ಕೀಳುಮಟ್ಟಕ್ಕಿಳಿದ ಪಾಕಿಸ್ತಾನ

ಕಳೆದ ಶುಕ್ರವಾರ ಕನಿಷ್ಠ 400 ಜನರಿದ್ದ ಬೃಹತ್ ಜನಸಮೂಹವೊಂದು ಸಿಖ್ಖರ ಪವಿತ್ರ ದೇವಾಲಯವಾದ ವಿಶ್ವಪ್ರಸಿದ್ಧ ಗುರುದ್ವಾರ ನಂಕಣ ಸಾಹಿಬ್ ಬಳಿ ಸಿಖ್ ವಿರೋಧಿ ಘೋಷಣೆಗಳನ್ನು ಮೊಳಗಿಸಿತು. ಅಲ್ಲದೆ ಆ ಸಮೂಹವು ಗುರುದ್ವಾರದ ಮೇಲೆ ಕಲ್ಲು ತೂರಾಟ ನಡೆಸಿತು. ಗುರುದ್ವಾರದ ಪಾದ್ರಿಯ ಪುತ್ರಿ ಜಗ್ಜಿತ್ ಕೌರ್ ಅನ್ನು ಅಪಹರಿಸಿ ಬಲವಂತವಾಗಿ ಮತಾಂತರ ಮಾಡಿ ಮದುವೆಯಾದ ಮೊಹಮ್ಮದ್ ಹಸನ್ ಕುಟುಂಬವೇ ಈ ಜನಸಮೂಹವನ್ನು ಮುನ್ನಡೆಸಿದೆ. ಬಾಲಕನ ನಡೆಯನ್ನು ಆಕ್ಷೇಪಿಸಿದ್ದಕ್ಕೆ ಸಿಖ್ ಸಮುದಾಯದ ವಿರುದ್ಧ ಹೀಗೆ ಹಿಂಸಾಚಾರ ನಡೆಸಲಾಗಿದೆ.

ಪ್ರತಿಭಟನಾಕಾರರು ಅಲ್ಲಿ ಗುರುದ್ವಾರ ಇರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಹಾಗೂ ಶೀಘ್ರವೇ ನಂಕಣ ಸಾಹಿಬ್‌ ಸ್ಥಳದ ಹೆಸರನ್ನು ಗುಲಮಾನ್-ಎ-ಮುಸ್ತಫಾ ಎಂದು ಬದಲಾಯಿಸುವ ಘೋಷಣೆ ಕೂಗುತ್ತಿರುವುದು ವೀಡಿಯೊವೊಂದರಲ್ಲಿ ಕಂಡುಬರುತ್ತಿದೆ.

ಗಲಭೆ ನಡೆದಾಗ ಐತಿಹಾಸಿಕವಾದ ಗುರುದ್ವಾರದಲ್ಲಿದ್ದ ಅಪಾರ ಪ್ರಮಾಣದ ಸಿಖ್ ಭಕ್ತರಿಗೆ ಆತಂಕ ಆಗಿತ್ತು. ಅಲ್ಲದೆ ಸುರಕ್ಷತೆ ಬಗ್ಗೆ ಗಮನಹರಿಸಬೇಕಿದ್ದ ಪಾಕಿಸ್ತಾನ ಸರ್ಕಾರ ತೋರಿದ ಸಂಪೂರ್ಣ ನಿರ್ಲಕ್ಷ್ಯ ಆ ದೇಶದಲ್ಲಿ ವಾಸಿಸುತ್ತಿರುವ ಸಿಖ್ ಸಮುದಾಯದವರಿಗೆ ಗಂಭೀರವಾದ ಕಳವಳ ಸೃಷ್ಟಿಸಿದೆ.

ಗುರುದ್ವಾರ ಇರುವ ಪಾಕಿಸ್ತಾನದ ಜಿಲ್ಲೆ ನಂಕಣ ಸಾಹಿಬ್ ನಲ್ಲಿ 1469ರಲ್ಲಿ ಸಿಖ್ಖರ ಮೊದಲ ಗುರು ಗುರುನಾನಕ್ ದೇವ್ ಜಿ ಜನಿಸಿದರು. ಹಾಗಾಗಿ ಇದು ಸಿಖ್ ಸಮುದಾಯದ ದೇವಾಲಯಗಳಲ್ಲೇ ಅತ್ಯಂತ ಪವಿತ್ರವಾದುದು ಎನ್ನಲಾಗಿದೆ. ಕಳೆದ ವರ್ಷ ವಿಶ್ವದಾದ್ಯಂತ ಸಿಖ್ ಸಮುದಾಯವು ಗುರುನಾನಕ್ ಅವರ 55 ನೇ ಜನ್ಮದಿನಾಚರಣೆ ಆಚರಿಸಿತ್ತು. ಈಗ ಹತ್ತನೇ ಗುರುಗಳಾದ ಗುರು ಗೋಬಿಂದ್ ಸಿಂಗ್ ಅವರ ಜನ್ಮದಿನ ಆಚರಿಸಿದ ಮರುದಿನ ನಂಕಣ ಸಾಹಿಬ್‌ನಲ್ಲಿ ಈ ಘಟನೆ ನಡೆದಿರುವುದು ವಿಪರ್ಯಾಸವಾಗಿದೆ.

