ಭಾರತ ಮತ್ತು ತುರ್ಕಮೆನಿಸ್ತಾನ್ ರಕ್ಷಣಾ ಒಪ್ಪಂದಗಳು

ಸಚಿವ ಸಂಪುಟದ ಉಪಾಧ್ಯಕ್ಷ ಮತ್ತು ತುರ್ಕಮೆನಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ರಶೀದ್ ಮೆರೆಡೋವ್ ಅವರು ಭಾರತಕ್ಕೆ ಒಂದು ಚಿಕ್ಕ ಭೇಟಿ ನೀಡಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರ ಜೊತೆ ಮಾತುಕತೆ ನಡೆಸಿದರು. ಉಭಯ ನಾಯಕರು ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚಿಸಿದರು. ಪ್ರಾದೇಶಿಕ ವಿಷಯಗಳ ಬಗ್ಗೆ ಮಹತ್ವದ ಚರ್ಚೆಗಳು ನಡೆದವೆಂದು ಭಾರತೀಯ ವಿದೇಶಾಂಗ ಸಚಿವರು ತಿಳಿಸಿದ್ದಾರೆ.

1990ರ ದಶಕದ ಆರಂಭದಲ್ಲಿ ಯುಎಸ್ಎಸ್ಆರ್ ನಿಂದ ಸ್ವಾತಂತ್ರ್ಯ ಪಡೆದ ಮಧ್ಯ ಏಷ್ಯಾದ ಐದು ಗಣರಾಜ್ಯಗಳ ಪೈಕಿ ತುರ್ಕಮೆನಿಸ್ತಾನ್ ಕೂಡ ಒಂದು. ಭಾರತವು ಮಧ್ಯ ಏಷ್ಯಾವನ್ನು ತನ್ನ ವಿಸ್ತೃತ ನೆರೆಹೊರೆ ರಾಷ್ಟ್ರ ಎಂದು ಪರಿಗಣಿಸುತ್ತದೆ. ಈ ಪ್ರದೇಶದಲ್ಲಿನ ತುರ್ಕಮೆನಿಸ್ತಾನದ ವಿಶಿಷ್ಟ ಭೌಗೋಳಿಕ ಸ್ಥಳವು ಅಂತರ-ಪ್ರಾದೇಶಿಕ ತೊಡಗಿಸಿಕೊಳ್ಳುವಿಕೆಗಳಲ್ಲಿ ಪ್ರಮುಖ ದೇಶವಾಗಿದೆ. ದಕ್ಷಿಣ ಏಷ್ಯಾ, ಮಧ್ಯ ಏಷ್ಯಾ ಮತ್ತು ಪಶ್ಚಿಮ ಏಷ್ಯಾವನ್ನು ಈ ದೇಶವು ಒಟ್ಟಿಗೆ ಬೆಸೆಯುತ್ತದೆ, ಏಕೆಂದರೆ ಇದರ ದಕ್ಷಿಣದಲ್ಲಿ ಅಫ್ಘಾನಿಸ್ತಾನ ಮತ್ತು ಪಶ್ಚಿಮದಲ್ಲಿ ಇರಾನ್ ಇದೆ. ಮಧ್ಯ ಏಷ್ಯಾದ ನೆರೆಹೊರೆಯ ದೇಶಗಳೆಂದರೆ ಕಝಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್. ತುರ್ಕಮೆನಿಸ್ತಾನ್ ಕ್ಯಾಸ್ಪಿಯನ್ ಸಮುದ್ರದ ಕರಾವಳಿಯನ್ನು ಹೊಂದಿದೆ ಮತ್ತು ಇದು ಯುರೇಷಿಯಾ ಮತ್ತು ಯುರೋಪಿಗೆ ಒಂದು ಹೆಬ್ಬಾಗಿಲನ್ನು ಒದಗಿಸುತ್ತದೆ. ಸಂಪರ್ಕವನ್ನು ಸುಧಾರಿಸುವುದು ತುರ್ಕಮೆನಿಸ್ತಾನಕ್ಕೆ ಆದ್ಯತೆಯಾಗಿದೆ. 2016ರಲ್ಲಿ ತುರ್ಕಮೆನಿಸ್ತಾನವು ಸುಮಾರು 2.3 ಬಿಲಿಯನ್ ಅಮೇರಿಕನ್ ಡಾಲರ್ ವೆಚ್ಚದೊಂದಿಗೆ ಈ ಪ್ರದೇಶದ ಅತಿದೊಡ್ಡ ವಿಮಾನ ನಿಲ್ದಾಣವನ್ನು ನಿರ್ಮಿಸಿದೆ.

