ಭಾರತದ GSAT-30 ಉಪಗ್ರಹದ ಯಶಸ್ವಿ ಉಡಾವಣೆ

ಭಾರತದ 41ನೇ ಸಂವಹನ ಉಪಗ್ರಹವಾದ GSAT-30 ಜನವರಿ 17, 2020ರ ಆರಂಭದಲ್ಲಿ ಯಶಸ್ವಿಯಾಗಿ ಉಡಾವಣೆಯಾಯಿತು. 14 ವರ್ಷ ಹಳೆಯ ಇನ್ಸಾಟ್-4A ಉಪಗ್ರಹ ತನ್ನ ಜೀವಿತದ ಕೊನೆಹಂತದಲ್ಲಿರುವ ಕಾರಣ ಅನವರತ ಸಂವಹನದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಮಹತ್ತರ ಹೆಜ್ಜೆ ಇಡಲಾಯಿತು. ಭಾರತೀಯ ಕೇಬಲ್ ಆಪರೇಟರ್‌ಗಳು ತಮ್ಮ ಕಾರ್ಯಕ್ರಮಗಳನ್ನು ವಿದೇಶದಲ್ಲಿ ಪ್ರಸಾರ ಮಾಡಲು ಇನ್‌ಸಾಟ್ 4A ಅನ್ನು ಬಳಸುತ್ತಿದ್ದಾರೆ. GSAT-30 ಈ ಸೇವೆಗಳನ್ನು ವಿಸ್ತೃತ ಪ್ರದೇಶದಲ್ಲಿ ಇನ್ನೂ 15 ವರ್ಷಗಳ ಕಾಲ ಮುಂದುವರಿಸಲು ಅನುವು ಮಾಡಿಕೊಡುತ್ತದೆ.

ಫ್ರೆಂಚ್ ಗಯಾನಾದ ಕೌರೌದಲ್ಲಿರುವ ಯುರೋಪಿನ ಬಾಹ್ಯಾಕಾಶ ನಿಲ್ದಾಣವಾದ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಅರಿಯನ್ ಸ್ಪೇಸ್‌ನ ಅರಿಯೇನ್-5 ರಾಕೆಟ್‌ನಿಂದ GSAT-30ಅನ್ನು ಉಡಾಯಿಸಲಾಯಿತು. ಭಾರತದ ಮೊದಲ ಸಂವಹನ ಉಪಗ್ರಹ 'ಆಪಲ್' ಅನ್ನು 1981ರಲ್ಲಿ ಅರಿಯನ್ ಸ್ಪೇಸ್ನಿಂದ ಉಡಾಯಸಿಸಲಾಗಿತ್ತು. ಈಗ GSAT-30 ಭಾರತೀಯ 24ನೇ ಉಪಗ್ರಹವಾಗಿ ಉಡಾಯಿಸಲ್ಪಟ್ಟಿದೆ. ಇತ್ತೀಚಿನ ಹಾರಾಟದಲ್ಲಿ, ಅರಿಯೇನ್-5 EUTELSAT KONNECTಅನ್ನು ಸಹ ಹೊತ್ತೊಯ್ದಿದೆ, ಇದು ಹೊಸ ಪೀಳಿಗೆಯ ಉಪಗ್ರಹವಾಗಿದ್ದು ಯುರೋಪ್ ಮತ್ತು ಆಫ್ರಿಕಾದಾದ್ಯಂತ ದೂರಸಂಪರ್ಕ ಸೇವೆಗಳನ್ನು ಒದಗಿಸುತ್ತದೆ.

