ಆರ್ಥಿಕ ಸಮೀಕ್ಷೆ 2020

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿಸದನವನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಭಾರತದ 2020-21ನೇ ಸಾಲಿನ ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಚಾಲನೆ ನೀಡಿದರು. ನಂತರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆಯನ್ನು ಪ್ರಸ್ತುತಪಡಿಸಿದರು. ಇದು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಂಭವಿಸುವ ದೇಶದ ವಿವಿಧ ರೀತಿಯ ಆರ್ಥಿಕ ಪ್ರಗತಿ ಮತ್ತು ನ್ಯೂನತೆಗಳ ಅತಿದೊಡ್ಡ ಸಂಖ್ಯಾಶಾಸ್ತ್ರೀಯ ಮತ್ತು ವಿಶ್ಲೇಷಣಾತ್ಮಕ ಸಂಕಲನವಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಭಾರತದ ಆರ್ಥಿಕತೆಯು ಮಂದಗತಿಯಲ್ಲಿ ಸಾಗುತ್ತಿದೆ ಎಂದು ಹೇಳಲಾಗುತ್ತಿರುವುದರಿಂದ ಆರ್ಥಿಕ ಸಮೀಕ್ಷೆ 2020 ವಿಶೇಷ ಮತ್ತು ಮಹತ್ವದ್ದಾಗಿದೆ. ಆರ್ಥಿಕ ಸಮೀಕ್ಷೆಯಲ್ಲಿ ಈಗಾಗಲೇ ನಿರೀಕ್ಷಿತ ಹಾದಿಯಲ್ಲಿರುವ 2019-20ನೇ ಸಾಲಿನ ಸುಧಾರಿತ 5% ಜಿಡಿಪಿ ಬೆಳವಣಿಗೆ ದರವನ್ನು ಉಳಿಸಿಕೊಳ್ಳುವುದರ ಹೊರತಾಗಿ ಅರ್ಥಿಕತೆಗೆ ಪೂರಕವಾದ ಹಲವು ಶ್ರಮದಾಯಕ ಅಂಶಗಳನ್ನು ಕಾಣಬಹುದಾಗಿದೆ. ಶೀಘ್ರದಲ್ಲೇ ಭಾರತದ ಆರ್ಥಿಕತೆಯು ಹೊಸ ಬೆಳವಣಿಗೆಯನ್ನು ಕಂಡುಕೊಳ್ಳುತ್ತದೆ ಮತ್ತು 2020-21ರಲ್ಲಿ 6 ರಿಂದ 6.5 ರಷ್ಟು ಬೆಳವಣಿಗೆಯ ದರವನ್ನು ಸಾಧಿಸುವ ನಿರೀಕ್ಷೆಯನ್ನು ಕೂಡ ಮೂಡಿಸಿದೆ.

ಆರ್ಥಿಕ ಸಮೀಕ್ಷೆ 2020 ಹೇಳುವಂತೆ ಆರ್ಥಿಕ ಬಲವರ್ಧನೆಯ ದೃಷ್ಟಿಯಿಂದ ಭಾರತದ ಆರ್ಥಿಕತೆಯು ಉತ್ತಮ ಪ್ರದರ್ಶನ ನೀಡಿದೆ, ಅಲ್ಲದೆ ಶೇಕಡಾ 3.3ರ ಮಿತಿಯಲ್ಲೇ ಇದೆ. ಚಿಲ್ಲರೆ ಹಣದುಬ್ಬರದ ವಿಷಯದಲ್ಲಿ (ಸಿಪಿಐ) 4.1 ಶೇಕಡಾ ಮತ್ತು ಸಗಟು ಹಣದುಬ್ಬರದ ವಿಷಯದಲ್ಲಿ (ಡಬ್ಲ್ಯುಪಿಐ) ಕೇವಲ 1.9 ಪ್ರತಿಶತದಷ್ಟು ನಿಯಂತ್ರಣ ಆಗಿರುವ ಸ್ಥಿತಿಯನ್ನು ಸಮೀಕ್ಷೆಯು ಪ್ರಮುಖವಾಗಿ ತಿಳಿಸಿದೆ. ಇದಲ್ಲದೆ ಸಮೀಕ್ಷೆಯು ದೇಶದ ಪಾವತಿ ಸಮತೋಲನವು ಉತ್ತಮ ಸ್ಥಾನದಲ್ಲಿ ಕಾಯ್ದುಕೊಂಡಿರುವುದನ್ನು ಹೇಳಿದೆ. ಇದು ಆಮದು ಸಂಕಲನ ಮತ್ತು ಎಫ್ ಡಿಐ, ಎಫ್ಐಐ ಹಾಗೂ ಭಾರತದ ಡಯಾಸ್ಪೊರಾದ 1.75 ಕೋಟಿಗಳ ಹಣ ರವಾನೆಯಿಂದಾಗಿ ಗಮನಾರ್ಹವಾದ ಸುಧಾರಣೆಯಾಗಿದೆ. ಪ್ರಸಕ್ತ ವರ್ಷದ ಮೊದಲಾರ್ಧದಲ್ಲಿ ಹಣ ರವಾನೆ 38.4 ಶತಕೋಟಿ ಅಮೇರಿಕಾ ಡಾಲರನಷ್ಟನ್ನು ಮುಟ್ಟಿದೆ. 2020ರ ಜನವರಿ 10ರಂದು ಫೋರೆಕ್ಸ್ ಮೀಸಲು ದಾಖಲೆಯ 461.2 ಬಿಲಿಯನ್ ಅಮೇರಿಕಾ ಡಾಲರನಷ್ಟಾಗಿದೆ ಎಂಬುದು ಸಮೀಕ್ಷೆಯಿಂದ ಗೊತ್ತಾಗಲಿದೆ. ಆರ್ಥಿಕ ಸಮೀಕ್ಷೆಯ ಪ್ರಕಾರ ಚಾಲ್ತಿ ಖಾತೆ ಕೊರತೆಯನ್ನು 2ರಿಂದ 1.5ಕ್ಕೆ ಕಡಿಮೆಗೊಳಿಸಿದ್ದರಿಂದ ದೇಶದ ಪಾವತಿ ಸಮತೋಲನ (ಬಿಒಪಿ) ಪರಿಸ್ಥಿತಿಯಲ್ಲೂ ಸುಧಾರಣೆ ಕಂಡುಬಂದಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 8 ತಿಂಗಳಲ್ಲಿ ಎಫ್ ಡಿ ಐ ಒಳಹರಿವು 24.4 ಬಿಲಿಯನ್ ಯುಎಸ್ ಡಾಲರ್ ಆಗಿದೆ.