ಜನಸಂಖ್ಯಾಶಾಸ್ತ್ರದ ಪ್ರಕಾರ ತುರ್ಕಮೆನಿಸ್ತಾನ್ ಸುಮಾರು 6 ಮಿಲಿಯನ್ ಜನರನ್ನು ಹೊಂದಿರುವ ಸಣ್ಣ ದೇಶವೇ ಆಗಿರಬಹುದು ಆದರೆ ಇದು ಗಮನಾರ್ಹ ಆರ್ಥಿಕ ಹಿಡಿತ ಹೊಂದಿರುವ ದೇಶವಾಗಿದೆ. ಇದು ವಿಶ್ವದ ನಾಲ್ಕನೇ ಅತಿದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಹೊಂದಿರುವ, ತೈಲ, ಗಂಧಕ ಮತ್ತು ಇತರ ಖನಿಜಗಳು ಸಿಗುವ ದೇಶವಾಗಿದೆ. ವಿಶ್ವ ಬ್ಯಾಂಕ್ ತುರ್ಕಮೆನಿಸ್ತಾನದ ಜಿಡಿಪಿ ಸುಮಾರು 40.5 ಬಿಲಿಯನ್ ಅಮೇರಿಕನ್ ಡಾಲರ್ ಎಂದು ಅಂದಾಜಿಸಿದೆ. ಅಧ್ಯಕ್ಷ ಗುರ್ಬಾಂಗುಲಿ ಬರ್ಡಿಮುಹಮೆಡೋವ್ ಅವರ ಆಡಳಿತವು ದೇಶದ ಆರ್ಥಿಕತೆಯನ್ನು ವೈವಿಧ್ಯಗೊಳಿಸಲು ಪ್ರಯತ್ನಿಸುತ್ತಿದೆ. ಅಲ್ಲದೆ ತೈಲ, ಅನಿಲ, ಕೃಷಿ, ನಿರ್ಮಾಣ, ಸಾರಿಗೆ ಮತ್ತು ಸಂವಹನಗಳಂತಹ ಸಾಂಪ್ರದಾಯಿಕ ಕ್ಷೇತ್ರಗಳು ಹಾಗೂ ರಾಸಾಯನಿಕ, ದೂರಸಂಪರ್ಕ ಮತ್ತಿತರ ಹೈಟೆಕ್ ಎನ್ನಬಹುದಾದ ಹೊಸ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಚಟುವಟಿಕೆಗಳ ಬಗ್ಗೆ ಗಮನ ಹರಿಸಲಾಗಿದೆ. ತುರ್ಕಮೆನಿಸ್ತಾನವು 2019ರಿಂದ 2025ರವರೆಗಿನ ಡಿಜಿಟಲ್ ಎಕಾನಮಿ ಕಾರ್ಯಕ್ರಮವನ್ನು ಹಂತಹಂತವಾಗಿ ಅನುಷ್ಠಾನಗೊಳಿಸುತ್ತಿದೆ.

ತುರ್ಕಮೆನಿಸ್ತಾನ್ ಜಾಗತಿಕ ಮಟ್ಟದಲ್ಲಿ ಒಪ್ಪಂದ ಮಾಡಿಕೊಳ್ಳುವಾಗ 'ಶಾಶ್ವತ ತಟಸ್ಥತೆ' ನೀತಿಯನ್ನು ಅನುಸರಿಸುತ್ತಿದೆ. ಈ ನೀತಿಯನ್ನು ಯುಎನ್ ಜನರಲ್ ಅಸೆಂಬ್ಲಿ 1995ರಲ್ಲಿ ಅನುಮೋದಿಸಿದೆ. ಭಾರತವು ನಿರ್ಣಯದ ಸಹ-ಪ್ರಾಯೋಜಕರಾಗಿದ್ದು, ಪ್ರಸ್ತುತ ಅಶ್ಗಾಬತ್ ತನ್ನ 25 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.

