ಭಾರತ-ಅಮೆರಿಕ ಒಡಂಬಡಿಕೆ ಬೆಳೆಯುವ ನಿಟ್ಟಿನಲ್ಲಿ

ದಕ್ಷಿಣ ಮತ್ತು ಮಧ್ಯ ಏಷ್ಯಾದ ಅಮೇರಿಕದ ರಾಜ್ಯ ಸಹಾಯಕ ಕಾರ್ಯದರ್ಶಿ Ms. ಆಲಿಸ್ ವೆಲ್ಸ್ ಮತ್ತು ರಾಷ್ಟ್ರೀಯ ಉಪಭದ್ರತಾ ಸಲಹೆಗಾರ ಮ್ಯಾಥ್ಯೂ ಪಾಟಿಂಗರ್ ಅವರು ದ್ವಿಪಕ್ಷೀಯ ಸರಣಿ ಸಭೆಗಳೂ ಮತ್ತು 5ನೇ ರೈಸಿನಾ ಸಂವಾದದಲ್ಲಿ ಭಾಗವಹಿಸಲು ಭಾರತದಲ್ಲಿದ್ದರು. Ms ವೆಲ್ಸ್ ಅವರ ಉಪಖಂಡದ ಭೇಟಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದ ನಿಲುಗಡೆಯೂ ಒಳಗೊಂಡಿತ್ತು.

ರೈಸಿನಾ ಮಾತುಕತೆಯ ಮಹತ್ತರ ಮಾರುತ್ತರದಲ್ಲಿ, ಮ್ಯಾಥ್ಯೂ ಪಾಟಿಂಗರ್ ಅವರು ಇಂಡೋ-ಪೆಸಿಫಿಕ್ ಒಂದು "ತತ್ವಬದ್ಧ ದೃಷ್ಟಿ" ಎಂದು ಪ್ರಕಟಿಸಿದರು. ಅವರು ಅದನ್ನು ವಿವರಿಸುತ್ತಾ, ಇಂಡೋ-ಪೆಸಿಫಿಕ್ ಅನೇಕ ರಾಷ್ಟ್ರಗಳ ಸಮುದಾಯವಾಗಿದೆ, ಅದು "ಕಾನೂನು ನಿಯಮ’ಗಳನ್ನು ಗೌರವಿಸುತ್ತದೆ, ಸಮುದ್ರ ಮತ್ತು ಆಕಾಶಯಾನದ ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತದೆ, ಮುಕ್ತ ವಾಣಿಜ್ಯವನ್ನು ಉತ್ತೇಜಿಸುತ್ತದೆ, ಮುಕ್ತ ಚಿಂತನೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಪ್ರತಿ ರಾಷ್ಟ್ರದ ಸಾರ್ವಭೌಮತ್ವದ ಪಾವಿತ್ರ್ಯವನ್ನು ರಕ್ಷಿಸುತ್ತದೆ ಎಂದು ಹೇಳಿದರು. ಆದ್ದರಿಂದ, ಇದು ಮುಕ್ತ ಮತ್ತು ತೆರದ ವಿಚಾರವಾಗಿದೆ ಎಂದು ಹೇಳುತ್ತಾ, ಯಾವುದೇ ರಾಷ್ಟ್ರವನ್ನು ಹೊರತುಪಡಿಸುವುದಿಲ್ಲ, ಆದರೆ ಈ ಸಮಾನ ತತ್ವಗಳನ್ನು ಪ್ರತಿಯೊಂದು ದೇಶವೂ ಗೌರವಿಸಬೇಕು ಹಾಗೂ ಉತ್ತೇಜಿಸಬೇಕು ಎಂದು ಹೇಳಿದರು. ಅಮೆರಿಕದ ರಾಷ್ಟ್ರೀಯ ಉಪಭದ್ರತಾ ಸಲಹೆಗಾರರಾದ ಮ್ಯಾಥ್ಯೂರವರು ಮುಂದುವರಿಸುತ್ತಾ, ಮುಕ್ತ ಹಾಗೂ ತೆರದ ಇಂಡೋ-ಪೆಸಿಫಿಕ್ಅನ್ನು ಬೆಂಬಲಿಸುವ ರಾಷ್ಟ್ರಗಳೆಂದರೆ ಜನ-ಕೇಂದ್ರಿತ ದೃಷ್ಟಿಕೋನವನ್ನು ಹೊಂದಿರುವ ರಾಷ್ಟ್ರಗಳೇ ಹೊರತು ಆಡಳಿತ-ಕೇಂದ್ರಿತ ದೃಷ್ಟಿಕೋನವನ್ನು ಹೊಂದಿರುವ ರಾಷ್ಟ್ರಗಳಲ್ಲ ಎಂದು ಹೇಳಿದರು.

