ಸಂಸತ್ತಿನಲ್ಲಿ ಈ ವಾರ
ವಿದೇಶಿ ಹೂಡಿಕೆದಾರರು ಭಾರತದಲ್ಲಿ ವಿಶ್ವಾಸ ತೋರಿಸುತ್ತಲೇ ಇದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2020-21ರ ಚರ್ಚೆಗಳಿಗೆ ಉತ್ತರಿಸಿದ ಅವರು, ಈಗ ಬೆಳವಣಿಗೆಯ ಹೂಡಿಕೆಗೆ ಬ್ಯಾಂಕುಗಳು ಉತ್ತಮವಾಗಿ ಸಜ್ಜುಗೊಂಡಿವೆ ಎಂದು ತಿಳಿಸಿದರು.. ದೇಶದ ಆರ್ಥಿಕತೆಯು ಮುಂದುವರಿಯುತ್ತಿದೆ ಎಂದು ತಿಳಿಸಿ, 2024-25ರ ವೇಳೆಗೆ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಒಂದು ಲಕ್ಷ ಕೋಟಿ ರೂಪಾಯಿಗಳಷ್ಟು ಹೂಡಿಕೆ ಮಾಡುತ್ತದೆ ಎಂದು ಪ್ರತಿಪಾದಿಸಿದರು. GST ಆದಾಯ ಸಂಗ್ರಹದಲ್ಲಿ ಸ್ಥಿರ ಬೆಳವಣಿಗೆ ಇದೆ ಎಂದು ಹಣಕಾಸು ಸಚಿವರು ಹೇಳಿದರು. ದೇಶದ ನಾಮಮಾತ್ರ ಜಿಡಿಪಿ 2014-15ರಲ್ಲಿ ಎರಡು ಟ್ರಿಲಿಯನ್ ಡಾಲರ್‌ನಿಂದ 2019-20ರ ವೇಳೆಗೆ 2.9 ಟ್ರಿಲಿಯನ್ ಡಾಲರ್‌ಗೆ ಏರಿದೆ ಎಂದು ಅವರು ಹೇಳಿದರು. ಯುವಕರ ಸುಧಾರಣೆಗೆ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆಯೆಂದು ಅವರು ಹೇಳಿದರು. ಭಾರತದ ಆರ್ಥಿಕತೆಯ ಬಗ್ಗೆ ಸಕಾರಾತ್ಮಕ ವಿಶ್ವಾಸವಿದ್ದು, ಅದನ್ನು ಬಲಪಡಿಸಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸಚಿವರು ಹೇಳಿದರು.
ನೂತನ ಕೊರೊನಾ ವೈರಸ್ ಬೆದರಿಕೆಯನ್ನು ಎದುರಿಸಲು ದೇಶವು ಸಿದ್ಧವಾಗಿದೆ ಎಂದು ಆರೋಗ್ಯ ಸಚಿವ ಡಾ. ಹರ್ಷ್ವರ್ಧನ್ ಹೇಳಿದ್ದಾರೆ. ಲೋಕಸಭೆಯಲ್ಲಿ ಈ ಕುರಿತು ಮಾತನಾಡಿದ ಅವರು, ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಪರಿಸ್ಥಿತಿಯ ಬಗ್ಗೆ ಸರ್ಕಾರ ನಿಗಾ ವಹಿಸುತ್ತಿದೆ ಎಂದು ತಿಳಿಸಿದರು. ಕೊರೊನಾವೈರಸ್ ಪರಿಸ್ಥಿತಿಯನ್ನು ಪರಿವೀಕ್ಷಿಸಲು ಸರ್ಕಾರ ಸಮಿತಿಯೊಂದನ್ನು ರಚಿಸಿದೆಯೆಂದು ಸಚಿವರು ಹೇಳಿದರು. ತಮ್ಮ ಸಚಿವಾಲಯವು ಪ್ರತಿದಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮತ್ತು ಪರಿಶೀಲನೆ ಮಾಡುತ್ತಿದ್ದು, ಇಲ್ಲಿಯವರೆಗೆ 1,118 ವಿಮಾನಗಳನ್ನು ತಪಾಸಣೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ವುಹಾನ್‌ನ ಭಾರತೀಯ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ಏರ್ ಇಂಡಿಯಾ ಮತ್ತು ವೈದ್ಯಕೀಯ ಸಿಬ್ಬಂದಿಗೆ ಡಾ.