ಅದರ ವಿಶಿಷ್ಟವಾದ ಭೌಗೋಳಿಕ ಸ್ಥಳ ಮತ್ತು ಆರ್ಥಿಕ ಭವಿಷ್ಯದ ಕಾರಣಗಳಿಂದಾಗಿ ಮಧ್ಯ ಏಷ್ಯಾದ ಜೊತೆ ಭಾರತ ಮಾಡಿಕೊಳ್ಳುವ ಒಪ್ಪಂದಗಳಲ್ಲಿ ತುರ್ಕಮೆನಿಸ್ತಾನವು ಮಹತ್ವದ ಪಾತ್ರವಹಿಸುತ್ತಿದೆ. ಎರಡು ದೇಶಗಳು ಸಹಸ್ರಮಾನಗಳಿಂದ ಆಳವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ವಿನಿಮಯ ಮಾಡಿಕೊಳ್ಳುತ್ತಿವೆ. ಪ್ರಸಿದ್ಧ ‘ಸಿಲ್ಕ್ ರೂಟ್’ ಎರಡು ದೇಶಗಳ ನಾಗರಿಕತೆಯನ್ನು ಬೆಸೆದಿದೆ. ಈ ಪ್ರದೇಶದ ಸಂತರು ಮತ್ತು ವಿದ್ವಾಂಸರು ಭಾರತಕ್ಕೆ ಬಂದಿದ್ದರಿಂದ ಮಧ್ಯಕಾಲೀನ ಅವಧಿಯಲ್ಲಿ ಈ ಸಂಪರ್ಕಗಳು ಪ್ರಬಲವಾಗಿದ್ದವು. ಬಯಬಾನಿ ಪ್ರಸಿದ್ಧ ಸೂಫಿ ಸಂತರಾದ ಷಾ ತುರ್ಕಮನ್ 13ನೇ ಶತಮಾನದಲ್ಲಿ ಭಾರತದಲ್ಲಿ ವಾಸಿಸುತ್ತಿದ್ದರು.‌ ಇವರ ಗೌರವಾರ್ಥವಾಗಿ 17ನೇ ಶತಮಾನದಲ್ಲಿ ದೆಹಲಿಯ ಪ್ರಸಿದ್ಧ ಹೆಗ್ಗುರುತಾದ ‘ತುರ್ಕಮನ್ ಗೇಟ್’ ಅನ್ನು ನಿರ್ಮಿಸಲಾಯಿತು. ಚಕ್ರವರ್ತಿ ಅಕ್ಬರ್ ಅವರ ಮಾರ್ಗದರ್ಶಕರಾದ ಬೈರಾಮ್ ಖಾನ್ ಅವರು ತುರ್ಕಮೆನ್ ಮೂಲದವರು.

ಭಾರತ ಮತ್ತು ತುರ್ಕಮೆನಿಸ್ತಾನ್ ದೇಶಗಳು ಸೌಹಾರ್ದಯುತ ರಾಜಕೀಯ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಆನಂದಿಸುತ್ತವೆ. ಎರಡೂ ದೇಶಗಳ ನಡುವೆ ಉನ್ನತ ರಾಜಕೀಯ ಮಟ್ಟದಲ್ಲಿ ಭೇಟಿಗಳ ವಿನಿಮಯ ನಡೆದಿದೆ. ಅಧ್ಯಕ್ಷ ಗುರ್ಬಾಂಗುಲಿ ಬರ್ಡಿಮುಹಮೆಡೋವ್ 2010ರ ಮೇನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ 2015ರ ಜುಲೈನಲ್ಲಿ ತುರ್ಕಮೆನಿಸ್ತಾನಕ್ಕೆ ಭೇಟಿ ನೀಡಿದ್ದರು ಹಾಗೂ ಇಬ್ಬರ ನಡುವೆ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಪ್ರಧಾನಿ ಮೋದಿ 2015ರಲ್ಲಿ ಅಲ್ಲಿಗೆ ಭೇಟಿ ನೀಡಿದಾಗ ಸಾಂಪ್ರದಾಯಿಕ ಔಷಧಿ ಮತ್ತು ಯೋಗ ಕೇಂದ್ರವನ್ನು ಉದ್ಘಾಟಿಸಿದರು.

ಸೌಹಾರ್ದಯುತ ಸಂಬಂಧಗಳು ಮತ್ತು ಜನಾಭಿಪ್ರಾಯ ಇರುವ ಪ್ರಬಲವಾದ ಜನರಿದ್ದರೂ ದ್ವಿಪಕ್ಷೀಯ ಆರ್ಥಿಕ ಸಂಬಂಧಗಳು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಇರಲಿಲ್ಲ. ಎರಡು ದೇಶಗಳ ನಡುವೆ 2018-19ರಲ್ಲಿ ಸುಮಾರು 66 ಮಿಲಿಯನ್ ಅಮೇರಿಕನ್ ಡಾಲರ್ ವ್ಯಾಪಾರ ಆಗಿತ್ತು. ಎರಡೂ ದೇಶಗಳಲ್ಲಿ ಲಭ್ಯವಿರುವ ಅವಕಾಶಗಳ ಬಗ್ಗೆ ಸರಿಯಾದ ಮಾಹಿತಿಯ ಕೊರತೆ ಹಾಗೂ ಭಾರತ ಮತ್ತು ಮಧ್ಯ ಏಷ್ಯಾದ ನಡುವೆ ನೇರ ಭೂಸಾರಿಗೆ ಲಭ್ಯವಿಲ್ಲದಿರುವುದು ಪ್ರಮುಖ ಅಡಚಣೆ ಎಂದು ಪರಿಗಣಿಸಲಾಗಿದೆ. ಅಫ್ಘಾನಿಸ್ತಾನದಲ್ಲಿ ಇರುವ ಅಸ್ಥಿರತೆಯು ದಕ್ಷಿಣ ಏಷ್ಯಾ-ಮಧ್ಯ ಏಷ್ಯಾ ಸಂಬಂಧಗಳಲ್ಲಿ ಪ್ರಮುಖ ಅಡಚಣೆಯಾಗಿದೆ. ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತರುವಲ್ಲಿ ಎರಡೂ ದೇಶಗಳು ಒಗ್ಗಟ್ಟಾಗಿವೆ.