15 ವರ್ಷಗಳ ಜೀವಿತಾವಧಿ ಹೊಂದಿರುವ, ಹೊಂದಿಕೊಳ್ಳುವ ಆವರ್ತನ ವಿಭಾಗಗಳು ಮತ್ತು ಹೊಂದಿಕೊಳ್ಳುವ ವ್ಯಾಪ್ತಿಯನ್ನು ಒದಗಿಸುವ ವಿಶಿಷ್ಟ ವಿನ್ಯಾಸವನ್ನು ಹೊಂದಿದ GSAT-30 ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) "ಉನ್ನತ ಶಕ್ತಿ" ಸಂವಹನ ಉಪಗ್ರಹವಾಗಿದೆ. INSAT-4A ಉಪಗ್ರಹವು ಕಾರ್ಯಾಚರಣೆಯ ಅಂತ್ಯಕಾಲದಲ್ಲಿರುವುದರಿಂದ, ತಡೆರಹಿತ ಸಂವಹನ ಸೇವೆಗಳನ್ನು ನೀಡಲು GSAT-30 ಪರ್ಯಾಯ ವ್ಯವಸ್ಥೆಯಾಗಿದೆ. 12 C ಮತ್ತು 12 Ku ಬ್ಯಾಂಡ್ ಟ್ರಾನ್ಸ್‌ಪಾಂಡರ್‌ಗಳನ್ನು ಅಳವಡಿಸಿಕೊಂಡಿರುವ, GSAT-30ಯು ಟೆಲಿವಿಷನ್ ಪ್ರಸಾರ ಮತ್ತು ಡೈರೆಕ್ಟ್-ಟು-ಹೋಮ್ (DTH) ಸೇವೆಗಳನ್ನು ಹೆಚ್ಚಿಸುತ್ತದೆ. Ku-ಬ್ಯಾಂಡ್ ಟ್ರಾನ್ಸ್‌ಪಾಂಡರ್‌ಗಳು ಭಾರತೀಯ ಮುಖ್ಯಭೂಮಿ ಮತ್ತು ದ್ವೀಪಗಳಿಗೆ ವ್ಯಾಪ್ತಿಯನ್ನು ಒದಗಿಸಿದರೆ, C-ಬ್ಯಾಂಡ್ ದ್ವಿಮುಖ ಸಂವಹನಕ್ಕೆ ಅವಕಾಶ ನೀಡುತ್ತದೆ ಮತ್ತು ದೂರದರ್ಶನ ಪ್ರಸಾರಕರು ಭಾರತ, ಕೊಲ್ಲಿ ರಾಷ್ಟ್ರಗಳು, ಹಲವಾರು ಏಷ್ಯಾದ ದೇಶಗಳು ಮತ್ತು ಆಸ್ಟ್ರೇಲಿಯಾದ ಮೇಲೆ ತಮ್ಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಅನುವು ಮಾಡಿಕೊಡುತ್ತದೆ. ಇಸ್ರೋ ಪ್ರಕಾರ, ಉಪಗ್ರಹ ದೇಹದಲ್ಲಿನ ಟ್ರಾನ್ಸ್‌ಪಾಂಡರ್‌ಗಳ ಸಂಖ್ಯೆಯನ್ನು ಗರಿಷ್ಠಗೊಳಿಸಲು ಪೇಲೋಡ್ ವಿನ್ಯಾಸವನ್ನು ಸುಧಾರಿಸಲಾಗಿದೆ. ಇದು ಸುಧಾರಿತ ಪ್ರಸಾರ ವ್ಯಾಪ್ತಿಯನ್ನು ನೀಡಿದ್ದು, ಭಾರತೀಯ ಪ್ರಸಾರಕರು ತಮ್ಮ ಕಾರ್ಯಕ್ರಮದ ವಸ್ತು ವಿಷಯಗಳನ್ನು ಮಧ್ಯಪ್ರಾಚ್ಯ, ಆಸ್ಟ್ರೇಲಿಯಾ ಮತ್ತು ಏಷ್ಯಾದ ಇತರ ಭಾಗಗಳಲ್ಲಿ ಪ್ರಸಾರ ಮಾಡಬಹುದಾಗಿದೆ.

