕೊಳ್ಳಬಾರದು. ವ್ಯಾಪಾರ ಮತ್ತು ಉದ್ಯಮದ ಬಗ್ಗೆ ಎಫ್‌ಟಿಎಗಳು ವಿಧಿಸುವ ತೆರಿಗೆಗಳು ಮತ್ತು ನಿಯಂತ್ರಣಗಳ ವಿಷಯವನ್ನು ಮುಕ್ತವಾಗಿ ಚರ್ಚಿಸಿ ಬದಲಾವಣೆ ಮಾಡಿಕೊಳ್ಳಲು ಸಾಕಷ್ಟು ಸಮಯವನ್ನು ಪಡೆದುಕೊಳ್ಳಬಹುದು. ಭವಿಷ್ಯದಲ್ಲಿ ಎಫ್‌ಟಿಎಗಳು ಸರಕುಗಳ ವಲಯ ಮಾತ್ರವಲ್ಲದೆ ಭಾರತವು ದೊಡ್ಡ ಮಟ್ಟದ ಹಿತಾಸಕ್ತಿಗಳನ್ನು ಹೊಂದಿರುವ ಸೇವಾ ಕ್ಷೇತ್ರದಂತಹ ಇತರೆ ಕ್ಷೇತ್ರಗಳನ್ನೂ ಆವರಿಸಿಕೊಳ್ಳಲಿದೆ. ಆದ್ದರಿಂದ ಭಾರತದ ಪಾಲಿಗೆ ಪ್ರಾದೇಶಿಕ ಆರ್ಥಿಕ ತೊಡಗಿಸಿಕೊಳ್ಳುವಿಕೆ ವಿಷಯದಲ್ಲಿ 2020 ಖಂಡಿತವಾಗಿಯು ಹೊಸ ಮತ್ತು ಪ್ರಕಾಶಮಾನವಾದ ಅಧ್ಯಾಯವನ್ನು ತೆರೆದಿಡಲಿದೆ.



ಸ್ಕ್ರಿಪ್ಟ್: ಸತ್ಯಜಿತ್ ಮೊಹಾಂತಿ, ಹಿರಿಯ ಆರ್ಥಿಕ ವಿಶ್ಲೇಷಕ, ಐಆರ್ ಎಸ್

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