ಇದೆಲ್ಲದರ ನಡುವೆ ಇತ್ತೀಚಿಗೆ ಆಗುತ್ತಿರುವ ಬೆಳವಣಿಗೆಗಳು ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿಸುವ ನಿರೀಕ್ಷೆಯನ್ನು ವೃದ್ಧಿಸಿವೆ. ಭಾರತವು ಇರಾನಿನ ಚಬಹಾರ್ ಬಂದರಿನಲ್ಲಿ ಹೂಡಿಕೆ ಮಾಡುತ್ತಿದೆ. ತುರ್ಕಮೆನಿಸ್ತಾನ್ ಮತ್ತು ಕಝಕಿಸ್ತಾನ್ ದೇಶಗಳು ಈಗಾಗಲೇ ಇರಾನಿಗೆ ರೈಲು ಸಂಪರ್ಕವನ್ನು ಆರಂಭಿಸಿವೆ. ಚಬಹಾರ್ ಬಂದರನ್ನು ಇರಾನಿನ ರೈಲು ಜಾಲದೊಂದಿಗೆ ಸಂಪರ್ಕಿಸುವುದರಿಂದ ತುರ್ಕಮೆನಿಸ್ತಾನ್ ಮತ್ತು ಮಧ್ಯ ಏಷ್ಯಾದೊಂದಿಗೆ ಭಾರತದ ಸಂಪರ್ಕ ಸುಲಭ ಸಾಧ್ಯವಾಗಿದೆ. 2018ರಲ್ಲಿ ಭಾರತವು ಅಶ್ಗಬತ್ ಒಪ್ಪಂದಕ್ಕೆ ಸೇರ್ಪಡೆಗೊಂಡಿತು, ಇದು ಪಶ್ಚಿಮ ಏಷ್ಯಾದಿಂದ ಇರಾನ್ ಮತ್ತು ಓಮನ್ ಹಾಗೂ ಮಧ್ಯ ಏಷ್ಯಾದಿಂದ ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ನಡುವೆ ಅಂತರರಾಷ್ಟ್ರೀಯ ಸಾರಿಗೆ ಮತ್ತು ಸಾರಿಗೆ ಕಾರಿಡಾರ್ ಅನ್ನು ರೂಪಿಸಿದೆ.

ಈ ನಡುವೆ ಬಹಳ ದಿನಗಳಿಂದ ನಿರೀಕ್ಷಿಸಲಾಗಿದ್ದ ತುರ್ಕಮೆನಿಸ್ತಾನ್- ಅಫ್ಘಾನಿಸ್ತಾನ-ಪಾಕಿಸ್ತಾನ-ಭಾರತ (ಟ್ಯಾಪಿ) ನೈಸರ್ಗಿಕ ಅನಿಲ ಪೈಪ್ ಲೈನ್ ನಲ್ಲಿ ಪ್ರಗತಿಯಾಗಿದೆ. ಮಾರಾಟ ಮತ್ತು ಖರೀದಿ ಒಪ್ಪಂದಕ್ಕೆ 2012ರಲ್ಲಿ ಸಹಿ ಹಾಕಲಾಗಿತ್ತು. ತುರ್ಕಮೆನಿಸ್ತಾನ ಭೂಪ್ರದೇಶದ ಟ್ಯಾಪಿ ನಿರ್ಮಾಣದ ವೇಳಾಪಟ್ಟಿಯ ಪ್ರಕಾರ 2018ರಲ್ಲಿ ಅಫ್ಘಾನಿಸ್ತಾನದಲ್ಲಿ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂಡೋ-ತುರ್ಕಮೆನ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮುಂದಿನ ದಿನಗಳಲ್ಲಿ‌ ಇನ್ನಷ್ಟು ವಿಸ್ತರಿಸುವ ತಯಾರಿ ನಡೆದಿದೆ.
ಸ್ಕ್ರಿಪ್ಟ್: ಡಾ. ಅಥರ್ ಜಾಫರ್, ಸಿಐಎಸ್ ಕುರಿತ ಕಾರ್ಯತಂತ್ರದ ವಿಶ್ಲೇಷಕ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