ಭಾರತೀಯ ಬಾಹ್ಯಾಕಾಶ ಸಂಸ್ಥೆ ಪ್ರಕಾರ, ಟೆಲಿವಿಷನ್ ಅಪ್-ಲಿಂಕಿಂಗ್ ಮತ್ತು ಟೆಲಿಪೋರ್ಟ್ ಸೇವೆಗಳಿಗೆ, DTH ಟೆಲಿವಿಷನ್ ಸೇವೆಗಳಿಗೆ ಮತ್ತು ಇತರ ಉಪಗ್ರಹ ಆಧಾರಿತ ಅಪ್ಲಿಕೇಶನ್‌ಗಳಿಗೆ, ಬಾಹ್ಯಾಕಾಶ ನೌಕೆ ಅಸ್ತಿತ್ವದಲ್ಲಿರುವ VSAT ಅಥವಾ ವೆರಿ ಸ್ಮಾಲ್ ಅಪರ್ಚರ್ ಟರ್ಮಿನಲ್ ನೆಟ್‌ವರ್ಕ್, ನಿರಂತರತೆಯನ್ನು ಒದಗಿಸುತ್ತದೆ. ಡಿಜಿಟಲ್ ಸ್ಯಾಟಲೈಟ್ ನ್ಯೂಸ್ ಗ್ಯಾದರಿಂಗ್ ವ್ಯವಸ್ಥೆಗಳನ್ನು ನಿರ್ವಹಿಸಲು ಸಹ ಇದು ಸಹಾಯ ಮಾಡುತ್ತದೆ, ಇದು ಸುದ್ದಿ ವರದಿಗಾರರಿಗೆ ನೈಜ ಸಮಯದಲ್ಲಿ ಭಾರತದ ತಮ್ಮ ಟಿವಿ ಸ್ಟುಡಿಯೋಗಳಿಂದ ದೂರದಲ್ಲಿರುವ ಸೌಕರ್ಯವಿಲ್ಲದ ಸ್ಥಳಗಳಿಂದ, ಪಶ್ಚಿಮದ ಯುರೋಪಿನಿಂದ ಪೂರ್ವದ ಆಸ್ಟ್ರೇಲಿಯಾದವರೆಗಿನ ಎಲ್ಲ ದೇಶಗಳನ್ನು ಒಳಗೊಂಡ ಪ್ರದೇಶಗಳಿಗೆ, ಪ್ರಸಾರ ಮಾಡಲು ಅವಕಾಶ ನೀಡುತ್ತದೆ.

ಇಸ್ರೋ ಪ್ರಕಾರ, ಹೊಸ ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು 2030ರ ದಶಕದವರಿಗೂ ಕಾರ್ಯನಿವ್ರಹಿಸುವಂತೆ GSAT-30ಅನ್ನು ನಿರ್ಮಿಸಲಾಗಿದೆ. ತನ್ನ ಭಾರೀ ಉಡಾವಣಾ ವೇಳಾಪಟ್ಟಿಯನ್ನು ಕಾಪಾಡಿಕೊಳ್ಳಲು, ಇತ್ತೀಚಿನ ವರ್ಷಗಳಲ್ಲಿ, ದಿನನಿತ್ಯದ ಬಾಹ್ಯಾಕಾಶ ನೌಕೆಗಳನ್ನು ತ್ವರಿತವಾಗಿ ಇಸ್ರೋ ಸಂಸ್ಥೆಯು ತನ್ನ ಆವರಣದಲ್ಲಿ ನಿರ್ಮಿಸಲು ಮಧ್ಯಮ ಗಾತ್ರದ ಕೈಗಾರಿಕೆಗಳ ಸಮೂಹದ ಬೆಂಬಲವನ್ನು ತೆಗೆದುಕೊಳ್ಳುತ್ತಿದೆ. GSAT-30ರ ಜೋಡಣೆಯನ್ನು ‘ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಲಿಮಿಟೆಡ್’ ನೇತೃತ್ವದ ಒಕ್ಕೂಟ ನಡೆಸಿತು. GST-30ಅನ್ನು ಬೆಂಗಳೂರಿನಲ್ಲಿರುವ ಇಸ್ರೋ ‘ಸ್ಯಾಟಲೈಟ್ ಇಂಟಿಗ್ರೇಷನ್ ಮತ್ತು ಟೆಸ್ಟ್ ಎಸ್ಸ್ಟಾಬ್ಲಿಷ್ಮೆನ್ಟ್ ’ ನಲ್ಲಿ ಜೋಡಿಸಲಾಯಿತು.

ತನ್ನ ಬಳಕೆದಾರರಿಗೆ ನಿರಂತರ ಉಪಗ್ರಹ ಆಧಾರಿತ ಸಂವಹನ ಸಂಪರ್ಕವನ್ನು ಖಾತ್ರಿಮಾಡಲು, ವಿದೇಶಿ ರಾಕೆಟ್‌ಗಳಿಂದ GSAT-30 ಅನ್ನು ಉಡಾಯಿಸುವ ಇಸ್ರೋ ನಿರ್ಧಾರವು ಬಾಹ್ಯಾಕಾಶ ಏಜೆನ್ಸಿಯ ಕಾರ್ಯದೃಷ್ಟಿಯ ಮಾರ್ಗವಾಗಿದೆ. ಈ ಕ್ರಿಯೆ ಅದರ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ.