‌ಸಮೀಕ್ಷೆಯು ಭಾರತೀಯ ಆರ್ಥಿಕತೆಯಲ್ಲಿ ನಡೆದ ಎರಡು ಪ್ರಮುಖ ಗಮನಾರ್ಹ ಬೆಳೆವಣಿಗೆಯನ್ನು ಒಳಗೊಂಡಿದೆ. ಮೊದಲನೆಯದು ಒಟ್ಟು ಉದ್ಯೋಗದಲ್ಲಿ ಸಾಂಪ್ರದಾಯಿಕ ಉದ್ಯೋಗದ ಪ್ರಮಾಣ ಹೆಚ್ಚಾಗಿರುವುದು, ಇದು ಕಳೆದ 5 ವರ್ಷಗಳಲ್ಲಿ 17. 6ರಿಂದ 22. 5ಕ್ಕೆ ಏರಿದೆ ಮತ್ತು ದೇಶದ ಉದ್ಯೋಗ ಪರಿಸ್ಥಿತಿಯನ್ನು ಸಾಂಪ್ರದಾಯಿಕ ಉದ್ಯೋಗಗಳತ್ತ ಉತ್ತೇಜಿಸುವುದಕ್ಕೆ ನೆರವಾಗಲಿದೆ. ಎರಡನೆಯದಾಗಿ, ದೇಶದ ಷೇರು ಮಾರುಕಟ್ಟೆಗಳು ಈಗ ಹೊಸದಾಗಿ ಪ್ರವೇಶಿಸುವ ವ್ಯಾಪಾರ ಸಂಸ್ಥೆಗಳಿಗೆ ವೇದಿಕೆಯಾಗುತ್ತಿವೆ. ಪ್ರತಿ ಐದು ವರ್ಷಗಳಿಗೊಮ್ಮೆ ಷೇರು ಮಾರುಕಟ್ಟೆಗಳು ತಮ್ಮ ಪಟ್ಟಿಯ ಮೂರನೇ ಒಂದು ಭಾಗದಷ್ಟು ಕಂಪನಿಗಳನ್ನು ಬದಲಾಯಿಸುತ್ತಿವೆ ಮತ್ತು ಹೊಸ ಸಂಸ್ಥೆಗಳು, ತಂತ್ರಜ್ಞಾನಗಳು ಮತ್ತು ಉತ್ಪನ್ನಗಳ ಪಟ್ಟಿಗೆ ದಾರಿ ಮಾಡಿಕೊಡುತ್ತಿವೆ. ಈ ಬೆಳವಣಿಗೆಯನ್ನು ಉದಾರೀಕರಣದ ನಂತರದ ಷೇರು ಮಾರುಕಟ್ಟೆ ಯುಗ ಎಂದು ಸಮೀಕ್ಷೆಯು ಅಭಿಪ್ರಾಯಪಟ್ಟಿದೆ.

ಈ ಆರ್ಥಿಕ ಸಮೀಕ್ಷೆಯು ದೇಶದಲ್ಲಿ ನಡೆಯುತ್ತಿರುವ ಬೃಹತ್ ಉದ್ಯಮಶೀಲತೆಯ ಪ್ರಗತಿ ಬಗ್ಗೆ ಗಮನಾರ್ಹವಾದ ಅಂಶವನ್ನು ಒಳಗೊಂಡಿದೆ.