ಈ ಪೂರ್ವಗ್ರಹಪೀಡಿತ ಹಿಂಸೆ ಮತ್ತು ವಿಧ್ವಂಸಕ ಕೃತ್ಯವನ್ನು ಬಲವಾಗಿ ಖಂಡಿಸುವಲ್ಲಿ ಭಾರತವು ತಡಮಾಡಿಲ್ಲ. ಕಳೆದ ವರ್ಷ ಆಗಸ್ಟ್‌ನಲ್ಲಿ ನಂಕಣ ಸಾಹಿಬ್‌ನಲ್ಲಿರುವ ತನ್ನ ಮನೆಯಿಂದ ಜಗ್ಜಿತ್ ಕೌರ್‌ನನ್ನು ಬಲವಂತವಾಗಿ ಅಪಹರಿಸಿ ಮತಾಂತರಗೊಳಿಸಿದಾಗಲೇ ಇದು ಖಂಡನೀಯ ಎಂದು ಒತ್ತಿ ಹೇಳಿತ್ತು.

ಪವಿತ್ರ ಸ್ಥಳವನ್ನು ನಾಶಮಾಡುವ ಮತ್ತು ಅಪವಿತ್ರಗೊಳಿಸುವ ಈ ಸಲ್ಲದ ಕೃತ್ಯಗಳನ್ನು ಭಾರತವು ಗಟ್ಟಿ ದನಿಯಲ್ಲಿ ಖಂಡಿಸಿದೆ. ”ಸಿಖ್ ಸಮುದಾಯದ ಜನರ ಸುರಕ್ಷತೆ ಹಾಗೂ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ತಕ್ಷಣವೇ ಕ್ರಮ ತೆಗೆದುಕೊಳ್ಳುವಂತೆ ನವದೆಹಲಿಯು ಪಾಕಿಸ್ತಾನಕ್ಕೆ ತಿಳಿಸಿದೆ. ಪವಿತ್ರ ಗುರುದ್ವಾರವನ್ನು ಅಪವಿತ್ರಗೊಳಿಸಿದ ಮತ್ತು ಅಲ್ಪಸಂಖ್ಯಾತ ಸಿಖ್ ಸಮುದಾಯದ ಸದಸ್ಯರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಬೇಕೆಂದು ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದೆ. ಅಲ್ಲದೆ ಪವಿತ್ರ ನಂಕಣ ಸಾಹಿಬ್ ಗುರುದ್ವಾರ ಮತ್ತು ಅದರ ಸುತ್ತಮುತ್ತಲಿನ ಪಾವಿತ್ರ್ಯವನ್ನು ರಕ್ಷಣೆ ಮಾಡಲು ಹಾಗೂ ಸಂರಕ್ಷಿಸಿಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಪಾಕಿಸ್ತಾನಕ್ಕೆ ಎಚ್ಚರಿಸಿದೆ.