ಇಸ್ರೋ ಅಧ್ಯಕ್ಷ ಡಾ. ಕೆ. ಶಿವನ್ ಅವರ ಪ್ರಕಾರ, ಭವಿಷ್ಯದಲ್ಲಿ ಉಪಗ್ರಹಗಳನ್ನು ಉಡಾಯಿಸಲು ರಾಕೆಟ್ ಉತ್ಪಾದನೆಯನ್ನು ಇಸ್ರೋ ಹೊರಗುತ್ತಿಗೆಗೆ ನೀಡಲಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಮತ್ತು ಲಾರ್ಸೆನ್ & ಟೌಬ್ರೊ (L&T) ನೇತೃತ್ವದಲ್ಲಿ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಅನ್ನು ಒಂದು ಒಕ್ಕೂಟವೂ ನಿರ್ಮಿಸುತ್ತದೆ. ಅನೇಕ ಸಂವತ್ಸರಗಳಿಂದಲೂ PSLVಯೂ ‘ಕಾರ್ಯಅಶ್ವ’ವಾಗಿದೆ. ಭಾರವಾದ, ಜಿಯೋ-ಸ್ಟೇಷನರಿ ಲಾಂಚ್ ವೆಹಿಕಲ್ (GSLV) ವರ್ಗದ ರಾಕೆಟ್‌ಗಳನ್ನು ಸಹ ಒಕ್ಕೂಟವು ನಿರ್ಮಿಸುತ್ತದೆ. ಇಸ್ರೋ ಪ್ರಕಾರ, ವಿವಿಧ ಕಾರ್ಯಕ್ರಮಗಳಿಗಾಗಿ ರೂ. 300 ಬಿಲಿಯನ್ ಹಣವನ್ನು ಸರ್ಕಾರವು ಮಂಜೂರು ಮಾಡಿದೆ. ಇದರಲ್ಲಿ 80 ಪ್ರತಿಶತ ಖಾಸಗಿ ವಲಯಕ್ಕೆ ಮೀಸಲಿಡಲಾಗಿದೆ. ಒಟ್ಟು ಹಣದಲ್ಲಿ 100 ಬಿಲಿಯನ್ ಭಾರತದ ಮಾನವಸಹಿತ ಬಾಹ್ಯಾಕಾಶ ಯಾನವಾದ ‘ಗಗನ್ಯಾನ್’ ಗಾಗಿ ಮುಡಿಪಾಗಿದೆ.

ಭಾರತೀಯ ಮಣ್ಣಿನಿಂದ ಬಾಹ್ಯಾಕಾಶಕ್ಕೆ ಮೊದಲ ಭಾರತೀಯನನ್ನು ಕಳುಹಿಸಲು ಇಸ್ರೋ ಈಗ ಸಜ್ಜುಗೊಳ್ಳುತ್ತಿದೆ. 2022ರಲ್ಲಿ ಆಚರಿಸುವ ದೇಶದ 75ನೇ ಸ್ವಾತಂತ್ರ್ಯೋತ್ಸವಕ್ಕೆ ಮೊದಲು, ಪ್ರಥಮ ಭಾರತೀಯ ಸಿಬ್ಬಂದಿಯನ್ನು ಕೆಳ-ಭೂಮಿಯ ಕಕ್ಷೆಗೆ ಕಳುಹಿಸಲು ನಿರ್ಧರಿಸಲಾಗಿದೆ. ಇದನ್ನು ಸಾಧಿಸಲು ಯಶಸ್ಸಿನ ಸರಮಾಲೆಯ ಇತಿಹಾಸದೊಂದಿಗೆ, ಇಸ್ರೋ ಆಶಾದಾಯಕವಾಗಿ ಎದುರು ನೋಡಬಹುದಾಗಿದೆ.

ಲೇಖನ: ಬಿಮನ್ ಬಸು

ಹಿರಿಯವಿಜ್ಞಾನವಿವರಣೆಕಾರ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