ಹರ್ಷ್ ವರ್ಧನ್ ಧನ್ಯವಾದ ಅರ್ಪಿಸಿದರು. ಭಾರತದಾದ್ಯಂತ ಕರೋನ ವೈರಸ್‌ಗಾಗಿ ಕ್ಲಿನಿಕಲ್ ಮಾದರಿಗಳನ್ನು ಪರೀಕ್ಷಿಸಲು ಸರ್ಕಾರ ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆಯೆಂದು ಸಚಿವರು ರಾಜ್ಯಸಭೆಗೆ ತಿಳಿಸಿದರು. ಆಯುಷ್ಮಾನ್ ಭಾರತ್-ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ ಕುರಿತು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ. ವರ್ಧನ್, ಈ ಯೋಜನೆಯು ದ್ವಿತೀಯ ಮತ್ತು ತೃತೀಯ ಆರೈಕೆ ಆಸ್ಪತ್ರೆಗೆ, ಪ್ರತಿ ಕುಟುಂಬಕ್ಕೆ ಐದು ಲಕ್ಷ ರೂಪಾಯಿಗಳಂತೆ, ಬಡ ಮತ್ತು ದುರ್ಬಲ ಕುಟುಂಬಗಳಿಗೆ ಸುಮಾರು 10.74 ಕೋಟಿ ಒದಗಿಸುತ್ತದೆ ಎಂದು ತಿಳಿಸಿದರು.
2019ರ ನವೆಂಬರ್ 9 ರಿಂದ 2020ರ ಜನವರಿ 31ರ ನಡುವೆ ಶ್ರೀ ಕರ್ತಾರ್‌ಪುರ್ ಸಾಹಿಬ್‌ನಲ್ಲಿ ಪೂಜೆ ಸಲ್ಲಿಸಲು ಒಟ್ಟು 44,951 ಯಾತ್ರಾರ್ಥಿಗಳು ಕರ್ತಾರ್‌ಪುರ ಕಾರಿಡಾರ್ ಮೂಲಕ ಪ್ರಯಾಣಿಸಿದ್ದಾರೆ ಎಂದು ಗೃಹ ವ್ಯವಹಾರಗಳ ಸಚಿವ ಜಿ. ಕಿಶನ್ ರೆಡ್ಡಿ ಲೋಕಸಭೆಗೆ ತಿಳಿಸಿದರು. ಅವರ ಸಹೋದ್ಯೋಗಿ ಸಚಿವ ನಿತ್ಯಾನಂದ ರೈ 2020ರ ಜನವರಿ 31ರವರೆಗೆ 35,40,267 ಸಾಗರೋತ್ತರ ನಾಗರಿಕರ (OCI) ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ಲೋಕಸಭೆಗೆ ತಿಳಿಸಿದರು. 1955ರ ಪೌರತ್ವ ಕಾಯ್ದೆಯನ್ವಯ OCI ಕಾರ್ಡ್ ರದ್ದುಗೊಳಿಸಬಹುದು ಎಂದು ಸಚಿವರು ಹೇಳಿದರು. 2014 ಡಿಸೆಂಬರ್ 31ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಪ್ರವೇಶಿಸಿರುವ ಮತ್ತು ಯಾರು ವಿದೇಶಿಯರ ಕಾಯ್ದೆ, 1946 ಮತ್ತು ಪಾಸ್‌ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯ್ದೆ, 1920 ಮತ್ತು ಅವುಗಳ ಅಡಿಯಲ್ಲಿ ಮಾಡಿದ ನಿಯಮಗಳು/ ಆದೇಶಗಳಂತೆ ದಂಡ ನಿಬಂಧನೆಗಳ ವಿನಾಯಿತಿ ಪಡೆದಿದ್ದಾರೋ, ಅಂತಹ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ವಲಸಿಗರಿಗೆ ಪೌರತ್ವ ನೀಡಲು ಅನುಕೂಲವಾಗುವಂತೆ 2019ರ ಪೌರತ್ವ ತಿದ್ದುಪಡಿ ಕಾಯ್ದೆ ಉದ್ದೇಶಿಸಿದೆ ಎಂದು ಸಚಿವರು ಹೇಳಿದರು.