ಸಂವಾದದಲ್ಲಿ ಭಾಗವಹಿಸುವುದರ ಜೊತೆಗೆ, ಸಹಾಯಕ ಕಾರ್ಯದರ್ಶಿ ವೆಲ್ಸ್ ಅವರ ಭೇಟಿಯನ್ನು 2020ರ ಫೆಬ್ರವರಿಯಲ್ಲಿ ಅಧ್ಯಕ್ಷ ಟ್ರಂಪ್ ಅವರ ಸಂಭವನೀಯ ಭಾರತ ಭೇಟಿಯ ಕಾರ್ಯಸೂಚಿಯ ಪೂರ್ವಭಾವಿ ಸಿದ್ಧತೆಯಾಗಿ ನೋಡಲಾಗುತ್ತಿದೆ. ಅಧ್ಯಕ್ಷ ಟ್ರಂಪ್ ಅವರ ಸಂಭವನೀಯ ಭಾರತ ಭೇಟಿ ಖಚಿತವಾದರೆ, ಇದು 2016ರಲ್ಲಿ ಅಧಿಕಾರಕ್ಕೆ ಬಂದ ನಂತರದ ಭಾರತದ ಮೊದಲ ಪ್ರವಾಸವಾಗಲಿದೆ. ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಅವರು ಬಲವಾದ ಸಂಬಂಧವನ್ನು ಹಂಚಿಕೊಂಡಿದ್ದಾರೆ. ಇದು 2019ರಲ್ಲಿ ಟೆಕ್ಸಾಸ್‌ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರದರ್ಶಿತವಾಗಿತ್ತು.