ವಿಶ್ವಬ್ಯಾಂಕ್ ಪ್ರಕಾರ ಹೊಸ ಸಂಸ್ಥೆಗಳ ಸಂಖ್ಯೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಭಾರತದಲ್ಲಿ 2014ರಲ್ಲಿ ಇದ್ದ 70,000 ಹೊಸ ಸಂಸ್ಥೆಗಳಿಗೆ ಹೋಲಿಸಿದರೆ 2018ರಲ್ಲಿ ಸುಮಾರು 124,000 ಹೊಸ ಸಂಸ್ಥೆಗಳು ಹುಟ್ಟುಕೊಂಡಿವೆ. 2006-14ರಲ್ಲಿ ರಚಿಸಲಾದ ಹೊಸ ಸಂಸ್ಥೆಗಳ ಸಂಖ್ಯೆಯಲ್ಲಿ ಇದ್ದ 3.8% ಬೆಳವಣಿಗೆ ದರಕ್ಕೆ ಪ್ರತಿಯಾಗಿ 2014-18ರ ಅವಧಿಯ ಬೆಳವಣಿಗೆ ದರವು 12.2%ಕ್ಕೆ ಏರಿದೆ. ಈ ಬಾರಿಯ ಆರ್ಥಿಕ ಸಮೀಕ್ಷೆ 2020ಯು "ಅಸೆಂಬಲ್ ಇನ್ ಇಂಡಿಯಾ ಫಾರ್ ವರ್ಲ್ಡ್" ಎಂಬ ಘೋಷಣೆಯೊಂದಿಗೆ ಬಂದಿದೆ. ಇದು ದೇಶದ ರಫ್ತು ವಲಯ ಹೆಚ್ಚಾಗಲಿದೆ ಎಂಬುದಕ್ಕೆ ಪೂರಕವಾಗಿದೆ. ರಫ್ತು ಮಾರುಕಟ್ಟೆ ಪಾಲು 2025ರ ವೇಳೆಗೆ ಸುಮಾರು 3.5% ಮತ್ತು 2030ರ ವೇಳೆಗೆ 6%ಕ್ಕೆ ಏರಿಸುವಷ್ಟು ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂಬುದು ಸಮೀಕ್ಷೆಯಿಂದ ಗೊತ್ತಾಗಲಿದೆ. ಭಾರತವು ಪ್ರಮುಖ ರಫ್ತುದಾರ ದೇಶವಾಗುವುದಕ್ಕೆ ಉತ್ತೇಜನ ನೀಡಲು ಸಮೀಕ್ಷೆಯು “ನೆಟ್ವರ್ಕ್ ಉತ್ಪನ್ನಗಳು” ಎಂಬ ವಿಶೇಷತೆ ಮತ್ತು ಪ್ರಮಾಣ ವಿಸ್ತರಣೆಯ ಮೇಲೆ ಕೇಂದ್ರೀಕರಿಸಿದೆ.

ಮುಂದಿನ ಐದು ವರ್ಷಗಳಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ಹೊಂದಿರುವ ನರೇಂದ್ರ ಮೋದಿ ಸರ್ಕಾರಕ್ಕೆ ಪೂರಕವಾಗಿ ಸಮೀಕ್ಷೆ ಬಂದಿದೆ. ಆದ್ದರಿಂದ ಆರ್ಥಿಕ ಸಮೀಕ್ಷೆಯು ದೇಶದಲ್ಲಿ ಹೊಚ್ಚ ಹೊಸ ‘ವ್ಯವಹಾರ ಪೂರಕ’ ವಾತಾವರಣವನ್ನು ರೂಪಿಸಲು ಸಹಾಯಕಾರಿಯಾಗಿದೆ. 2014ರಲ್ಲಿ 142ನೇ ವ್ಯಾಪಾರ ಶ್ರೇಯಾಂಕ ಹೊಂದಿರುವ ಭಾರತವು ದಾಖಲೆ ಪ್ರಮಾಣದಲ್ಲಿ ಸುಧಾರಣೆ ಕಂಡು ಈಗ 63ನೇ ಶ್ರೇಯಾಂಕಕ್ಕೆ ಬಂದಿದೆ. ಆದುದರಿಂದ ಆರ್ಥಿಕ ಸಮೀಕ್ಷೆ 2020ರ ವಿಷಯವು ಮಾರುಕಟ್ಟೆಗಳನ್ನು ಸಕ್ರಿಯಗೊಳಿಸುವ, 'ವ್ಯವಹಾರ ಪರ' ನೀತಿಗಳನ್ನು ಉತ್ತೇಜಿಸುವ ಮತ್ತು ಭಾರತೀಯ ಆರ್ಥಿಕತೆಯಲ್ಲಿ 'ನಂಬಿಕೆಯನ್ನು' ಬಲಪಡಿಸುವ ಅಂಶಗಳನ್ನು ಒಳಗೊಂಡಿದೆ.




ಸ್ಕ್ರಿಪ್ಟ್: ಮನೋಹರ್ ಮನೋಜ್, ಪತ್ರಕರ್ತ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