ನಂಕಣ ಸಾಹಿಬ್ ಮೇಲೆ ದಾಳಿ ಆದ ಸುದ್ದಿ ಬರುತ್ತಿದ್ದಂತೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಕರೆ ಮಾಡಿ “ಕೂಡಲೇ ಗುರುದ್ವಾರದಲ್ಲಿ ಸಿಲುಕಿರುವ ಭಕ್ತರನ್ನು ಹಾಗೂ ಜಮಾಯಿಸಿರುವ ಉದ್ರಿಕ್ತ ಜನಸಮೂಹದಿಂದ ಐತಿಹಾಸಿಕ ಗುರುದ್ವಾರವನ್ನು ರಕ್ಷಿಸಿ” ಎಂದು ಮನವಿ ಮಾಡಿಕೊಂಡಿದ್ದಾರೆ. ಕೇಂದ್ರ ಸಚಿವ ಹರ್ಸಿಮ್ರತ್ ಕೌರ್ ಬಾದಲ್ ಈ ದಾಳಿಯನ್ನು ಖಂಡಿಸಿ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ಕಿರುಕುಳ ನಡೆಯುತ್ತಿದೆ. ಗುರುದ್ವಾರ ಮೇಲಿನ ದಾಳಿಯು ಪಾಕಿಸ್ತಾನದ ನಿಜವಾದ ಮುಖವನ್ನು ಬಯಲು ಮಾಡಿದೆ ಎಂದು ಹೇಳಿದ್ದಾರೆ. ಶಿರೋಮಣಿ ಅಕಾಲಿ ದಳದ ಅಧ್ಯಕ್ಷರು, ಇತರೆ ರಾಜಕೀಯ ಮುಖಂಡರು ಹಾಗೂ ಭಾರತ ಮತ್ತು ವಿದೇಶಗಳಲ್ಲಿ ನೆಲೆಸಿರುವ ಸಿಖ್ ಸಮುದಾಯದವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಘಟನೆಯನ್ನು ವಿರೋಧಿಸಿ ನವದೆಹಲಿಯ ಪಾಕಿಸ್ತಾನ ರಾಯಭಾರ ಕಚೇರಿ ಹೊರಗೆ ಹೆಚ್ಚಿನ ಸಂಖ್ಯೆಯ ಜನರು ಸಮಾವೇಶಗೊಂಡಿದ್ದರು.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮೌನ ಮುರಿದು ಘಟನೆಯನ್ನು ಖಂಡಿಸಲು ಎರಡು ದಿನ ಬೇಕಾಯಿತು. ಇದು ಅವರಿಗೆ “ತಿಳಿಯದೆ” ನಡೆದಿರುವ ಘಟನೆಯಂತೆ. ಕೂಡಲೇ ಘಟನೆಯಲ್ಲಿ ಪಾಲ್ಗೊಂಡವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ನಮ್ಮ ಸರ್ಕಾರ ಇಂಥ ಘಟನೆಗಳ ಬಗ್ಗೆ “ಝೀರೋ ಟಾಲರೆನ್ಸ್” ಹೊಂದಿದೆ ಎಂದು ಹೇಳಿದ್ದಾರೆ. ಇದರ ನಡುವೆ ಅವರು ನಂಕಣ ಘಟನೆಗೂ ಭಾರತದಲ್ಲಿ ಅಲ್ಪಸಂಖ್ಯಾತರ ಪರಿಸ್ಥಿತಿಗೂ ಬಹಳಷ್ಟು ವ್ಯತ್ಯಾಸವಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಈ ಘಟನೆಯನ್ನು ಬಳಸಿಕೊಂಡು ಭಾರತವನ್ನು ಹೀಗೆಳೆಯುವ ಪ್ರಯತ್ನವನ್ನೇ ಮಾಡಿದರು. ಇದರಿಂದಾಗಿ ಇದೊಂದು ಪೂರ್ವಭಾವಿ ಮತ್ತು ಖಂಡನೀಯ ಘಟನೆ ಎಂದು ಹಾಗೂ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವ ಜನಸಮೂಹವನ್ನು ನಿಯಂತ್ರಿಸಲು ಪಾಕಿಸ್ತಾನದ ನಾಯಕತ್ವಕ್ಕೆ ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಯಬಹುದು.

ಇಮ್ರಾನ್ ಖಾನ್ ಅವರ ಅಭಿಪ್ರಾಯಕ್ಕೆ ಮುಂಚೆ ಪಾಕಿಸ್ತಾನ ವಿದೇಶಾಂಗ ಕಚೇರಿಯು ನಂಕಣ ಸಾಹಿಬ್ ಘಟನೆ ಕುರಿತು ಬಂದ ವರದಿಗಳನ್ನು ಸುಳ್ಳು ಎಂದು ಪ್ರತಿಪಾದಿಸಿತ್ತು. ಅಲ್ಲದೆ ಇದು ಚಹಾ ಅಂಗಡಿಯಲ್ಲಿ ಆದ ಸಣ್ಣ ಘಟನೆ ಹಿನ್ನೆಲೆಯಲ್ಲಿ ಎರಡು ಗುಂಪುಗಳು ನಡುವೆ ನಡೆದ ಜಗಳ ಎಂದು ಹೇಳಿತ್ತು.

ಈ ಘಟನೆಯಿಂದಾಗಿ 2019ರ ನವೆಂಬರ್‌ನಲ್ಲಿ ಕರ್ತಾರ್‌ಪುರ ಕಾರಿಡಾರ್ ಅನ್ನು ತೆರೆಯುವ ಮೂಲಕ ಮುಖವಾಡ ಧರಿಸಲು ಯತ್ನಿಸಿದ್ದ ಪಾಕಿಸ್ತಾನದ ಬೂಟಾಟಿಕೆ ಬಹಿರಂಗವಾದಂತಾಗಿದೆ.

ಈಗ ತಮ್ಮ ದೇಶದಲ್ಲಿರುವ ಅಲ್ಪಸಂಖ್ಯಾತರಿಗೆ ಭದ್ರತೆ ಮತ್ತು ರಕ್ಷಣೆ ನೀಡುವಂತೆ ಪಾಕಿಸ್ತಾನದ ಮೇಲೆ ಭಾರತ ಹಾಗೂ ಅಂತರರಾಷ್ಟ್ರೀಯ ಸಮುದಾಯ ಒತ್ತಡ ಹೇರಬೇಕಾಗುತ್ತದೆ.

ಸ್ಕ್ರಿಪ್ಟ್: ಅಂಬ್. ಅಶೋಕ್ ಸಜ್ಜನ್ಹಾರ್, ಜಾಗತಿಕ ಅಧ್ಯಯನ ಸಂಸ್ಥೆಯ ಮಾಜಿ ಭಾರತೀಯ ರಾಜತಾಂತ್ರಿಕ ಮತ್ತು ಅಧ್ಯಕ್ಷ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