ಭಾರತ ಮತ್ತು ಅಮೆರಿಕಾ ತಮ್ಮ ಕಾರ್ಯತಂತ್ರದ ಸಹಭಾಗಿತ್ವವನ್ನು ಹೆಚ್ಚಿಸುವ ಮಾರ್ಗಗಳನ್ನು ಅನ್ವೇಷಿಸುತ್ತಿವೆ. Ms. ವೆಲ್ಸ್ ಅವರ ಭೇಟಿಯನ್ನು ವಾಷಿಂಗ್ಟನ್ ಡಿಸಿಯಲ್ಲಿ 2019 ರ ಡಿಸೆಂಬರ್‌ನಲ್ಲಿ ನಡೆದ 2 + 2 ಸಂವಾದದ ಚರ್ಚೆಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಹೆಜ್ಜೆಯೆಂದು ನೋಡಲಾಗುತ್ತಿದೆ. ಈ ಭೇಟಿಯಲ್ಲಿ ಹಲವಾರು ರಕ್ಷಣಾ, ಮತ್ತು ನಾಗರಿಕ ಕ್ಷೇತ್ರಗಳಲ್ಲಿನ ಸಹಕಾರ ಕುರಿತು ಪ್ರಮುಖ ಒಪ್ಪಂದಗಳ ಬಗ್ಗೆ ಒಪ್ಪಿಗೆಯಾಗಿದೆ. ಕೈಗಾರಿಕಾ ಭದ್ರತಾ ಅನೆಕ್ಸ್ (ISA) ಗೆ ಉಭಯ ದೇಶಗಳು ಸಹಿ ಹಾಕಿವೆ. ಇದು ಭಾರತೀಯ ಮತ್ತು ಅಮೆರಿಕ ರಕ್ಷಣಾ ಕೈಗಾರಿಕೆಗಳ ನಡುವೆ ವರ್ಗೀಕೃತ ಮಿಲಿಟರಿ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಇದು ರಕ್ಷಣಾ ತಂತ್ರಜ್ಞಾನ ಮತ್ತು ವ್ಯಾಪಾರ ಉಪಕ್ರಮ (DTTI) ದ ಬಗ್ಗೆ ಪ್ರಮುಖ ಪ್ರಗತಿಯನ್ನು ಗೋಚರಪಡಿಸುತ್ತದೆ. ಈ ಕ್ರಮಗಳು ಭಾರತ ಮತ್ತು ಅಮೆರಿಕ ದೇಶಗಳ ಖಾಸಗಿ ರಕ್ಷಣಾ ಕೈಗಾರಿಕೆಗಳ ನಡುವಿನ ಸಹಯೋಗಕ್ಕೆ ವೇಗವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ರಕ್ಷಣಾ ನಾವೀನ್ಯತೆಯ ಕ್ಷೇತ್ರದಲ್ಲಿ ತಮ್ಮ ಮಾತುಕತೆ ಮುಂದುವರಿಯಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ.

Ms. ವೆಲ್ಸ್ ಅವರು ಭಾರತದ ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಮತ್ತು ನಾಗರಿಕ ಸಮಾಜದ ಸದಸ್ಯರನ್ನು ಭೇಟಿಯಾಗಿ, ಸಮೃದ್ಧಿ, ಪ್ರಜಾಪ್ರಭುತ್ವ ಮತ್ತು ನ್ಯಾಯವನ್ನು ಬೆಳೆಸುವ ಸ್ವಾತಂತ್ರ್ಯ ಮತ್ತು ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹಂಚಿಕೆಯ ಹಿತಾಸಕ್ತಿಗಳನ್ನು ಒಳಗೊಂಡಂತೆ ಹಲವಾರು ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಈ ಚರ್ಚೆಗಳು 2019 ರ ವಾಷಿಂಗ್ಟನ್ ಡಿಸಿಯಲ್ಲಿನ ಚತುರ್ಭುಜ (ಭಾರತ, ಯುಎಸ್, ಜಪಾನ್ ಮತ್ತು ಆಸ್ಟ್ರೇಲಿಯಾ “QUAD”) ಸದಸ್ಯರ ಮೊದಲ ಮಂತ್ರಿ ಮಟ್ಟದ ಸಭೆಯ ಬುನಾಧಿಯ ಮೇಲೆ ಕಟ್ಟಲ್ಪಡುತ್ತದೆ. ಈ ಸಭೆ ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಅಮೆರಿಕ ರಾಷ್ಟ್ರಗಳು ಇಂಡೋ-ಪೆಸಿಫಿಕ್ನಲ್ಲಿ ಸಹಕಾರವನ್ನು ಹೆಚ್ಚಿಸಲು ಮಾಡಿದ ಪ್ರಯತ್ನಗಳ ಮಹತ್ವದ ಉನ್ನತಿಯ ಹೆಜ್ಜೆಯಾಗಿದೆ.