ದೇಶದಲ್ಲಿ ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ, ಹವಾಮಾನ ಬದಲಾವಣೆ ಸಚಿವಾಲಯವು ಐವತ್ತು ಮೈಕ್ರಾನ್‌ಗಿಂತ ಕಡಿಮೆ ದಪ್ಪದ ವರ್ಜಿನ್ ಅಥವಾ ಮರುಬಳಕೆಯ ಪ್ಲಾಸ್ಟಿಕ್‌ನಿಂದ ಮಾಡಿದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ನಿಷೇಧಿಸುವ ಅಧಿಸೂಚನೆ ನೀಡಿದೆಯೆಂದು ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು. ಆದಾಗ್ಯೂ, ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆಯಿಂದಾಗುವ ಹೆಚ್ಚಿನ ಪರಿಸರ ವೆಚ್ಚವನ್ನು ಗಮನಿಸಿ, ವಿಶೇಷವಾಗಿ ಮಣ್ಣು, ಜಲಮೂಲಗಳು ಮತ್ತು ಸಮುದ್ರ ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮವನ್ನು ಪರಿಗಣಿಸಿ, 2022ರ ವೇಳೆಗೆ ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇದ ಮಾಡುವ ಭಾರತದ ಪ್ರತಿಜ್ಞೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ್ದಾರೆ.
ಹೊಸ ಕರಡು ರಾಷ್ಟ್ರೀಯ ಪ್ರವಾಸೋದ್ಯಮ ನೀತಿಯನ್ನು ರೂಪಿಸಲಾಗಿದ್ದು, ಅದನ್ನು ಈಗ ಪರಿಶೀಲಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ತಿಳಿಸಿದ್ದಾರೆ. ಉದ್ಯೋಗ ಸೃಷ್ಟಿ ಮತ್ತು ಪ್ರವಾಸೋದ್ಯಮದಲ್ಲಿ ಸಮುದಾಯದ ಸಹಭಾಗಿತ್ವದಂತಹ ಪ್ರಮುಖ ಅಂಶಗಳು ಹೊಸ ನೀತಿಯಲ್ಲಿ ಸೇರಿದೆಯೆಂದು ಅವರು ಹೇಳಿದರು. ಇತರ ವಿಷಯಗಳ ಜೊತೆಗೆ, ಭಾರತೀಯರು ತಮ್ಮ ದೇಶವನ್ನು ಅನ್ವೇಷಿಸಲು ಪ್ರೋತ್ಸಾಹಿಸುವುದೂ ಸೇರಿ, ಜಾಗತಿಕ ಪ್ರಯಾಣಿಕರಿಗೆ ‘ಕಡ್ಡಾಯ ಅನುಭವ ಮತ್ತು ಪರಿವರ್ತನೆಯ ತಾಣ’ವಾಗಿ ಭಾರತವನ್ನು ಅಭಿವೃದ್ಧಿಪಡಿಸುವ ದೃಷ್ಟಿಕೋನವನ್ನು ಈ ನೀತಿಯು ಪ್ರತಿಪಾದಿಸುತ್ತದೆ.
ಉಭಯ ಸದನಗಳು ಮಧ್ಯ-ಅಧಿವೇಶನದ ಬಿಡುವಿನಲ್ಲಿವೆ. ಬಜೆಟ್ ಅಧಿವೇಶನದ ಎರಡನೇ ಭಾಗವನ್ನು ಚರ್ಚಿಸಲು, ಮಾರ್ಚ್ ಮೊದಲ ವಾರದಲ್ಲಿ ಸಂಸತ್ತು ಸಭೆ ಸೇರಲಿದೆ.
ಲೇಖನ: ವಿ.ಮೋಹನ್ ರಾವ್, ಪತ್ರಕರ್ತ
Comments
Post a Comment