ದಕ್ಷಿಣ ಮತ್ತು ಮಧ್ಯ ಏಷ್ಯಾದ ಅಮೆರಿಕ ರಾಜ್ಯ ಸಹಾಯಕ ಕಾರ್ಯದರ್ಶಿಯವರು ಸಹ ಭಾರತೀಯ ವ್ಯಾಪಾರ ಸಮುದಾಯದೊಂದಿಗೆ ಸಂವಾದ ನಡೆಸಿದ್ದಾರೆ. ಉಭಯ ರಾಷ್ಟ್ರಗಳು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದಕ್ಕಾಗಿ ಮಾತುಕತೆ ನಡೆಸುತ್ತಿವೆ. ಉಭಯ ರಾಷ್ಟ್ರಗಳು ಕೃಷಿ ಮತ್ತು ಡೈರಿ ಕ್ಷೇತ್ರದಲ್ಲಿರುವ ಭಿನ್ನಾಭಿಪ್ರಾಯಗಳ ಬಗ್ಗೆ ಮತ್ತು ದೇಶೀಯ ಕೈಗಾರಿಕೆಗಳಿಗೆ ನೀಡುವ ಸುಂಕ ಮತ್ತು ಸಬ್ಸಿಡಿಗಳ ಬಗ್ಗೆ ಚರ್ಚೆ ನಡಸುತ್ತಲೇ ಇವೆ.

ಕಳೆದ ಎರಡು ದಶಕಗಳಲ್ಲಿ ಭಾರತ-ಅಮೆರಿಕ ಸಂಬಂಧಗಳು ಬದಲಾಗಿದ್ದು, ಉಭಯ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡದ ಪ್ರದೇಶವಿಲ್ಲ. ಕಳೆದ ಎರಡು ದಶಕಗಳಲ್ಲಿ ದ್ವಿಪಕ್ಷೀಯ ಪಾಲುದಾರಿಕೆಯ ಸ್ಥಿರ ವಿಸ್ತರಣೆಯನ್ನು ಗಮನಿಸಿದರೆ, ಇಂದು ಜಂಟಿ ಚಟುವಟಿಕೆಗಳ ವ್ಯಾಪ್ತಿಯು ಗಮನಾರ್ಹವಾಗಿದೆ. ಸರ್ಕಾರದ ಮುಖ್ಯಸ್ಥರ ನಡುವೆ ಆಗಾಗ್ಗೆ ದ್ವಿಪಕ್ಷೀಯ ಶೃಂಗಸಭೆಯಿಂದ ಹಿಡಿದು ಉನ್ನತ ಮಟ್ಟದ ಸಂವಾದಗಳವರೆಗೆ, ಅಮೆರಿಕ ಮತ್ತು ಭಾರತ ಇಂದು ಹಲವಾರು ಕಾರ್ಯತಂತ್ರದ ಸಮಾಲೋಚನೆಗಳಲ್ಲಿ ತೊಡಗಿವೆ. ವ್ಯಾಪಕವಾದ ರಕ್ಷಣೆ, ಭಯೋತ್ಪಾದನಾ ನಿಗ್ರಹ, ತಾಯ್ನಾಡಿನ ಭದ್ರತೆ, ಸೈಬರ್-ಭದ್ರತೆ ಮತ್ತು ಗುಪ್ತಚರ ಸಹಕಾರ, ಜೊತೆಗೆ ಅಸಂಖ್ಯಾತ ಚಟುವಟಿಕೆಗಳನ್ನು ಒಳಗೊಂಡ ಶಕ್ತಿ, ಶಿಕ್ಷಣ, ಮತ್ತು ತಂತ್ರಜ್ಞಾನ, ಸಾರ್ವಜನಿಕ ಆರೋಗ್ಯ ಮತ್ತು ಸಂಸ್ಕೃತಿ ಕ್ಷೇತ್ರಗಳ ಬಗ್ಗೆ ಸಮಾಲೋಚನೆಯಾಗಿದೆ. 
ಲೇಖನ: ಡಾ. ಸ್ತುತಿ ಬ್ಯಾನರ್ಜೀ

ಅಮೇರಿಕನ್ ವ್ಯವಹಾರಗಳ ಕಾರ್ಯತಂತ್ರದ ವಿಶ್ಲೇಷಕರು  




Comments